ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಮಲೆನಾಡಿನ ಭಾಗದಲ್ಲಿ ಮುಂಗಾರು ಚುರುಕಾಗಿದ್ದು, ಇದರಿಂದಾಗಿ ತುಂಗಾ ಜಲಾಶಯ ಭರ್ತಿಯಾಗಿದೆ.
ಜಲಾಶಯದ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ, ಜಲಾಶಯ ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಜಲಾಶ ಯದ ೨೨ ಗೇಟ್‌ಗಳಲ್ಲಿ ೧೯ ಗೇಟ್‌ಗಳನ್ನು ೦.೫ ಮೀ. ಎತ್ತರದಲ್ಲಿ ತೆರೆಯಲಾಗಿದ್ದು, ಈ ಮೂಲಕ ನದಿಗೆ ನೀರನ್ನು ಬಿಡಲಾಗುತ್ತಿದೆ.
೩.೨೪ ಟಿಎಂಸಿ ಸಾಮರ್ಥ್ಯವಿರುವ ತುಂಗಾ ಜಲಾಶಯಕ್ಕೆ ೬೧೦೯ ಕ್ಯೂಸೆಕ್ ನೀರಿನ ಒಳಹರಿವಿದ್ದು, ೪೭೭೭ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ ಹರಿದುಬರುವ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದ ೧೯ ಗೇಟುಗಳನ್ನು ತೆರೆಯುವ ಮೂಲಕ ನದಿಗೆ ನೀರನ್ನು ಬಿಡಲಾಗಿದೆ. ಜಲಾಶಯದ ನದಿ ಪಾತ್ರವಾದ ಶೃಂಗೇರಿ, ಎನ್.ಆರ್.ಪುರ., ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮಳೆಯ ಪ್ರಮಾಣ ಇದೇ ರೀತಿ ಮುಂದುವರೆದರೆ ಈಗ ತೆರೆದಿರುವ ಗೇಟಿನ ಪ್ರಮಾಣವನ್ನೂ ಕೂಡಾ ಹೆಚ್ಚಿಸಲಾಗುವುದು. ಅಲ್ಲದೆ ಇನ್ನುಳಿದ ಮೂರು ಗೇಟ್‌ಗಳನ್ನೂ ಕೂಡಾ ತೆರೆಯಲಾಗುವುದು ಎಂದು ಸಂಬಂಧಪಟ್ಟ ಇಲಾಖಾ ಇಂಜಿನಿಯರ್‌ಗಳು ತಿಳಿಸಿದ್ದಾರೆ.
ಜಲಾಶಯದ ನಾಲೆಗಳಲ್ಲೂ ಸಹ ನೀರನ್ನು ಬಿಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದು, ಈ ಎಲ್ಲಾ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದಲ್ಲಿ ಮತ್ತು ಚಾನಲ್‌ಗಳ ಬದಿಯಲ್ಲಿ ಇರುವಂತಹ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಇದೇ ರೀತಿ ಜಲಾಶಯದ ನದಿ ಪಾತ್ರದಲ್ಲಿ ಮಳೆ ಮುಂದುವರಿದರೆ ನದಿಗೆ ಬಿಡುವಂತಹ ನೀರಿನ ಪ್ರಮಾಣವೂ ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ.