ಕುರ್ಚಿ ಭದ್ರತೆಯತ್ತ ಸಿದ್ಧು ಚಿತ್ತ

ಬಿಜೆಪಿ ವರಿಷ್ಠರು ಈಗಾಗಲೇ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದೇ ಘೋಷಿಸಿದ್ದಾರೆ. ಜೆಡಿಎಸ್ ಕೂಡಾ ಕುಮಾರಸ್ವಾಮಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಸಾರಿದೆ.
ಅದರೆ ಕಾಂಗ್ರೆಸ್ ವರಿಷ್ಠರು ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಗುಟ್ಟಾಗಿ ಇಟ್ಟಿದೆ.
ಇದು ಒಂದು ರೀತಿಯಲ್ಲಿ ಸಿದ್ದು ನಾಯಕರಾದ ಡಾ.ಜಿ. ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅಂತಹವರಿಗೆ ಹೊಸ ಹುರುಪು ತಂದು ಕೊಟ್ಟಿದೆ. ಅದರೆ ಇದು ಹಾಲೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧು ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷವು ಚುನಾವಣೆ ಎದುರಿಸಲಿದೆ ಎಂದು ಹೈಕಮಾಂಡ್ ಈಗಾಗಲೇ ಘೋಷಣೆ ಮಾಡಿದೆ. ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯಾದಾದ್ಯಂತ ಪರಿವರ್ತನಾ ಯಾತ್ರೆ ನಡೆಸುತ್ತಿದ್ದು, ಆರಂಭದಲ್ಲಿ ಅಷ್ಟೇನೂ ಜನಾಕರ್ಷಣೆ ಪಡೆಯದ ಬಿಎಸ್‌ವೈ ಯಾತ್ರೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಭಾರೀ ಯಶಸ್ಸು ಗಳಿಸಿದೆ.
ಬಿಜೆಪಿ ಹವಾ ಸೃಷ್ಟಿಯಾಗದಂತೆ ತಡೆಗಟ್ಟುವ ಜೊತೆಗೆ ಆಡಳಿತ ವಿರೋಧಿ ಅಲೆ ಏಳದಂತೆ ಹಿಮ್ಮೆಟ್ಟಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಸಾಧನಾ ಯಾತ್ರೆ ವ್ಯಕ್ತಪಡಿಸುತ್ತಿದ್ದಾರೆ.
ಸಾಧನಾ ಯಾತ್ರೆಗೆ ದೊರೆತ ಅಭೂತ ಪೂರ್ವ ಜನ ಬೆಂಬಲದಿಂದಾಗಿ ಹೆಚ್ಚು ಉತ್ಸಾಹಗೊಂಡಿರುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ದು, ಸಮೀಕ್ಷಾ ಫಲಿತಾಂಶಗಳು ಬಿಜೆಪಿಗೆ ಪೂರಕವಾಗಿ ಹೊರ ಹೊಮ್ಮುತ್ತಿಲ್ಲ. ಈವರೆಗೆ ನಡೆಸಲಾದ ಐದಾರು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರಕದಿದ್ದರೂ , ಉಳಿದ ಪಕ್ಷಗಳಿಗಿಂತ ಮುಂಚೂಣಿ ಯಲ್ಲಿದ್ದು, ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ನಿಧಾನ ನಡೆಯ ಸಿದ್ಧರಾಮಯ್ಯ ಅವರ ಮನಸ್ಥಿತಿ ಈಗ ಬದಲಾಗಿದ್ದು, ಉತ್ಸಾಹ ಭರಿತರಾ ಗಿದ್ದಾರೆ.
ಹೀಗಾಗಿ ಯಾತ್ರೆ ಸಂದರ್ಭದಲ್ಲಿಯೇ ಕ್ಷೇತ್ರಗಳಲ್ಲಿನ ಮತದಾರರ ನಾಡಿ ಮಿಡಿತ ಅರಿಯುತ್ತಿರುವ ಅವರು, ಅದಷ್ಟು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ಬೆಂಗಳೂರು ಒಂದರಲ್ಲೇ ತಮ್ಮ ಬೆಂಬಲಿಗರು ಜಾತಿ ಬಾಂಧವರಿಂದ ಭೈರತಿ ನಾಗರಾಜ್ ನಾಲ್ವರಿಗೆ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದಾರೆ. ಸಿಎಂ ಆಪ್ತರಾದ ದಿನೇಶ್ ಅಮೀನ್‌ಮಟ್, ಅಧಿಕಾರಿಗಳಾದ ಶಿಂಧೆ, ಹೀರಾನಾಯ್ಕರಿಗೂ ಟಿಕೆಟ್ ಪಡೆಯಲು ಹೈಕಮಾಂಡ್‌ನಿಂದ ಸಮ್ಮತಿ ಪಡೆದಿದ್ದಾರೆನ್ನಲಾಗಿದೆ.
ಅಲ್ಲದೇ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ತಮ್ಮ ದಕ್ಷ ಅಡಳಿತವೇ ಕಾರಣವೆಂದು ಬಿಂಬಿಸುವುದು ಸಿದ್ಧು ಅವರ ಗುರಿಯಾಗಿದೆ.
ಹೀಗಾಗಿ ಈಗಿನಿಂದಲೇ ಕುರ್ಚಿ ಭದ್ರ ಪಡಿಸಿಕೊಳ್ಳಲು ಸಿದ್ಧು ಯೋಜನೆ ರೂಪಿಸುತ್ತಿದ್ದು, ಎದುರಾಳಿಗಳನ್ನು ಸುಲಭವಾಗಿ ಹಿಮ್ಮಟ್ಟಿಸಲು ಕಾರ್ಯ ತಂತ್ರ ರೂಪಿಸುತ್ತಿದ್ದಾರೆ.