“ಗಂಗಾ ಸ್ನಾನ ತುಂಗಾ ಪಾನ” ಎಂಬ ಮಾತು ಎಲ್ಲರಿಗೂ ತಿಳಿದಿರುವ ಮಾತು. ಉತ್ತರ ಭಾರತದಲ್ಲಿ ಗಂಗಾ ನದಿಗೆ ಎಷ್ಟು ಮಹತ್ವವಿದೆಯೋ ಅದೇ ತರಹ ನಮ್ಮ ಮಲೆನಾಡಿನ ಜೀವ ನದಿ ತುಂಗೆ. ಇಂದು ಈ ತುಂಗೆ ಮಲಿನವಾಗುತ್ತಿದ್ದು, ಶಿವಮೊಗ್ಗ ನಗರದ ಬಹುತೇಕ ಕೊಳಚೆ ನೀರು, ತ್ಯಾಜ್ಯ ವಸ್ತುಗಳು, ಮಾಂಸದಂಗಡಿಯ ತ್ಯಾಜ್ಯ ವಸ್ತುಗಳು ಹೀಗೆ ಎಲ್ಲವೂ ಸಹ ತುಂಗೆಯ ಒಡಲು ಸೇರುತ್ತಿವೆ.
ಮಳೆಗಾಲದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ತುಂಬಿ ಹರಿಯುವ ತುಂಗೆಯನ್ನು ನೋಡಿ ಕಣ್ತುಂಬಿಕೊಳ್ಳಲು ಸಾರ್ವಜನಿಕರು ನದಿ ತೀರಕ್ಕೆ ಬರುತ್ತಿದ್ದಾರೆ. ಆದರೆ ನದಿ ತೀರದಲ್ಲಿ ಕೊಳಚೆ ನೀರು ತುಂಗೆಯ ಮಡಿಲನ್ನು ಸೇರುತ್ತಿರುವುದನ್ನು ನೋಡಿ ನಗರದ ನಾಗರೀಕರು ಬೇಸರ ಪಟ್ಟುಕೊಳ್ಳುತ್ತಿ ದ್ದಾರೆ ಅಲ್ಲದೆ, ಜನತೆ ಮೂಗು ಮುಚ್ಚಿಕೊಂಡು ನದಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರನ್ನು ಶುದ್ದಗೊಳಿಸದೆ ನೇರವಾಗಿ ನದಿಗಳಿಗೆ ಬಿಡಬಾರದು ಎಂಬ ನ್ಯಾಯಾಲಯದ ಆದೇಶವಿ ದ್ದರೂ ಕೂಡ ಅದನ್ನು ಗಾಳಿಗೆ ತೂರಿ, ನಗರದ ಎಲ್ಲಾ ಕೊಳಕು ನೀರು ನದಿಗೆ ಬಂದು ಸೇರುತ್ತಿದೆ. ನೀರು ಶುದ್ಧೀಕರಣ ಘಟಕ ಆರಂಭವಾಗಿ ೬ ರಿಂದ ೭ ವರ್ಷವಾದರೂ ಇನ್ನೂ ಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ದಿನೇ ದಿನೇ ತುಂಗೆ ತನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ.
ಪಾಲಿಕೆಯ ಪ್ರಕಾರ, ನಗರ ಪ್ರದೇಶದಲ್ಲಿ ಎಷ್ಟು ಮನೆಗಳು ಯು.ಜಿ.ಡಿ ಗೆ ಸಂಪರ್ಕಹೊಂದಿದೆ….?? ಅದೆಷ್ಟೋ ಮನೆಗಳು ಮನೆಯ ತ್ಯಾಜ್ಯದ ನೀರನ್ನು ನೇರವಾಗಿ ಚರಂಡಿ ನೀರಿಗೆ ಸೇರಿಸಿವೆ ಅನ್ನೋದನ್ನ ಪಾಲಿಕೆಯ ಮೇಯರ್ ಹಾಗೂ ಅಧಿಕಾರಿಗಳು ಗಮನಿಸಬೇಕಾದ ವಿಷಯವಾಗಿದೆ. ಇನ್ನು ತುಂಗಾ ನದಿ ತೀರದ ಅಭಿವೃದ್ಧಿಗೆ ಅಂತ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ೭೦ ಕೋಟಿ ರೂಪಾಯಿಗಳ “ರಿವರ್ ಫಂಡ್ ಯೋಜನೆ” ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ತುಂಗಾನದಿಯ ಸೇತುವೆಯಿಂದ ಎ,ಬಿ,ಸಿ,ಡಿ ಎಂದು ನಾಲ್ಕು ಭಾಗಗಳಾಗಿ ವಿಭಾಗಿಸಿ, ಪಾರ್ಕಿಂಗ್ ವ್ಯವಸ್ದೆ, ಮಾಲ್ ಆರ್ಟ್, ತುಂಗಾ ವೀಕ್ಷಣೆಗೆ ಸುವ್ಯವಸ್ದೆ ಮಾಡಲಾಗುವುದು ಎಂದು ತಿಳಿಸಿದ್ದರು. ಈ ಎಲ್ಲಾ ಯೋಜನೆಗಳಿಗೆ ಅನುದಾನಗಳು ಬಿಡುಗಡೆ ಅಗುತ್ತದೆ, ಅದರೆ ಅದು ಕಾರ್ಯ ರೂಪಕ್ಕೆ ಬರುವುದು ಯಾವಾಗ? ಜನರು ಅದರ ಉಪಯೋಗ ತೆಗೆದುಕೊಳ್ಳುವುದು ಯಾವಾಗ? ಎಂಬ ಪ್ರಶ್ನೆ ಸಾರ್ವ ಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಒಟ್ಟಾರೆಯಾಗಿ ಜೀವ ನದಿ ತುಂಗೆ ತನ್ನ ಶುದ್ಧತೆಯನ್ನು ಕಳೆದುಕೊಳ್ಳುತ್ತಿದೆ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ.