ಬೆಂಗಳೂರು: ಜು. 31ರ ವರೆಗೆ ತಮಿಳುನಾಡಿಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ತುರ್ತು ಸಭೆ ನಡೆಸಿದರು.
ಜಲ ಸಂಪನ್ಮೂಲ ಇಲಾಖೆಯೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಭಾಗದ ಸಚಿವರು ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಮಾತನಾಡಿದರು.
ಕಾವೇರಿ ನೀರು ನೀರಾವರಿ ನಿಯಂತ್ರಣಾ ಸಮಿತಿ ನಿತ್ಯ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ಸೂಚನೆ ನೀಡಿದೆ. ಯಾವುದೇ ತೀರ್ಮಾನ ಮಾಡಬಾರದು ಅಂತ ಮನವಿ ಮಾಡಿದ್ದೇವೆ. ಇದರ ಹೊರತಾಗಿಯೂ ಸಿಡಬ್ಲ್ಯೂಆರ್‌ಸಿ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಹೇಳಿದೆ ಎಂದು ವಿವರಿಸಿದ್ದಾರೆ.
ಸಿಡಬ್ಲ್ಯೂಆರ್‌ಸಿ ಆದೇಶದ ವಿರುದ್ಧವಾಗಿ ಅಪೀಲು ಹಾಕಲು ನಿರ್ಧಾರ ಮಾಡಿದ್ದೇವೆ. ನೀರು ಬಿಡಲು ಸಾಧ್ಯವಿಲ್ಲ ಎಂದು ಅರ್ಜಿ ಹಾಕಲು ನಿರ್ಧಾರ ಮಾಡಿದ್ದೇವೆ. ಕಾವೇರಿ ರಿವರ್ ಮ್ಯಾನೇಜ್ಮೆಂಟ್ ಅಥಾರಿಟಿ ಮುಂದೆ ಮೇಲ್ಮನವಿ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸರ್ಕಾರ ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಜುಲೈ 14ರ ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆಯಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.