ಶಿವಮೊಗ್ಗ : ದೇಶದ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಅರ್ಚಕರ ಪಾತ್ರ ಮಹತ್ವದ್ದು ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ರಾಜ್ಯ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಉಳಿತಿಗಾಗಿ ಹೋಮ, ಹವನ, ಜಪ, ಯಜ್ಞ ಯಾಗಾದಿಗಳನ್ನು ಮಾಡುವ ಮೂಲಕ ಪುರೋಹಿತ ವರ್ಗ ಸಮಾಜಮುಖಿಯಾಗಿ ಕೆಲಸ ಮಾಡುತ್ತದೆ ಎಂದು ಶ್ಲಾಘಿಸಿದರು.
ಹಿಂದಿನಿಂದಲೂ ಕೂಡಾ ಅರ್ಚಕರು, ಮತ್ತು ಪುರೋಹಿತರು ದೇಶದ ಒಳಿತಿಗಾಗಿ ಹಾಗೂ ನಾಡು ಸುಬಿಕ್ಷೆಯಿಂದಿರಲು ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರುಗಳಿಂದಲೇ ದೇಶದ ಸಂಸ್ಕೃತಿ ಹಾಗೂ ಆಚಾರ, ವಿಚಾರಗಳು ಉಳಿದು ಬೆಳೆಯುವಂತಾಗಿದೆ ಎಂದು ಹೇಳಿದರು.
ಕೇವಲ ಪೂಜೆ, ಹೋಮ, ಹವನಗಳಲ್ಲೇ ನೀವು ಕಾಲ ಕಳೆಯಬಾರದು. ಅದರ ಜೊತೆ ಜೊತೆಯಲ್ಲೇ ಸಂಘಟನೆಯ ಬಗ್ಗೆಯೂ ಸಹ ಜಾಗೃತರಾಗಬೇಕೆಂದ ಅವರು, ರಾಜ್ಯಮಟ್ಟದ ಸಮಾವೇಶವನ್ನು ನಡೆಸುವ ಮೂಲಕ ನಿಮ್ಮ ಬೇಕು, ಬೇಡಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮುಂದಾಗಬೇಕು. ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.
ಸರ್ಕಾರದಿಂದ ಬರಬೇಕಾದಂತಹ ಹಾಗೂ ಕೇಳಬೇಕೆಂದಿರುವ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಅದಕ್ಕೆ ನಮ್ಮ ಕಡೆಯಿಂದಲೂ ಸಹ ಒತ್ತಾಯ ತರಲಾಗುವುದು ಎಂದ ಅವರು, ಚುನಾವಣೆಗೆ ಮುಂಚಿತವಾಗಿ ಅಥವಾ ನಂತರ ರಾಜ್ಯಮಟ್ಟದ ಸಮಾವೇಶ ಮಾಡುವುದು ಉತ್ತಮ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ರಾಜ್ಯಾಧ್ಯಕ್ಷ ಸೋಮಣ್ಣ, ಮಲ್ಲಿಕಾರ್ಜುನ್, ಡಾ. ನಾಗರಾಜ್, ಎನ್.ಜೆ. ರಾಜಶೇಖರ್ ಮೊದಲಾದವರಿದ್ದರು.