ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಸ್ವಾಮೀಜಿಗಳಿಬ್ಬರ ಗುಂಪುಗಳ ಮಧ್ಯೆ ಮಾರಾಮಾರಿಯಾಗಿ ಸ್ವಾಮೀಜಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಕೊಲೆಗೀಡಾದ ಸ್ವಾಮೀಜಿಯನ್ನು ‘ಆಚಾರ್ಯ ಚಿನ್ಮಯಾನಂದ’ ಸ್ವಾಮೀಜಿ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸ್ವಾಮೀಜಿಯಾದ ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಈ ಕೊಲೆ ಸಂಭವಿಸಿದೆ.
ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಜಾಗದಲ್ಲಿ ಆಶ್ರಮ ಇದ್ದು ಹಲವು ವರ್ಷಗಳಿಂದ ಜಾಗದ ಕುರಿತಂತೆ ವಿವಾದ ನಡೆಯುತ್ತಿದೆ. ಇಂದು ಬೆಳಿಗ್ಗೆ ಕೋರ್ಟ್ಗೆ ದಾಖಲೆ ಸಹಿತ ಹೋಗುವ ವೇಳೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.
ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಚಿನ್ಮಯಾನಂದ ಅವರನ್ನು ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಮೃತಪಟ್ಟಿದ್ದಾರೆ.
ಈ ಕೊಲೆ ಸಂಬಂಧ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವವರನ್ನು ಬಂಧಿಸಿ, ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.