ಗಯಾನಾ: T20 ವಿಶ್ವಕಪ್ ನಲ್ಲಿ 2022ರ ಸೇಡು ತೀರಿತು. ಭಾರತ ಫೈನಲ್ ತಲುಪಿತು. ಇಂಗ್ಲೆಂಡ್ ತಂಡ 2022ರಲ್ಲಿ ಭಾರತವನ್ನು ಹೇಗೆ ಸೋಲಿಸಿತ್ತೋ ಅದೇ ರೀತಿ ಭಾರತ ತಂಡ ಈ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. 68 ರನ್ ಗಳ ಭರ್ಜರಿ ಗೆಲುವು ಭಾರತದ್ದಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ, ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿತ್ತು. 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜೋಸ್ ಬಟ್ಲರ್ ನೇತೃತ್ವದ ಆಂಗ್ಲರ ತಂಡವು, ಸ್ಪಿನ್ನರ್‌ಗಳ ಮೋಡಿಗೆ ಬಲಿಯಾಗಿ 16.4 ಓವರ್‌ಗಳಲ್ಲಿ 103 ರನ್ ಗಳಿಸುಷ್ಟರಲ್ಲಿ ಆಲೌಟ್ ಆಗಿದೆ. ಆ ಮೂಲಕ 68 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
ರೋಹಿತ್ ಶರ್ಮಾ (57), ಸೂರ್ಯಕುಮಾರ್ ಯಾದವ್ (47) ಒಬ್ಬರಾದ ಮೇಲೊಬ್ಬರು ಔಟಾದಾಗ ಭಾರತ ಪಾಳಯದಲ್ಲಿ ಆತಂಕ ಕಾಣಿಸಿಕೊಂಡಿತ್ತು. ಆದರೆ ಹಾರ್ದಿಕ್ ಪಾಂಡ್ಯ ( 23), ರವೀಂದ್ರ ಜಡೇಜಾ ( 17) ಮತ್ತು ಅಕ್ಷರ್ ಪಟೇಲ್ (10) ಭಾರತದ ಇನ್ನಿಂಗ್ಸ್ ಹಿಗ್ಗಿಸಿದರು. ಕೊನೆಯಲ್ಲಿ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾವು 2022ರ ಸೆಮಿಫೈನಲ್‌ನಲ್ಲಿ ಸೋತಿದ್ದಕ್ಕೆ ಸೇಡು ತೀರಿಸಿಕೊಂಡಂತಾಗಿದೆ.
2007ರಲ್ಲಿ ಆರಂಭವಾದ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮೊದಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಆನಂತರದಲ್ಲಿ ಕಳೆದ 17 ವರ್ಷಗಳಲ್ಲಿ ಟೀಂ ಇಂಡಿಯಾ 2014ರಲ್ಲಿ ಫೈನಲ್ ಪ್ರವೇಶಿಸಿದರೂ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿತ್ತು. ಈಗ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಭಾರತ 10 ವರ್ಷಗಳ ಬಳಿಕ ಫೈನಲ್ ತಲುಪಿದ್ದು, ಪ್ರಶಸ್ತಿ ಗೆಲ್ಲಲು ಒಂದು ಮೆಟ್ಟಿಲು ಮಾತ್ರ ಬಾಕಿಯಿದೆ.
ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿ ಉಳಿದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಫೈನಲ್ ಪಂದ್ಯವನ್ನು ಆಡಲಿವೆ.
ಸ್ಪಿನ್ನರ್ಸ್ಗಳ ಮೋಡಿಗೆ ಇಂಗ್ಲೆಂಡ್ ‘ಬಲಿ’
172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ನಾಯಕ ಜೋಸ್ ಬಟ್ಲರ್ ಉತ್ತಮ ಆರಂಭವನ್ನೇ ಒದಗಿಸಿದ್ದರು. 3 ಓವರ್‌ಗಳಲ್ಲಿ ಫಿಲ್ ಸಾಲ್ಟ್ ಜೊತೆಗೆ 26 ರನ್ ಕಲೆ ಹಾಕಿದ್ದರು. ಈ ವೇಳೆ ದಾಳಿಗಿಳಿದ ಸ್ಪಿನ್ನರ್ ಅಕ್ಷರ್ ಪಟೇಲ್, ತಾನೆಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುವಲ್ಲಿ ಸಫಲರಾದರು.
ಆ ಬಳಿಕ ದಾಳಿಗಿಳಿದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಆದರು. ತನ್ನ ಮೊದಲನೇ ಓವರ್‌ನ ಮೊದಲ ಬಾಲ್‌ನಲ್ಲಿ ವಿಕೆಟ್(ಜೋಸ್ ಬಟ್ಲರ್) ಗಳಿಸಿದಂತೆ ಅಕ್ಷರ್ ಪಟೇಲ್ ಎರಡನೇ ಓವರ್‌ನ ಮೊದಲನೇ ಎಸೆತ(ಜಾನಿ ಬೈರ್‌ಸ್ಟೋವ್) ಹಾಗೂ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್(ಮೊಯೀನ್ ಅಲಿ) ಪಡೆಯುವ ಮೂಲಕ ವಿಶಿಷ್ಟ ಸಾಧನೆಗೈದರು.
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿಗೈದ ಅಕ್ಷರ್ ಪಟೇಲ್ 23ಕ್ಕೆ 3 ವಿಕೆಟ್ ಗಳಿಸಿದರೆ, ಕುಲ್‌ದೀಪ್ ಯಾದವ್ 19ಕ್ಕೆ 3 ವಿಕೆಟ್ ಗಳಿಸಿ ಮಿಂಚಿದರು. ಉಳಿದಂತೆ ಬುಮ್ರಾ 2 ವಿಕೆಟ್ ಪಡೆಯುವಲ್ಲಿ ಸಫಲರಾದರು.
ಇಂಗ್ಲೆಂಡ್ ಪರ ಬ್ಯಾಟಿಂಗ್‌ನಲ್ಲಿ ಹ್ಯಾರಿ ಬ್ರೂಕ್ 25 ರನ್, ಜೋಸ್ ಬಟ್ಲರ್ 23 ಹಾಗೂ ಬೌಲರ್ ಜೋಫ್ರಾ ಆರ್ಚರ್ 21 ರನ್ ಗಳಿಸಲಷ್ಟೇ ಶಕ್ತರಾದರು.