ಶಿವಮೊಗ್ಗ : ಬಂಡವಾಳಶಾಹಿ ಹಾಗೂ ವಸಾಹತುಶಾಹಿ ವ್ಯವಸ್ಥೆಗಳು ಸಮಾಜ ಹಾಕಿಕೊಟ್ಟ ಮೌಲ್ಯ ಮತ್ತು ಆಲೋಚನೆ ಗಳನ್ನು ದುಸ್ತರಗೊಳಿಸಿವೆ ಎಂದು ಲೇಖಕಿ ಸ. ಉಷಾ ಬೇಸರ ವ್ಯಕ್ತಪಡಿಸಿದರು.
ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಸಂವಿಧಾನ, ಸಮಾಜ ಮತ್ತು ಮಹಿಳೆ ಹಾಗೂ ಸಮತೆಯೆಡೆಗೆ ನಮ್ಮ ನಡಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ದವರು ನನ್ನದು ಪ್ರೀತಿಯ ರಾಜಕಾರಣ ಎನ್ನುತ್ತಾರೆ. ಅದಕ್ಕೆ ನನ್ನ ಪೂರ್ಣ ಬೆಂಬಲ ವಿದೆ. ಇವರ ಬಣ್ಣ ಬಿಳಿ. ಸೂಕ್ಷ್ಮ ಮನಸಿನ ಗಂಡಸರನ್ನು ಗೌರವಿಸುತ್ತಾರೆ. ಕುಟುಂಬ ವನ್ನು ಎಂದೂ ತಿರಸ್ಕರಿಸುವುದಿಲ್ಲ ಎಂದರು.
ಬುದ್ದಿವಂತಿಕೆ, ಸೌಂದರ್ಯ ಎಂದ ರೇನು, ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ, ಈ ರೀತಿಯ ವಿಷಯಗಳ ಬಗ್ಗೆ ಕಾಲೇಜು ಶಾಲಾ ಮಕ್ಕಳಿಗೆ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಹಾಡು ನಾಟಕ ಘೋಷಣೆಗಳ ಮೂಲಕ ಸಮಾಜದ ಕಣ್ಣನ್ನು ತೆರೆಸುತ್ತಿದ್ದಾರೆ ಎಂದರು.
ಪುರುಷ ರಾಜಕಾರಣ ಎಂದು ಯಾವುದನ್ನು ಕರೆಯುತ್ತೇವೆಯೋ ಅದರ ತಂತ್ರಗಳು ಪ್ರತಿತಂತ್ರಗಳ ಉಪಯೋಗದಲ್ಲಿ ಮಹಿಳೆಯೇನೂ ಹಿಂದೆ ಬಿದ್ದಿಲ್ಲ. ಅದೇ ರೀತಿ ಮಹಿಳೆಯರ ಹೋರಾಟಕ್ಕೆ, ಸಮಾನತೆಯ ತತ್ವಕ್ಕೆ ಪುರುಷರು ಕೊಟ್ಟ ಕಾಣಿಕೆಯನ್ನು ಅಲ್ಲಗೆಳೆಯುವಂತಿಲ್ಲ ಎಂದರು.
ಶಿವಮೊಗ್ಗೆಯಲ್ಲಿ ಬರಹಗಾರರು, ಹೋರಾಟಗಾರರು, ಹಾಡುಗಾರರು, ಧಾರ್ಮಿಕ ನಾಯಕರು ನಮ್ಮೊಡನೆ ಮಾನವ ಸರಪಳಿಯಲ್ಲಿ ಬೆಂಬಲ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಬಿತಾ ಬನ್ನಾಡಿ, ಬಿ. ರಜಿಯಾ, ಪುಣೆಯ ಮನಿಶಾ ಗುಪ್ತೆ ಇನ್ನಿತರರಿದ್ದರು.