Sunday, October 13, 2024
Google search engine
Homeಇ-ಪತ್ರಿಕೆಋಣ ತೀರಿಸಲು ಅಯನೂರು ಅವರಿಗೆ ನಮ್ಮ ಬೆಂಬಲ

ಋಣ ತೀರಿಸಲು ಅಯನೂರು ಅವರಿಗೆ ನಮ್ಮ ಬೆಂಬಲ

ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಘೋಷಣೆ

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಯನೂರು ಮಂಜುನಾಥ್ ಅವರು ನಮ್ಮ ಪರವಾಗಿ ಸಾಕಷ್ಟು ಹೋರಾಟ ಮಾಡಿದ್ದು, ಅವರ ಋಣ ತೀರಿಸಲು ನಮ್ಮ ಸಂಘಟನೆ ವತಿಯಿಂದ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಘೋಷಿಸಿದ್ದಾರೆ.

ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಘಟನೆಯ ಗೌರವ ಅಧ್ಯಕ್ಷರು ಆಗಿದ್ದಾರೆ. ನಮ್ಮ ಈ ಪತ್ರಿಕಾಗೋಷ್ಠಿಯು ಯಾವುದೇ ರಾಜಕೀಯ ವಿಚಾರವನ್ನು ಒಳಗೊಂಡಿರುವುದಿಲ್ಲ. ಅಯನೂರು ಅವರಿಗೆ ಒಕ್ಕೊರಲ ಬೆಂಬಲ ವ್ಯಕ್ತಪಡಿಸುವುದಕ್ಕೆ ಮಾತ್ರ ಸೀಮಿತ. ಕೊರೋನಾದ ಸಂಕಷ್ಟದ ಸಂದರ್ಭದಲ್ಲಿ ಅವರು ನಮ್ಮ ಜೊತೆ ನಿಂತಿರುವುದು ಅವರ ಋಣ ನಮ್ಮ ಮೇಲಿದೆ. ೫ ತಿಂಗಳ ಗೌರವಧನ ದೊರಕಿಸುವಲ್ಲಿ  ಅವರ ಪಾತ್ರ ಪ್ರಮುಖವಾದದ್ದು. ಜೀವನ ನಿರ್ವಹಣೆ ಕಷ್ಟಕರವಾಗಿತ್ತು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ಸಂದರ್ಭದಲ್ಲಿ ೨ ವರ್ಷ ಅನ್ ಲೈನ್ ತರಗತಿ ನಡೆಸಲು ವ್ಯವಸ್ಥೆ ಮಾಡಿ ಸಹಕರಿಸಿದ್ದಾರೆ. ಇದು ದೇಶದ ಇತರ ಯಾವುದೇ ರಾಜ್ಯದಲ್ಲಿ ಜಾರಿಯಾಗಿರಲಿಲ್ಲ. ನಮಗೆ ಒಂದು ಗುರುತೆ ಇಲ್ಲದ ಸಂದರ್ಭದಲ್ಲಿ ಸರಕಾರದ ಪರಿಗಣನೆಗೆ  ತರುವಲ್ಲಿ ಅವರ ಪಾತ್ರ ಪ್ರಮುಖವಾದದು ಎಂದು ಶ್ಲಾಘಿಸಿದರು.

೮ ಸಾವಿರ ತಿಂಗಳ ವೇತನ ಇದ್ದ ಸಂದರ್ಭದಲ್ಲಿ ೧೩ ಸಾವಿರದವರೆಗೆ ಏರಿಕೆ ಮಾಡುವಲ್ಲಿ ಅಯನೂರು ಅವರ ಪಾತ್ರವಿದೆ. ನಂತರ ಅದು ಸುಮಾರು ೩೦ ಸಾವಿರದವರೆಗೂ ಏರಿಕೆಯಾಗಿದೆ. ವರ್ಷದಲ್ಲಿ ಬೋಧನೆಯ ಕಾಲಾವಧಿಯಾದ ೯ ತಿಂಗಳಿಗೆ ಮಾತ್ರ  ವೇತನವನ್ನು ಕೊಡಲಾಗುತ್ತಿತ್ತು. ಇವರ ಮಧ್ಯಪ್ರವೇಶದಿಂದಾಗಿ ವರ್ಷ ಪೂರ್ತಿ ಅಂದರೆ ೧೨ ತಿಂಗಳ ವೇತನ ದೊರಕುತ್ತಿದೆ. ಕೆಲವು ರಜೆಗಳು, ನಿವೃತ್ತಿಯ ನಂತರ ೫ ಲಕ್ಷ ಇಡಗಂಟು ಕೊಡಬೇಕೆಂಬ ಬೇಡಿಕೆ ಕುರಿತು ಹೋರಾಟದಲ್ಲಿ ಅವರು ಕೈಜೋಡಿಸುತ್ತಿದ್ದಾರೆ. ಇನ್ನು ಹತ್ತು ಹಲವು ಸಮಸ್ಯೆಗಳ ಕುರಿತು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸುವಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಆಡಳಿತ ಪಕ್ಷದ ಭಾಗವಾಗಿ ಸ್ಪರ್ಧಿಸುವುದರಿಂದ ಮುಂದೆ ಅವರು ಗೆದ್ದು ಬಂದರೆ ನಮಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿಯೂ ಕೂಡ ನಾವು ಅವರನ್ನು  ಬೆಂಬಲಿಸುತ್ತೇವೆ ಎಂದರು.

ಅವರದ್ದು ಈ ಹಿಂದೆ ಮತ್ತು ಈಗಿನ ಸಿದ್ದಾಂತ ಬೇರೆ ಬೇರೆಯಾಗಿದ್ದರೂ ಪಕ್ಷಾತೀತವಾಗಿ ನಮ್ಮ ಸಮಸ್ಯೆಯ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಅವರ ಪಾತ್ರ ಅನುಸರಣೀಯ. ಕಾಂಗ್ರೆಸ್ ಅಧಿಕಾರ ಬಂದು ೧ ವರ್ಷದಲ್ಲಿ ಕೆಲವು ಸೌಲಭ್ಯಗಳು ಒದಗಿಸಿದೆ. ಸಾಕಷ್ಟು ಬದಲಾವಣೆಯಾಗಬೇಕಿದ್ದು, ಇದು ಗಟ್ಟಿಗೊಳ್ಳಲು ನಾವು ಅವರಿಗೆ ಬೆಂಬಲವನ್ನು ಸೂಚಿಸುತ್ತೇವೆ. ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ನಮ್ಮ ಸಂಘಟನೆಯು ನೋಂದಾಯಿತ ಏಕೈಕ ಸಂಘಟನೆಯಾಗಿದೆ. ನಮ್ಮ ಸಂಘಟನೆಯಲ್ಲಿ ೪೫೦೦ ದಾಖಲಾತಿ ಹೊಂದಿದ ಸದಸ್ಯರಿದ್ದಾರೆ.  ಕಳೆದ ೨-೩ ಚುನಾವಣೆಗಳಲ್ಲಿ ಅಭ್ಯರ್ಥಿಯ ಗೆಲುವಿನಲ್ಲಿ ನಾವೇ ನಿರ್ಣಾಯಕ. ಅಯನೂರು ಹೊರತುಪಡಿಸಿ, ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿ ನಮಗೆ ನಂಬಿಕೆಗೆ ಅರ್ಹರಲ್ಲ. ಋಣದ ಪರವಾಗಿ ನಮ್ಮ ಬೆಂಬಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಒಸಿ ವಿಲೀನ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಕೃಷ್ಣ ಮಾತನಾಡಿ, ೮೭-೮೮ರಲ್ಲಿ ಪ್ರಾರಂಭಿಸಲಾಗಿದ್ದ ಜೆಒಸಿ ಕೋರ್ಸ್ ನಲ್ಲಿ ರಾಜ್ಯದ ಸುಮಾರು ೫೫೦ ಕಾಲೇಜುಗಳಲ್ಲಿ ೩೭೪೬ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದೆವು. ತದನಂತರಈ ಕೋರ್ಸ್‌ ಅನ್ನು ಮುಚ್ಚಲಾಯಿತು. ೫ ವರ್ಷ ಸೇವೆ ಸಲ್ಲಿಸಿದವರೆಲ್ಲರಿಗೂ ವಿವಿಧ ಇಲಾಖೆಗಳಲ್ಲಿ ಪರ್ಯಾಯ ಉದ್ಯೋಗಗಳನ್ನು ನೀಡಲಾಯಿತು. ಸುಮಾರು ೫೩೦ ಸಿಬ್ಬಂದಿಗಳು ೫ ವರ್ಷ ಪೂರೈಸದ ಕಾರಣ ಸರಕಾರಿ ಉದ್ಯೋಗ ಪಡೆಯುವಲ್ಲಿ ವಂಚಿತರಾದೆವು. ಈ ೫೩೦ರಲ್ಲಿ  ಕೆಲವರು ಮರಣಹೊಂದಿದ್ದು ಈಗ ೨೩೦ ಜನ ಮಾತ್ರ  ಉಳಿದಿದ್ದೇವೆ. ಅತಂತ್ರವಾಗಿರುವ ನಮಗೆ ಅಯನೂರು ಭರವಸೆಯಾಗಿ ಉಳಿದಿದ್ದಾರೆ. ಏನಾದರೂ ಅನುಕೂಲವಾಗುವ ನಿರೀಕ್ಷೆಯನ್ನು ಇಟ್ಟುಕೊಂಡ ಕಾರಣ ಅವರಿಗೆ ನಮ್ಮ ಬೆಂಬಲವನ್ನು ಕೊಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಸುರೈಯಾ ಬೇಗಂ, ನಗಿನಾ, ಜೆಒಸಿ ವಿಲೀನ ವಂಚಿತ ನೌಕರರ ಸಂಘದ ಗೌರವಾಧ್ಯಕ್ಷ ಕಲ್ಲೇಶಪ್ಪ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments