ಶಿವಮೊಗ್ಗ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಇಂದು ನಗರದ ಪ್ರಧಾನ ಅಂಚೆ ಕಛೇರಿ ಆವರಣದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರದ ಕಛೇರಿ ಆರಂಭಕ್ಕೆ ಸ್ಥಳ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದೇ ಇಲ್ಲವಾಗಿದೆ. ಇದರಿಂದಾಗಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ ಮುಖ್ಯಮಂತ್ರಿಗಳೂ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹಗುರವಾಗಿ ಮಾತನಾಡಿ ದ್ದಾರೆ. ರಾಜ್ಯದ ಗೃಹಖಾತೆ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದಿತ್ತು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯನವರಿಗೆ ಬಂಟ್ವಾಳ ಘಟನೆ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ನಿವೃತ್ತ ಅಧಿಕಾರಿಗೆ ಸೂಚಿಸುವಂತಹ ಪರಿಸ್ಥಿತಿ ಬಂದಿದೆ ಎಂದರೆ ರಾಜ್ಯದ ಆಡಳಿತ ವೈಖರಿ ಹೇಗಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ಸಚಿವರುಗಳಾದ ಯು.ಟಿ. ಖಾದರ್ ಮತ್ತು ರಮಾನಾಥ್ ರೈ ಇವರುಗಳು ಶೋಭಾ ಕರಂ ದ್ಲಾಜೆ ಹಾಗೂ ನಳೀನ್‌ಕುಮಾರ್ ಕಟೀಲ್ ರವರಿಗೆ ಸವಾಲು ಹಾಕುವಂತಹ ಮಾತುಗಳನ್ನಾ ಡುತ್ತಿ ದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳನ್ನಾಡಲಿ, ಆಗ ನಾವು ಸ್ವೀಕರಿಸುತ್ತೇವೆ. ಆದರೆ ಈಗ ಬೇಕಾಗಿರುವುದು ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ಬೇಕಾಗಿದೆ. ಅದನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಲಿ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ಮಳೆ ಕುಂಠಿತ ಗೊಂಡಿದೆ. ಕೇಂದ್ರ ಸರ್ಕಾರ ಮಳೆ ಕೊರತೆ ಉಂಟಾ ಗಿರುವ ೧೬ ರಾಜ್ಯಗಳ ವರದಿಯನ್ನು ತರಿಸಿಕೊಂಡು ವಿಶೇಷ ಅನುದಾನವನ್ನು ಮತ್ತು ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಅದನ್ನು ರಾಜ್ಯ ಸರ್ಕಾರ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿಲ್ಲ ಎಂದು ಆರೋಪಿಸಿದರು.
ಅವಧಿಗೆ ಮುನ್ನ ಚುನಾವಣೆ ನಡೆಯಲಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಈ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಕಾದು ನೋಡೋಣ ಎಂದು ಹೇಳಿದರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಈಗಾಗಲೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಸಾಲ ಮನ್ನಾ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಒಂದು ಲಕ್ಷ ರೂ.ಗಳವರೆಗೆ ಸಾಲವನ್ನು ಆಯಾ ರಾಜ್ಯ ಸರ್ಕಾರಗಳು ಮನ್ನಾ ಮಾಡಿವೆ. ಆ ರಾಜ್ಯ ಸರ್ಕಾರಗಳು ಕೇಂದ್ರದಿಂದ ಯಾವುದೇ ನೆರವು ಪಡೆದಿಲ್ಲ. ಅದೇ ರೀತಿ ನಮ್ಮ ರಾಜ್ಯ ಸರ್ಕಾರವೂ ಸಹ ರಾಜ್ಯದ ರೈತರ ಒಂದು ಲಕ್ಷ ರೂ.ಗಳವರೆಗಿನ ಸಾಲವನ್ನು ಮನ್ನಾ ಮಾಡಬೇಕು. ಎಲ್ಲದಕ್ಕೂ ಕೇಂದ್ರದ ಕಡೆ ಕೈ ತೋರಿಸುವಂತಹ ಕಾರ್ಯ ಮಾಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಬಿಎಸ್‌ಎನ್‌ಎಲ್‌ನ ಡಿಜಿಎಂ ಶಿವಸ್ವಾಮಿ, ವಿ.ಸಿ. ಹಿರೇಮಠ್, ಪಿಆರ್‌ಓ ಶಶಿಧರ್ ಮೊದಲಾದವರು ಉಪಸ್ಥಿತರಿದ್ದರು.