ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ (54) ಅವರು 6 ತಿಂಗಳ ಹಿಂದೆ ನಿಧನ ಹೊಂದಿದ್ದರು. ಆದರೆ ಈಗ ಸರ್ಕಾರವು ಅವರನ್ನು ಸೇಡಂನಿಂದ ಕೊಡಗಿಗೆ ವರ್ಗಾವಣೆ ಮಾಡಿದೆ. ಜು. 9ರಂದು ಈ ವರ್ಗಾವಣೆಯ ಆದೇಶ ಹೊರಡಿಸಿ ನಗೆಪಾಟಲಿಗಿಡಾಗಿದೆ.
ನಗರಾಭಿವೃದ್ಧಿ ಇಲಾಖೆಯು ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಅವರನ್ನು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಅಶೋಕ ಭೀಮರಾಯ ಪುಟಪಾಕ್ ಅವರು ಸೇಡಂ ಪುರಸಭೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಯಲ್ಲಿದ್ದರು. ಅನಾರೋಗ್ಯದಿಂದಾಗಿ ಅವರು ಸೇಡಂನಲ್ಲಿ ಜ.12ರಂದು ನಿಧನಹೊಂದಿದ್ದರು.
ಈ ಕುರಿತು ಪೌರಾಡಳಿತ ವಿಭಾಗಕ್ಕೆ ಮಾಹಿತಿ ಇಲ್ಲದೆ ಇರುವುದು ಸೋಜಿಗವಾಗಿದೆ. ಸೇಡಂ ಪುರಸಭೆಯಲ್ಲಿಯೇ ಅಶೋಕ ಅವರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ಎಂಜಿನಿಯರ್ ಸಂಪತ್‌ಕುಮಾರ ಅವರನ್ನೂ ಕೊಡಗು ಜಿಲ್ಲೆಯ ವಿರಾಜಪೇಟೆ ಪುರಸಭೆ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.