ನಾಡಧ್ವಜ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರವಾಗಿಲ್ಲ : ಉಮಾಶ್ರೀ

ಶಿವಮೊಗ್ಗ : ನಾಡಧ್ವಜ ಬದಲಾವಣೆ ಕುರಿತಂತೆ ಯಾವುದೇ ನಿರ್ಧಾರವಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಧ್ವಜ ಬದಲಾವಣೆಗೆ ಸಂಬಂಧಿಸಿದಂತೆ ಇದೀಗ ತಾನೆ ವರದಿ ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ .ವರದಿಯ ಬಗ್ಗೆ ಚರ್ಚೆಯಾದ ನಂತರವಷ್ಟೇ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಅವರ ಪಕ್ಷದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಾಖಲೆ ಇಲ್ಲದ ಆರೋಪಗಳನ್ನು ರಾಜ್ಯ ಸರ್ಕಾರದ ವಿರುದ್ಧ ಮಾಡಿದ್ದಾರೆ ಎಂದ ಅವರು, ೧೦ ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಹೇಳಿರುವುದು ನಿರಾಧಾರವಾಗಿದೆ. ಇಂತಹ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.
ನಂಗ್‌ನಾಚ್ ಎಂಬ ಬಳಕೆ ಮಾಡಿರುವುದು ಸಹ ಸರಿಯಲ್ಲ ಎಂದ ಅವರು, ಭಾಷೆ ಬಳಕೆ ಮಾಡುವಾಗ ಸರಿಯಾಗಿರಬೇಕು. ಪ್ರಧಾನಿಯವರು ಇಂತಹ ಪದಗಳನ್ನು ಬಳಕೆ ಮಾಡುವಾಗ ಎಚ್ಚರ ವಹಿಸುವುದು ಅಗತ್ಯವಾಗಿರುತ್ತದೆ ಎಂದು ಹೇಳಿದರು.
ಕಳೆದ ಎರಡು ಬಾರಿಯೂ ಸಹ ನಾನು ಬಾಗಲಕೋಟೆ ಜಿಲ್ಲೆಯ ತೇರದಾಳ್ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ಈ ಬಾರಿ ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಬಾರಿಯೂ ಸಹ ಅದೇ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದೇನೆ ಎಂದರು. ಚಿತ್ರನಟರಾದ ರಮ್ಯ ಹಾಗೂ ಜಗ್ಗೇಶ್ ಟ್ವೀಟರ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜಕಾರಣಕ್ಕೆ ಬಂದ ಮೇಲೆ ಜನ ನಮ್ಮನ್ನು ಗಮನಿಸುತ್ತಿರುತ್ತಾರೆ ಎಂಬ ಸೂಕ್ಷ್ಮ ವಿಚಾರ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಇರಬೇಕೆಂದು ಮಾರ್ಮಿಕವಾಗಿ ನುಡಿದರು.
ರಾಜಕೀಯದಲ್ಲಿ ಕೆಸರೆರಚಾಟ, ವೈಯಕ್ತಿಕ ನಿಂದನೆ ಸರಿಯಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.