ಪುಸ್ತಕ ವಿಮರ್ಶೆ : ಬಿ.ನಾಗರಾಜ್, ಕಾರೇಹಳ್ಳಿ,ಭದ್ರಾವತಿ
‘ಉತ್ತರಕಾಂಡ ಅಲ್ಲ… ಸೀತಾಕಾಂಡ’
‘ವಿಮರ್ಶೆ ಎಂಬುದು ಆಕಾಶಕ್ಕೆ ಉಗುಳಿ ದಂತೆ’ ಇರಬಾರದು ಎಂದು ಖ್ಯಾತ ಕವಿ ದ.ರಾ. ಬೇಂದ್ರೆ ವಿಮರ್ಶೆ ಕುರಿತು ವ್ಯಾಖ್ಯಾನಿ ಸಿದ್ದಾರೆ. ನಮ್ಮ ಬಹಳಷ್ಟು ವಿಮರ್ಶಕರು ತಾವು ಇಂದ್ರ, ಚಂದ್ರರೆಂದೇ ಭಾವಿಸಿದ್ದಾರೆ. ಹೀಗಾಗಿ ರಾಷ್ಟ್ರಕವಿ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ನಂತಹ ಮಹಾ ಕಾವ್ಯ ಕೂಡಾ ಟೀಕೆ- ಟಿಪ್ಪಣಿಗಳಿಂದ ಹೊರ ತಾಗಿರಲಿಲ್ಲ ಎಂಬುದು ನಿಜಕ್ಕೂ ನೋವಿನ ಸಂಗತಿ.ಹೀಗಾಗಿ ತಮ್ಮ ಬಗ್ಗೆ ಬರುತ್ತಿದ್ದ ಟೀಕೆಗಳ ಕುರಿತು ಕುವೆಂಪುರವರು ‘ಪಕ್ಷಿಕಾಶಿ’ ಕವನ ಸಂಕಲನದಲ್ಲಿ “ಇಲ್ಲಿ ಹುಗಲಿಲ್ಲ ನಿನಗೆ ಓ ಬಿಯದ ಇದು ಪಕ್ಷಿಕಾಶಿ” ಎಂದು ವಿಮರ್ಶಕನನ್ನು ಛೇಡಿಸಿದ್ದಾರೆ.
ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಇತ್ತೀಚೆಗೆ ಭಾರತೀಯ ಮಹಾ ಕಾವ್ಯಗಳಲ್ಲಿ ಒಂದಾದ ರಾಮಾಯಣ ಕುರಿತು ಬರೆದಿರುವ ‘ಉತ್ತರ ಕಾಂಡ’ ಕಾದಂಬರಿಯು ಹಲವು ಕಾರಣಗಳಿಂದಾಗಿ ಅತ್ಯಂತ ಭಿನ್ನವಾಗಿದೆ.ಮೊದಲನೆಯದಾಗಿ ರಾಮಾಯಣದಂ ತಹ ಬೃಹತ್ ಕಾವ್ಯವನ್ನು ಕಾದಂಬರಿಗೆ ಅಳವಡಿಸುವುದು ಸುಲಭ ಸಂಗತಿಯಲ್ಲ. ಹೀಗಾಗಿ ಕುತೂಹಲದಿಂದ ಕಾದಂಬರಿ ಕೈಗೆತ್ತಿಕೊಂಡವರಿಗೆ ನಿರಾಸೆ ಮೂಡಿಸುವುದಿಲ್ಲ.ಭೈರಪ್ಪನವರು ಒಪ್ಪಿ -ಅಪ್ಪಿಕೊಂಡಿರುವ ತತ್ವ -ಸಿದ್ಧಾಂತಗಳು ಏನೇ ಇರಲಿ, ಅದೇ ದೃಷ್ಟಿಕೋ ನದಿಂದ ಅವರ ಕಾದಂಬರಿಗಳನ್ನು ಅಳೆದು ತೂಗುವುದು ಪೂರ್ವಾಗ್ರಹವಾಗುತ್ತದೆ.ಓರ್ವ ಕಾದಂಬರಿಕಾರನಾಗಿ ಭೈರಪ್ಪನವರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎಂಬು ದಕ್ಕೆ ಅವರು ಆಯ್ದುಕೊಳ್ಳುವ ಕಥಾ ವಸ್ತು ಕೂಡಾ ಕಾರಣವಾಗಬಹುದು.ರಾಮಾಯಣ ಕುರಿತಾದ ಸಾಕಷ್ಟು ಕೃತಿಗಳು ಭಾರತೀಯ ಸಾಹಿತ್ಯದಲ್ಲಿ ಬಂದು ಹೋಗಿವೆ. ಕನ್ನಡದ ಮಟ್ಟಿಗೆ ವಾಲ್ಮೀಕಿಯವರ ರಾಮಾ ಯಣವೇ ಇಂದಿಗೂ ಶ್ರೇಷ್ಠವಾಗಿ ಉಳಿದಿದೆ.ಭೈರಪ್ಪನವರು ಕೂಡಾ ತಮ್ಮ ಕಾದಂಬರಿಯ ಕಥಾವಸ್ತುವಿಗೆ ವಾಲ್ಮೀಕಿಯವರ ರಾಮಾ ಯಣವೇ ಸ್ಪೂರ್ತಿ ಎಂದಿದ್ದಾರೆ.ತಮ್ಮ ಕಾದಂಬರಿಗೆ ಭೈರಪ್ಪನವರು ಉತ್ತರ ಕಾಂಡ ಎನ್ನುವ ಬದಲಿಗೆ ಸೀತಾಕಾಂಡ ಎಂದಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು.
ತ್ರೇತಾಯುಗದ ರಾಮಲಕ್ಷ್ಮಣ, ಸೀತೆಯರನ್ನು ಕಲಿಯುಗದ ಸಾಮಾನ್ಯ ಮನುಷ್ಯರಿಗೆ ಸಮೀಕರಿಸಿರುವುದು ಆಪ್ಯಾಯಮಾನ ವಾಗಿದೆ. ಮಾನವ ಸಹಜ ಆಲೋಚನೆಗಳೊಂ ದಿಗೆ ಸೀತೆಯ ಪಾತ್ರ ಸೃಷ್ಟಿ ನಿಜಕ್ಕೂ ಅದ್ಭುತವಾಗಿದೆ.ಕಾದಂಬರಿ ಓದುತ್ತಾ ಹೋದಂತೆಲ್ಲ ಇಲ್ಲೇ ಎಲ್ಲೋ ಅಕ್ಕಪಕ್ಕದ ಮನೆಯ ವಾಸಿಯಂತೆ ಸೀತೆ ಗೋಚರಿಸುತ್ತಾಳೆ.ಬೇಸಾಯ ಉಳುಮೆ ಮಾಡುವಾಗ ಜನಕರಾ ಜನಿಗೆ ಮಣ್ಣಿನಲ್ಲಿ ಸಿಕ್ಕ ಸೀತೆಯ ಪೂರ್ವಾಪರ ಯಾರಿಗೂ ಗೊತ್ತಿಲ್ಲ. ಭಾರತೀಯ ಸಾಹಿತ್ಯದಲ್ಲಿ ಅನ್ಯ ಭಾಷೆಗಳಲ್ಲಿ ಬಂದಿ ರುವ ರಾಮಾಯಣದಲ್ಲಿ ಬರುವ ಸೀತೆಯ ಪಾತ್ರಕ್ಕೂ ಭೈರಪ್ಪನವರ ಉತ್ತರಕಾಂಡದ ಸೀತೆಗೂ ಅಜಗಜಾಂತರ ವ್ಯತ್ಯಾಸಗಳಿವೆ.
ಅಲ್ಲಿ ಸೀತೆ ಸಾಕ್ಷಾತ್ ಭೂದೇವಿಯ ಮಗಳು ಲಕ್ಷ್ಮಿ ಎಂದೆಲ್ಲ ವರ್ಣಿಸಲಾಗಿದೆ.ಉತ್ತರಕಾಂಡ ಸೀತೆಯ ಪಾತ್ರವನ್ನು ಹೆಣೆದಿರುವ ಕಾದಂಬರಿಕಾರರ ದೃಷ್ಟಿ ಕೋನವೇ ಭಿನ್ನ. ಇಲ್ಲಿ ಸಾಮಾನ್ಯ ಹೆಣ್ಣು ಮಗಳಂತೆ ಕಂಡುಬರುತ್ತಾಳೆ. ಹೀಗಾಗಿ ಸಾಮಾನ್ಯ ಸ್ತ್ರೀಯರಲ್ಲಿ ಉಂಟಾಗುವ ಸಂಶಯ, ಆಲೋಚನೆಗಳನ್ನು ಉತ್ತರ ಕಾಂಡದ ಸೀತೆಯಲ್ಲೂ ಕಾಣಬಹುದು. ಆದರೆ ಅದೆಲ್ಲ ಕ್ಷಣ ಮಾತ್ರ. ಕೊನೆಯವರೆಗೂ ಸೀತೆ ಆದರ್ಶ ಮಹಿಳೆಯಾಗಿ, ಶ್ರಮಜೀವಿ ಯಾಗಿ, ಪತಿ ವಂಚಿತಳಾಗಿ ದಿಟ್ಟ ನಿರ್ಧಾರಗಳ ಗಟ್ಟಿ ಹೆಣ್ಣಾಗಿ ಎಲ್ಲಕ್ಕೂ ಮಿಗಿಲಾಗಿ ನತದೃಷ್ಟ ಳಾಗಿ ಬಿಂಬಿತ ಳಾಗಿರುವುದರಿಂದ ಬಹುಕಾಲ ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾಳೆ.ರಾಣಿಯಾಗಿ ಮೆರೆಯಬೇಕಾದದವಳು ಗಂಡನ ಧರ್ಮನಿಷ್ಟೆಗೆ ಕಟ್ಟುಬಿದ್ದು ತನ್ನದಲ್ಲದ ತಪ್ಪಿಗೆ ಹದಿನಾಲ್ಕು ವರ್ಷಗಳ ಕಾಲ ನಾರು ಮುಡಿಯುಟ್ಟು ಕಠಿಣವ್ರತಾಚರಣೆ ಯೊಂದಿಗೆ ಬರಿಗಾಲಲ್ಲಿ ಕಾಡು ಮೇಡು ಅಲೆದು ಗೆಡ್ಡೆ- ಗೆಣಸು ತಿಂದು ಬದುಕುವ ಪರಿ ಸಾಮಾನ್ಯವಲ್ಲ.ಅದು ಎಲ್ಲ ಹೆಣ್ಣುಮಕ್ಕಳಿಗೂ ಸಾಧ್ಯವಿಲ್ಲ. ಹೀಗಾಗಿ ರಾಮಾಯಣದ ಸೀತೆ ಭಾರತೀಯ ನಾರಿಯರಿಗೆ ಆದರ್ಶದಂತಿದ್ದಾಳೆ. ಇತರ ಕೃತಿಗಳಲ್ಲಿ ಕೈಗೆಟುಕದಷ್ಟು ಎತ್ತರವಾಗಿ ನಿಲ್ಲುವ ಸೀತೆಯ ಪಾತ್ರವು ಉತ್ತರಕಾಂಡದಲ್ಲಿ ನೈಜ ಬದುಕಿಗೆ ಹತ್ತಿರವಾಗಿದೆ.ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಸಾಕಷ್ಟು ರಾಮಾಯಣ ಕೃತಿಗಳಲ್ಲಿ ಶ್ರೀರಾಮ ನನ್ನು ದೇವರೊಂದಿಗೆ ಸಮೀಕರಿಸಲಾಗಿದೆ.
ಆದರೆ ಇಲ್ಲಿನ ಕಾದಂಬರಿಯಲ್ಲಿ ರಾಮ ಕೆಲವು ಸಂದರ್ಭಗಳಲ್ಲಿ ಶ್ರೀ ಸಾಮಾನ್ಯನಂತೆ ಗೋಚರಿಸಿದರೂ ಧರ್ಮ ನಿಷ್ಠೆಯೇ ಅವನಿಗೆ ಸರ್ವಸ್ವವಾ ದ್ದರಿಂದ ತನ್ನ ವೈಯಕ್ತಿಕ ಬದು ಕಿಗಿಂತ ಕೋಸಲ ರಾಜ್ಯದ ಹಿತ, ಧರ್ಮ ಪರಿ ಪಾಲನೆಯೇ ಮುಖ್ಯ ವಾಗಿ ಬಿಡುತ್ತದೆ.ಹೀಗಾಗಿ ರಾಮ ಆದರ್ಶ ಪುರುಷ ನಾಗಿ, ತುಂಬ ಎತ್ತ ರದ ವ್ಯಕ್ತಿಯಾಗಿ ಗೋಚರಿಸಿದರೂ ಸೀತೆಯ ಕುರಿತಾದ ಅವನ ಕೆಲವು ನಿರ್ಧಾ ರಗಳು ಅಸ ಹಜ ಎನಿಸುತ್ತವೆ. ಅದು ಭೈರಪ್ಪನವರ ಗೊಂದ ಲವೂ ಇರಬಹುದು.ಹೀಗಾಗಿ ಉತ್ತರ ಕಾಂಡ ಕಾದಂಬರಿ ಯಲ್ಲಿ ಸೀತೆ- ಲಕ್ಷ್ಮಣರ ಪಾತ್ರ ಪೋಷಣೆಯು ರಾಮನಿಗಿಂತ ಭಿನ್ನವಾಗಿದೆ.ಅಣ್ಣನಿಗೆ ನಿಷ್ಠನಾಗಿ, ಶ್ರಮಜೀವಿಯಾಗಿ, ವಸ್ತುನಿಷ್ಠವಾಗಿ ಯೋಚಿಸುವ ನಿಷ್ಠುರ ನಿರ್ಧಾರ, ತ್ಯಾಗದ ಮೂಲಕ ಲಕ್ಷ್ಮಣನ ಪಾತ್ರ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.ರಾಜನಾಗಿ ಮೆರೆಯುವುದಕ್ಕಿಂತ ಮಣ್ಣಿನ ಮಗನಾಗಿ ದುಡಿಯುವ ಲಕ್ಷ್ಮಣ ಹೆಚ್ಚು ಇಷ್ಟವಾಗುತ್ತಾನೆ. ಕಾದಂಬರಿಯ ಅಂತ್ಯದಲ್ಲಿ ಸೀತೆಯ ಪಾತ್ರ ಅತ್ಯಂತ ಗಂಭೀರವಾಗಿ ಮೂಡಿಬಂದಿದೆ. ರಾಮಾಯಣದಂತಹ ಮಹಾ ಕಾವ್ಯವು ದುರಂತ ಅಂತ್ಯ ಕಾಣ ಬಾರದೆಂಬ ಕಾರಣಕ್ಕೆ ವಾಲ್ಮೀಕಿ ಮಹರ್ಷಿಗಳು ಸೀತಾರಾಮರ ನಡುವಿನ ಸಂಧಾನಕ್ಕಾಗಿ ಧರ್ಮಸಭೆ ಏರ್ಪಡಿಸುತ್ತಾರೆ.ಆದರೆ ತನ್ನದಲ್ಲದ ತಪ್ಪಿಗೆ ನೊಂದು- ಬೆಂದು ಬಳಲಿದ್ದ ಸೀತೆಗೆ ಗಂಡನ ಸಾಂಗತ್ಯಕ್ಕಿಂತ ಸ್ವಾಭಿಮಾನವೇ ಮುಖ್ಯವಾಗುತ್ತದೆ.
ಹಿಂದೆ ಸಲ್ಲದ ಕಾರಣಕ್ಕೆ ಪತ್ನಿಯನ್ನು ದೂರ ಮಾಡಿದ್ದ ರಾಮ ಧರ್ಮ ಸಭೆಯಿಂದ ಹೊರ ನಡೆದ ಪತ್ನಿಯನ್ನು ಗೋಗರೆದು ಕರೆದರೂ ಸೀತೆ ದೃಢ ನಿರ್ಧಾರ ತಳೆದು ಆಶ್ರಮಕ್ಕೆ ಮರಳಿ ಬಿಡುತ್ತಾಳೆ.ಇದರಿಂದ ನೊಂದು- ಬೆಂದು ಬಸವಳಿದ ರಾಮ ಹಿರಿಯ ಪುತ್ರ ಲವನಿಗೆ ಪಟ್ಟಾಭಿಷೇಕ ಮಾಡಿಸಿ, ಲಕ್ಷ್ಮಣನಿಗೆ ಉಸ್ತುವಾರಿ ವಹಿಸಿ, ಏಕಾಂತವಾಸ ಬಯಸುತ್ತಾನೆ.ಯೋಗ, ಧ್ಯಾನದಲ್ಲೇ ಕಾಲ ಕಳೆಯುವ ರಾಮ ಒಂದು ದಿನ ನದಿಯಲ್ಲೇ ಇಚ್ಛಾ ಮರಣ ಹೊಂದುತ್ತಾನೆ. ವಿಷಯ ತಿಳಿದು ವೈಧ್ಯವ್ಯದ ಕರ್ಮಾಚರಣೆಗೆ ಒಪ್ಪದ ಸೀತೆ ತನ್ನ ಕೃಷಿ ಭೂಮಿಯಲ್ಲೇ ಇಚ್ಚಾ ಮರಣ ಹೊಂದು ತ್ತಾಳೆ. ಅಲ್ಲಿಗೆ ಕಾದಂಬರಿಯು ದುರಂತದಲ್ಲೇ ಕೊನೆಗೊಳ್ಳುತ್ತದೆ.ಉತ್ತರಕಾಂಡದ ಕಥನಾ ಶೈಲಿ ಸರಳವೂ ಭಿನ್ನವೂ ಮಾತ್ರವಲ್ಲದೆ ನೈಜತೆಗೆ ಹತ್ತಿರವಾಗಿ ದ್ದು, ಅತ್ಯಂತ ಬಿಗುವಿನಿಂದ ಕೂಡಿದೆ. ಭೈರಪ್ಪನವರ ಬಗ್ಗೆ ಪೂರ್ವಾಗ್ರಹ ಹೊಂದಿರು ವವರು ಕೂಡಾ ಮೂಗಿನ ಮೇಲೆ ಬೆರಳಿಡು ವಷ್ಟು ಭೈರಪ್ಪ ಬದಲಾಗಿದ್ದಾರೆ ಎನ್ನಿಸುತ್ತದೆ. ಅವರು ಚಿತ್ರಿಸಿರುವ ಉತ್ತರಕಾಂಡದ ಸೀತೆ ಮನಕಲಕುವ ಜೊತೆಗೆ ಸದಾ ಕಾಲ ನೆನಪಿನಲ್ಲಿ ಉಳಿದುಬಿಡುತ್ತಾಳೆ.ರಾಮಾಯಣದ ಕಥಾನಾಯಕ ರಾಮ ನಾದರೂ ಉತ್ತರಕಾಂಡದ ಕೇಂದ್ರಬಿಂದು ಸೀತೆ,ಲಕ್ಷ್ಮಣನ ಪಾತ್ರ ಸೊಗಸಾಗಿ ಚಿತ್ರಿತ ವಾಗಿದ್ದು, ಬೆವರಿನ ಮನುಷ್ಯ, ನಿಷ್ಠುರವಾದಿ, ವಾಸ್ತವವಾದಿಯಾಗಿ ಓದುಗನಿಗೆ ಹೆಚ್ಚು ಆಪ್ತವಾಗುತ್ತಾನೆ. ಇಲ್ಲಿನ ರಾಮನಿಗೆ ಇಕ್ಷ್ವಾಕು ವಂಶದ ಘನತೆ, ಗೌರವ, ಕೋಸಲ ರಾಜ್ಯದ ಪ್ರತಿಷ್ಠೆ, ಪ್ರಜಾಪಾಲನೆ, ಧರ್ಮ ರಕ್ಷಣೆ ಅಷ್ಟೇ ಮುಖ್ಯವಾಗಿ ಕಾಣಿಸಿಕೊಂಡಿದೆ.ರಾಮಲಕ್ಷ್ಮಣ, ಸೀತೆಯರಷ್ಟೇ ಪ್ರಮುಖ ವಾಗಬೇಕಿದ್ದ ಹನುಮಂತರ ಪಾತ್ರ ಪೋಷಣೆ ಸೊರಗಿದ್ದು, ಲಕ್ಷ್ಮಣನ ಪತ್ನಿ ಊರ್ಮಿಳೆ ಹೆಚ್ಚು ವಿಜೃಂಭಿಸಿದ್ದಾಳೆ.
ದಶರಥ ಮಾಮೂಲಿಯಾದರೆ, ಕೈಕೇಯಿ ಖಳನಾಯಕಿ, ಭರತ- ಶತ್ರುಘ್ನರನ್ನು ಅಸಹಾಯಕರಂತೆ ಬಿಂಬಿಸಲಾ ಗಿದ್ದು, ಪುರಾಣ ಕಥೆಗಳಲ್ಲಿ ಶಿವಭಕ್ತನಾಗಿರುವ ರಾವಣ ಇಲ್ಲಿ ವಿಷಯ ಲಂಪಟ, ಅವನ ತಂಗಿ ಶೂರ್ಪನಖಿ ಕಾಮದ ಪ್ರತೀಕ.ಸುಗ್ರೀವ- ತಾರೆ ಇದೇ ವರ್ಗಕ್ಕೆ ಸೇರು ತ್ತಾರೆ. ವಿಭೀಷಣ- ಸುರಮೆ ಪಾತ್ರ ಪೋಷಣೆ ಚಿಕ್ಕ ದಾಗಿದ್ದರೂ ಪರಿಣಾಮಕಾರಿಯಾಗಿದೆ. ಉಳಿ ದಂತೆ ನೂರಾರು ಪಾತ್ರಗಳು ಕಥೆಗೆ ಪೂರಕ ವಾಗಿ ಕಾದಂಬರಿಯ ಒಡಲು ತುಂಬಿವೆ.ಕಾದಂಬರಿಯಲ್ಲಿ ಬರುವ ಭಾಷೆ ಎಂದಿ ನಂತೆ ಗಟ್ಟಿತನದಿಂದ ಕೂಡಿದೆ. ಬೆಟ್ಟ, ಗುಡ್ಡ, ಪರ್ವತ ಶ್ರೇಣಿಗಳು, ಕಾಡು- ಮೇಡು, ವನ ರಾಶಿಯ ವರ್ಣನೆ ಹಿತ- ಮಿತವಾಗಿದ್ದು, ಎಲ್ಲಿ ಯೂ ಅತಿ ಎನಿಸದೆ, ಕಥೆಗೆ ಪೂರಕವಾಗಿವೆ.ಭೈರಪ್ಪನವರಲ್ಲಿರುವ ಅಪಾರ ವಿದ್ವತ್- ಅನುಭವದ ಮೂಟೆ ಕಾದಂಬರಿಯನ್ನು ಗಟ್ಟಿಗೊಳಿಸಿದೆ. ಆರಂಭದಲ್ಲಿ ಮಾಮೂಲಿ ಸೂತ್ರಬದ್ಧ ಚೌಕಟ್ಟಿನೊಳಗೆ ವಿಹರಿಸುವ ಕಾದಂಬರಿಕಾರರು ಕಥೆಯು ಸಾಗಿದಂತೆಲ್ಲ ವಸ್ತು ನಿಷ್ಠವಾಗಿ ಕಾಣಿಸುತ್ತಾರೆ. ಪೊರೆ ಕಳಚಿದ ಹಾವಿನಂತೆ ಕಂಗೊಳಿಸುತ್ತಾರೆ.