ಬೆಂಗಳೂರು :ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹತ್ತು-ಹಲವು ಆಧಾರ ರಹಿತ ಅಪಪ್ರಚಾರಗಳ ನಡುವೆ ಹಾಗೂ ಕರ್ನಾಟಕದಲ್ಲಿ ಮತ ಬ್ಯಾಂಕ್ ಆಧಾರಿತ ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವನ್ನು ರಾಜಕಾರಣದ ನೈಜ ಧರ್ಮವನ್ನು ಎತ್ತಿಹಿಡಿದು ಘನತೆ ಮೆರೆದ ಮತದಾರರಿಗೇ ಸಮರ್ಪಿಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲೇ ಎಕ್ಸ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಸ್ವಾತಂತ್ರ್ಯಾ ನಂತರ ಭಾರತವನ್ನು ವಿಶ್ವದ ಮುಂಚೂಣಿಗೆ ತಂದು ನಿಲ್ಲಿಸಿ ಆರ್ಥಿಕ ಹಾಗೂ ಉತ್ಪನ್ನ ಕ್ಷೇತ್ರದಲ್ಲಿ ಹೆಗ್ಗಳಿಕೆಯ ಸಾಧನೆ ಮಾಡುವ ಮೂಲಕ ರಾಷ್ಟ್ರ ಸುರಕ್ಷತೆಗಾಗಿ ಹತ್ತು-ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಭಾರತೀಯರಲ್ಲಿ ಆತ್ಮವಿಶ್ವಾಸ ಹಾಗೂ ರಾಷ್ಟ್ರೀಯತೆಯ ಸ್ವಾಭಿಮಾನ ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು ಭಾರತೀಯ ಜನತಾ ಪಾರ್ಟಿಯ ಹಾಗೂ ಎನ್.ಡಿ.ಎ ಮೈತ್ರಿಕೂಟದ ಮಹಾ ಸಂಕಲ್ಪವಾಗಿತ್ತು, ಅಂತೆಯೇ ಶತಕೋಟಿ ಭಾರತೀಯರ ಮನದಾಳದ ಅಪೇಕ್ಷೆಯಾಗಿತ್ತು, ಈ ನಿಟ್ಟಿನಲ್ಲಿ ಕರ್ನಾಟಕದ ಮತದಾರರು ನಿರೀಕ್ಷೆ ಮೀರಿ ಸ್ಪಂದಿಸಿ 19 ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಟ್ಟಿದ್ದೀರಿ ಇದಕ್ಕಾಗಿ ಅತ್ಯಂತ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಈ ಫಲಿತಾಂಶ ವಿಕಸಿತ ಭಾರತವನ್ನು ಕಟ್ಟುವ ಸಂಕಲ್ಪದ ವಿನಮ್ರ ಮನವಿಯನ್ನು ಮತದಾರರು ಪುರಸ್ಕರಿಸಿದ ಗೆಲುವಾಗಿದೆ.
ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಹಾಗೂ ಮುಖಂಡರ ಅಹರ್ನಿಶಿ ಹೋರಾಟ ಹಾಗೂ ಪರಿಶ್ರಮ ಫಲ ನೀಡಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತ ಬಂಧುಗಳು ಹಾಗೂ ಪ್ರಮುಖರನ್ನು ಹೃದಯ ತುಂಬಿ ಅಭಿನಂದಿಸುವೆ ಎಂದಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದ ಫಲಿತಾಂಶವನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ. 136 ಜನ ಶಾಸಕರು ಇದ್ದಾರೆಂದು ಸಿಎಂ ಸಿದ್ದರಾಮಯ್ಯ ಮೆರೆಯುತ್ತಿದ್ದರು. 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಗ್ಯಾರಂಟಿ ಎಲ್ಲಾ ಬೋಗಸ್ ಅಂತ ಈಗ ಸಾಬೀತು ಆಗಿದೆ ಎಂದು ತಿಳಿಸಿದರು.
ನಮ್ಮ ಹಣ ತೆಗೆದುಕೊಂಡು ನಮಗೆ ಕೊಡುತ್ತಿದ್ದಾರೆ. ಡಿಕೆಶಿ ತಮ್ಮನೇ ಸೋಲು ಕಂಡಿದ್ದಾರೆ. ಇದಕ್ಕೆ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಅವರ ಸ್ವ ಕ್ಷೇತ್ರ ಮೈಸೂರಿನಲ್ಲಿ ಸಹ ಸೋತಿದ್ದಾರೆ. ಸೋಲಿಗೆ ಪಶ್ಚಾತ್ತಾಪ ಅವರು ಪಡಬೇಕು. ಯಾವುದೇ ಗ್ಯಾರಂಟಿ ಮತ ತಂದು ಕೊಟ್ಟಿಲ್ಲ. ಅತ್ತ ಭ್ರಷ್ಟಾಚಾರ ಮಾಡಿದ ಸಚಿವರ ರಾಜೀನಾಮೆ ಸಹ ಕೇಳಿಲ್ಲ. ಅತಿಯಾದ ಮುಸ್ಲಿಂ ಓಲೈಕೆ ಮಾಡಲು ಹೋಗಿ ಹೀಗೆ ಆಗಿದೆ. ಈ ಮೂಲಕ ಕಾಂಗ್ರೆಸ್ ವಿರುದ್ಧದ ಅಲೆ ಎದ್ದಿದೆ ಎಂದರು.