Tuesday, October 8, 2024
Google search engine
Homeಅಂಕಣಗಳುಲೇಖನಗಳುಹಳ್ಳಿಗಳನ್ನು ಹಳ್ಳಿಗಳನ್ನಾಗಿಯೇ ಉಳಿಸಿಕೊಳ್ಳುವ ದಿಕ್ಕಿನಲ್ಲಿ...

ಹಳ್ಳಿಗಳನ್ನು ಹಳ್ಳಿಗಳನ್ನಾಗಿಯೇ ಉಳಿಸಿಕೊಳ್ಳುವ ದಿಕ್ಕಿನಲ್ಲಿ…

ಲೇಖನ : ನಾಗೇಶ್ ನಾಯಕ್,ತೀರ್ಥಹಳ್ಳಿ

ಹಳ್ಳಿಗಳನ್ನು ಹಳ್ಳಿಗಳನ್ನಾಗಿಯೇ ಉಳಿಸಿಕೊಳ್ಳುವ ದಿಕ್ಕಿನಲ್ಲಿ…

PC : Internet

ಮಾರ್ಚ್ ೨೮ರ ರಾತ್ರಿ ಟಿವಿ ಮಾಧ್ಯಮದಲ್ಲಿ ಸನ್ಮಾನ್ಯ ಮೋದಿಯವರ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಮೊದಲನೆಯದಾಗಿ ಅವರು ಹೇಳಿದ್ದು ಸಾಧ್ಯವಾದಷ್ಟು ಹಣದ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಮಾಡಿ ಎಂದು. ಎರಡನೆಯದಾಗಿ ಅವರು ಹೇಳಿದ ವಿಚಾರವನ್ನು ಆಳವಾಗಿ ಅಗಲವಾಗಿ ಯೋಚನೆ ಮಾಡಬೇಕಾದ ವಿಚಾರವಾಗಿ ಇಂದು ಕಾಣಿಸಿಕೊಳ್ಳುತ್ತಲಿದೆ.

ಅದೆಂದರೆ….ಮೊಬೈಲ್ ಬಂದ ಮೇಲೆ ಭಾರತದ ನೂರ ಹದಿನೈದು ಕೋಟಿ ಜನಸಂಖ್ಯೆಯಲ್ಲಿ ಇಂದು ನೂರು ಕೋಟಿ ಜನರ ಹತ್ತಿರ ಮೊಬೈಲ್ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇದೆ ಎಂದು ಅಂದಾಜು ಮಾಡಬಹುದು. ಹಾಗೆಯೇ ವಾಹನಗಳು. ಭಾರತದಲ್ಲಿಂದು ಸಾವಿರಾರು ಕಿ.ಮೀ. ವಿಸ್ತೀರ್ಣದ ದಾರಿಯನ್ನು ಕ್ರಮಿಸುವ ಬಸ್ಸುಗಳಿವೆ. ಆದರೆ ಖಾಸಗಿಯಾಗಿ ಬೈಕ್, ಮೊಪೆಡ್, ಸ್ಕೂಟಿ ಈ ತರಹದ ವಾಹನಗಳು ಒಬ್ಬೊಬ್ಬರ ಮನೆಯಲ್ಲಿ ಎರಡು ಮೂರು ಇವೆ. ಸೈಕಲ್ ಇರುವುದು ಶಾಲಾ ಮಕ್ಕಳ ಹತ್ತಿರ ಮಾತ್ರ ಎಂದುಕೊಳ್ಳಬಹುದು. ಅಲ್ಲದೆ, ಅದೊಂದು ಉತ್ತಮ ವ್ಯಾಯಾಮದ ವ್ಯವಸ್ಥೆ ಎಂದು ತಿಳಿದವರ ಹತ್ತಿರ ಸೈಕಲ್ ಇರುತ್ತದೆ. ಇಲ್ಲಿ ಮಾನ್ಯ ಮೋದಿಯವರು ಹೇಳಿದ್ದು ನೀವು ವಾಹನಗಳನ್ನು ಒಂದು ದಿನದಲ್ಲಿ ಕೆಲವು ಗಂಟೆಗಳಾದರೂ ಬಿಟ್ಟು ಇಂಗಾಲದ ಡೈಆಕ್ಸೈಡನ್ನು ಪರಿಸರಕ್ಕೆ ಸೇರಿಸದೇ ಇರಲು ಸಹಕರಿಸುತ್ತೀರಾ ? ಎಂದು. ಇಲ್ಲಿ ಅವರು ಒತ್ತಾಯ ಮಾಡಿಲ್ಲ. ಒತ್ತಾಯ ಮಾಡಲಾಗುವುದೂ ಇಲ್ಲ. ಕಾರಣ ಅವರೇ ಇಂಡಿಯಾವನ್ನು ಡಿಜಿಟಲ್ ಇಂಡಿಯಾವನ್ನಾಗಿ ಮಾಡಲು ಹೊರಟಿದ್ದಾರೆ. ಇದು ಅವರ ಮೇಲೆ ಹೊರಿಸುವ ತಪ್ಪಲ್ಲ. ಕಾರಣ ಇಂದು ಇಂಡಿಯಾವನ್ನು ಡಿಜಿಟಲ್ ಮಾಡಲೇಬೇಕಾದ ವಿಚಾರವಿದೆ. ಕಾರಣ ಈ ಜಾಗತೀಕರಣದಲ್ಲಿ ಎಲ್ಲಾ ರಾಷ್ಟ್ರಗಳೂ ಅಭಿವೃದ್ದಿಯ ತುತ್ತತುದಿಗೆ ಧಾವಿಸಲು ಡಿಜಿಟಲ್ ವರ್ಲ್ಡ್‌ನ್ನು ಹೊಂದಿಕೊಂಡಿವೆ. ಡಿಜಿಟಲ್ ವರ್ಲ್ಡ್ ಎಂದರೆ ಏನು. ಇಂದು ಕಂಡು ಬರುವುದು ಎರಡು ಸಂಗತಿಗಳು. ಒಂದು ಮೊಬೈಲ್ ಜಗತ್ತು, ಇನ್ನೊಂದು ಕಂಪ್ಯೂಟರ್ ಯುಗ. ಇದನ್ನು ಭೈರಪ್ಪನವರು ಎಲ್ಲಿಗೆ ಕೊಂಡೊಯ್ದಿದ್ದಾರೆಂದರೆ ತಮ್ಮ ಯಾನ ಎಂಬ ಕಾದಂಬರಿಯಲ್ಲಿ ಮೆಗಾ ಕಂಪ್ಯೂಟರ್ ಎಂದು ಕರೆದಿದ್ದಾರೆ. ಹೀಗಿರುವಾಗ ಭೂಮಿ ಬಿಸಿಯಾಗುವುದನ್ನು ತಪ್ಪಿಸಲು ಹೇಗೆ ಸಾಧ್ಯವಾಗುವುದು ? ಒಂದು ನಾವು ನಮ್ಮ ಡಿಜಿಟಲ್ ಆಸೆಗಳನ್ನು ಬಿಡಬೇಕು. ಇಲ್ಲದೇ ಇದ್ದರೆ ಭೂಮಿ ಬಿಸಿಯಾಗುವುದನ್ನು ತಪ್ಪಿಸುವುದನ್ನು ಬಿಡಬೇಕಾಗುತ್ತದೆ. ಅದು ಅದಕ್ಕೆ ಕಾರಣ ಪ್ರಕೃತಿ ನಮ್ಮ ಮಾತನ್ನು ಕೇಳುವುದಿಲ್ಲ.

ನಾವು ನಮ್ಮೊಳಗೆ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಪ್ರಕೃತಿ ನಮಗಾಗಿ ಅಲ್ಲ, ನಾವು ಪ್ರಕೃತಿಯಿಂದ ಬಂದವರು. ಹೀಗಾಗಿ ನಾವು ಪ್ರಕೃತಿಯನ್ನು ಕಾಪಾಡಿಕೊಂಡೇ ಅದಕ್ಕೆ ಇತಿಮಿತಿಯನ್ನು ಹಾಕಿಕೊಂಡು ಡಿಜಿಟಲ್ ಎಂಬ ವಿಚಾರವನ್ನು ಮಾಡಬೇಕಿದೆ. ಪ್ರಗತಿ ಬೇಡವೆಂದು ಯಾರೂ ಹೇಳುವುದಿಲ್ಲ. ಆದರೆ ಪ್ರಗತಿಯೇ ನಮ್ಮ ಸರ್ವನಾಶಕ್ಕೆ ಕಾರಣವಾದರೆ.. ಯುಗಾದಿ ಭಾರತದಲ್ಲಿ ವಾರ್ಷಿಕ ಮೊದಲನೇ ದಿನದ ಸಂಪರ್ಕ. ಒಂದು ವರ್ಷದ ಅವಧಿಗೆ ಒಂದು ಯುಗ ಎಂದು ಹೇಳುವ ವಿಚಾರ ನಮ್ಮಲ್ಲಿದೆ. ಹೀಗಾಗಿ ಒಂದು ವರ್ಷದ ಅವಧಿಯ ಮೊದಲ ದಿನವನ್ನು ಯುಗಕ್ಕೆ ಆದಿ ಎಂದು ಕರೆದಿರಬಹುದಲ್ಲವೇ ? ಹೀಗಾಗಿ ಯುಗಾದಿ. ಇಲ್ಲಿ ಉತ್ತರಾಯಣ ಹಗಲನ್ನು ಹೆಚ್ಚು ಮಾಡುತ್ತಾ ಹೋಗುತ್ತದೆ. ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವ ಒಂದು ವಿಚಾರ. ಮುಂದಿನವರ್ಷ ನಾವು ಪ್ರಗತಿಯತ್ತ ಸಾಗಬೇಕು. ಭಾರತದ ಸಂಸ್ಕೃತಿ ಹೇಳಿದ್ದೇ ಬೇರೆ, ಡಿಜಿಟಲ್ ವಲ್ಡಿಗೆ ಬಂದಾಗ ನಾವು ಮಾಡುತ್ತಿರುವುದೇ ಬೇರೆ. ಹಾಗಾದರೆ ಮೊಬೈಲ್ ಮತ್ತು ಕಂಪ್ಯೂಟರ್ ತಂತ್ರಜ್ಞಾನಗಳು ಬೇಡವೇ ? ಬೇಕು. ಆದರೆ, ಯಾವುದಕ್ಕೂ ಇತಿಮಿತಿ ಇಲ್ಲದೇ ಇದ್ದಾಗ ಮತ್ತು ಅದರೊಂದಿಗೆ ಮೂಲ ಜೀವನದ ಅಂಗಗಳು ಇಲ್ಲದೇ ಇದ್ದಾಗ ಅಂದರೆ ಮೌಲ್ಯಗಳು ಇಲ್ಲದೇ ಇದ್ದಾಗ ಏನಾದೀತು ?

ಹೇಗಿತ್ತು …. ಹೇಗಾಗಿದೆ ?

ಯುಗಾದಿ ಎಂದಾಗ ವಸಂತ ಋತುವಿನ ನೆನಪಾಗುತ್ತದೆ. ವಸಂತ ಬಂದ ಋತುಗಳ ರಾಜ ತಾ ಬಂದ ಹಸಿರನು ತಂದ ಪೆಣ್ಗಳ ಕುಣಿಸುತ್ತಾ ನಿಂದ. ಹಸುರಿನ ನೋಟದ ಬಗೆ ಬಗೆ ಚೆಂದ. ಹೀಗೆ ವಸಂತ ಋತುವನ್ನು ಋತುಗಳಲ್ಲಿ ರಾಜನನ್ನಾಗಿ ಮಾಡಿದ್ದಾರೆ. ದುರದೃಷ್ಟವಶಾತ್ ಮಲೆನಾಡಿನಲ್ಲಿ ಇಂದು ವಸಂತ ಋತುವಿನ ಕಲ್ಪನೆ ಕೂಡ ಮಾಡಲಾಗುತ್ತಿಲ್ಲ. ಮಲೆನಾಡಿನ ಪ್ರಕೃತಿಯಲ್ಲಿ ಹೂವು ಬಿಡುವುದರಿಂದ ಕಾಯಿ ಕಚ್ಚುವುದರಿಂದ ಗಿಡಮರಗಳು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಾಗದೆ ವಾತಾವರಣದ ಕಲ್ಪನೆ ಮಾಡಲಾಗದೆ ಸೊರಗಿ ಹೋಗಿವೆ. ದುಂಬಿಗಳ ಝೇಂಕಾರವಿಲ್ಲ. ಪತಂಗಗಳ ವೈವಿಧ್ಯತೆ ಇಲ್ಲ. ರಾತ್ರಿ ಹೊತ್ತಿನಲ್ಲಿ ನರಿಗಳ ಕಿರುಚಾಟದ ಇಂಪಿಲ್ಲ. ನೂರಾರು ತರಹದ ಹಕ್ಕಿಗಳ ವಂಶಗಳಿಲ್ಲ. ಯುಗಾದಿಯ ಹೊತ್ತಿನಲ್ಲಿಯೂ ಕೂಡ ತುಂಬಿ ಹೋಗಿರುವ ನದಿಗಳು ಒಣಗಿ ಹೋದ ನೋಟಗಳನ್ನು ನೋಡಬಹುದು. ಕೆರೆಗಳು ಒಣಗಿ ಹೋದ ನೋಟಗಳನ್ನು ನೋಡಬಹುದು. ಸಿಡಿಲು ಗುಡುಗುಗಳಿಂದ ಕೂಡಿದ ಮೋಡಗಳು ಸುರಿಯುವ ಮುಂಗಾರು ಮಳೆಯ ಸೊಬಗಿಲ್ಲ. ಮೊದಲ ಮಳೆ ಬಿದ್ದಾಗ ನೆಲದಲ್ಲಿ ಹೊರಡುವ ಆ ಸುವಾಸನೆಯ ಗಂಧವಿಲ್ಲ. ಒಂದಾಗಿ ಹೇಳುವುದಾದರೆ ವಾಸ್ತವವಾಗಿ ವಸಂತ ಋತುವಿನ ಕಲ್ಪನೆಯೇ ಇಂದಿಲ್ಲ. ವಸಂತ ಋತುವಿಲ್ಲದೆ ಯುಗಾದಿಯ ಕಲ್ಪನೆ ಹೇಗೆ ಬಂದೀತು. ಮಾವಿನ ಮರಗಳಲ್ಲಿ ಕೋಗಿಲೆ ಕೂಗಬೇಕು. ಕೂಗುತ್ತಿವೆ ಆದರೆ, ಅವು ಒಂದು ತಿಂಗಳ ಹಿಂದೆಯೇ ಕೂಗಲು ಪ್ರಾರಂಭಿಸಿವೆ. ಈಗ ಯುಗಾದಿಯ ಹೊತ್ತಿಗೆ ಅವು ಕೂಗುತ್ತಿಲ್ಲ. ಋತುಮಾನಗಳಲ್ಲಿ ಏನು ವ್ಯತ್ಯಾಸವಿದೆ.

ಲೇಖಕನಾದ ನಾನು ಇದನ್ನು ಅಧ್ಯಯನ ಮಾಡಿ ಬರೆಯುತ್ತಿದ್ದೇನೆ. ಮುಂದೊಮ್ಮೆ ಕೋಗಿಲೆಗಳೇ ಇಲ್ಲದೇ ಆಗಿಹೋಗಬಹುದು. ಪ್ರಕೃತಿಯಲ್ಲಿ ಒಂದು ಜೀವ ಸರಪಳಿ ಇದೆ. ಭಾರತದ ಮಟ್ಟಿಗೆ ಪ್ರತಿಯೊಂದು ಹಬ್ಬಗಳಿಗೂ ಪ್ರತಿಯೊಂದು ದೇವರಿಗೂ ಮತ್ತು ಪ್ರಕೃತಿಗೂ ನೇರವಾದ ಸಂಬಂಧವಿದೆ. ಪ್ರಕೃತಿ ಇಲ್ಲದೆ ನೆಲದ ಆರಾಧನೆ ಇಲ್ಲದೆ ಭಾರತದ ಸಂಸ್ಕೃತಿ ಇಲ್ಲ.

ಹೀಗಾಗಿಯೇ ನಾನು ಟೈಟ್ಲಲ್ಲಿ ಹಳ್ಳಿಗಳನ್ನು ಹಳ್ಳಿಗಳನ್ನಾಗಿಯೇ ಉಳಿಸಿಕೊಳ್ಳೋಣ ಎಂದು ಬರೆದಿದ್ದೇನೆ. ಕಾರಣ ನಗರೀಕರಣವೇ ಪ್ರಗತಿ ಎಂದು ಕೊಳ್ಳುತ್ತಿರುವ ಕಾಲದಲ್ಲಿ ನಗರಗಳ ಸುತ್ತಮುತ್ತಲಿನ ಹಳ್ಳಿಗಳನ್ನು ನಗರಗಳಿಗೆ ಸೇರಿಸಿಕೊಂಡು ಅಭಿವೃದ್ಧಿ ಮಾಡುವ ವಿಚಾರ ಬರುತ್ತಿದೆ. ದಯವಿಟ್ಟು ಹಳ್ಳಿಗಳನ್ನು ಆದಷ್ಟು ಹಳ್ಳಿಗಳನ್ನಾಗಿಯೇ ಬಿಟ್ಟರೆ ಒಂದಿಷ್ಟು ಭೂ ವಾತಾವರಣ ಆಮ್ಲಜನಕದಿಂದ ಕೂಡಿರಬಹುದಲ್ಲವೇ ? ಹೋಯ್ ಬರ‍್ಲಾ ಸ್ವಾಮಿ…

RELATED ARTICLES
- Advertisment -
Google search engine

Most Popular

Recent Comments