ಶಿವಮೊಗ್ಗ: ಕಾಂಗ್ರೆಸ್ಸ್‌ನಿಂದ ಸ್ಪರ್ಧಿಸಿರುವ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ.ಮಂಜುನಾಥ್ ಈ ಇಬ್ಬರ ಗೆಲುವು ನಿಶ್ಚಿತ ಎಂದು ಎಂ.ಎ.ಐ.ಡಿ.ಬಿ. ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಪದವೀಧರರ ಪರವಾಗಿ ಅವರು ಯಾವಾಗಲೂ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅವರಿಗೆ ಸಮಸ್ಯೆಗಳ ಅರಿವಿದೆ. ಮುಖ್ಯವಾಗಿ ಈ ಬಾರಿ ಹಳೇ ಪಿಂಚಣಿ ವ್ಯವಸ್ಥೆಯ ಜಾರಿ ಮುಂಚೂಣಿಯಲ್ಲಿದೆ. ಸರ್ಕಾರದ ನಿರ್ಧಾರ ಕೂಡ ಇದೇ ಆಗಿದೆ. ಹಾಗಾಗಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದರು
ಬಿಜೆಪಿ ಸರ್ಕಾರದಲ್ಲಿ ಹೊಸ ಪಿಂಚಣಿ ವ್ಯವಸ್ಥೆ ಜಾರಿಯಾಗಿದು, ಇದೇ ಅವರಿಗೆ ಮುಳ್ಳುವಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಹೊಸ ಪಿಂಚಣಿ ವ್ಯವಸ್ಥೆ ರದ್ದಾಗಿ ಹಳೆಯದೇ ಬರುತ್ತದೆ. ಮತ್ತು ಇದನ್ನು ಜಾರಿಗೆ ತರುವುದು ಈಗಿನ ಸರ್ಕಾರ ಎಂಬ ಭಾವನೆ ಶಿಕ್ಷಕರಲ್ಲಿದೆ. ಹಾಗಾಗಿ ಅವರು ಗೆಲ್ಲುವುದು ಖಚಿತ ಎಂದರು.
ಬಿಜೆಪಿಯವರು ಯಾವ ಮಾನದಂಡವನ್ನು ಇಟ್ಟುಕೊಂಡು ಈ ಬಾರಿ ವೋಟು ಕೇಳುತ್ತಾರೋ ಗೊತ್ತಿಲ್ಲ. ಸರ್ಜಿಯವರು ಪದವೀಧರರ ಬಗ್ಗೆ ಯಾವ ಹೋರಾಟವನ್ನು ಕೂಡ ಮಾಡಿಲ್ಲ. ಆಯನೂರು ಮಂಜುನಾಥ್ ಪಿಂಚಣಿ ವ್ಯವಸ್ಥೆಯ ಜೊತೆಗೆ ಏಳನೇಯ ವೇತನ ಆಯೋಗದ ಬಗ್ಗೆಯೂ ಹೋರಾಟ ನಡೆಸಿದ್ದಾರೆ. ಆಡಳಿತ ಪಕ್ಷದ ವಿರುದ್ಧವೇ ಅವರು ಹೋರಾಟ ಮಾಡಿದವರು ಎಂದರು.
ಬಿಜೆಪಿ ಸರ್ಕಾರ ಕಾರ್ಮಿಕರ ಬಗ್ಗೆ ಯಾವ ಆಸಕ್ತಿಯನ್ನು ತೋರಿಸಿಲ್ಲ. ಕೆಲಸದ ವೇಳೆಯನ್ನು ೮ ರಿಂದ ೧೨ ಗಂಟೆಗೆ ಹೆಚ್ಚಿಸಿದವರು. ಕಾರ್ಮಿಕರು ಇವರಿಗೆ ಹೇಗೆ ವೋಟು ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಈ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ಜನಪ್ರತಿನಿಧಿಗಳು, ಪ್ರಮುಖರು ವ್ಯವಸ್ಥಿತವಾಗಿ ಚುನಾವಣೆ ನಡೆಸುತ್ತಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಡಾ.ಟಿ.ನೇತ್ರಾವತಿ, ಶಿವಣ್ಣ, ದುಗ್ಗಪ್ಪಗೌಡ, ಶಾಮ್, ಷಡಾಕ್ಷರಿ ಮುಂತಾದವರು ಇದ್ದರು.
……………………………..
ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಸರ್ಕಾರ ಶಿಕ್ಷಕರು ಮತ್ತು ಪಧವೀಧರರ ಪರವಾಗಿ ಯೋಜನೆಗಳನ್ನು ತಂದಿದೆ. ರಾಷ್ಟ್ರ ಮಟ್ಟದಲ್ಲೂಕೂಡ ಪದವೀಧರರಿಗೆ ಅನುಕೂಲ ಆಗುವಂತೆ ನೇಮಕಾತಿ ಭರವಸೆ ನೀಡಿದ್ದೇವೆ. ಇದೆಲ್ಲವೂ ಪಕ್ಷದ ಇಬ್ಬರೂ ಅಭ್ಯರ್ಥಿಗಳ ಗೆಲುವಿಗೆ ವರದಾನ ಆಗಲಿದೆ. ಮೇಲಾಗಿ ಬಿಜೆಪಿ ತನ್ನ ಅಧಿಕಾರವದಿಯಲ್ಲಿ ಎನ್ ಇ ಎಸ್ ಜಾರಿ ಸೇರಿ ಅನೇಕ ಕಾರ್ಮಿಕ ವಿರೋಧಿ, ನೌಕರ ವಿರೋಧಿ ನೀತಿ ತಂದಿದೆ, ಅವೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗಲಿವೆ.
– ಆರ್.ಎಂ.ಮಂಜುನಾಥ್ ಗೌಡ, ಎಂಎಡಿಬಿ ಅಧ್ಯಕ್ಷ