ಸರ್ಜಿ ಗುಂಡು ಪಾರ್ಟಿಯಿಂದ  ಬಿಜೆಪಿಗೆ ಅಪಕೀರ್ತಿ:  ಕೆ.ಎಸ್.ಈಶ್ವರಪ್ಪ ಟೀಕೆ

ಶಿವಮೊಗ್ಗ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತ ಪಡೆಯುವ ಸಲುವಾಗಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್‌ ಸರ್ಜಿ ಅವರು ಪದವೀಧರರಿಗೆ ಗುಂಡು, ತುಂಡು ಪಾರ್ಟಿ ಕೊಟಿದ್ದಾರೆನ್ನಲಾದ ಘಟನೆಗೆ ಮಾಜಿ ಸಚಿವ ಹಾಗೂ ಬಿಜೆಪಿ ಉಚ್ಚಾಟಿತ ನಾಯಕ ಕೆ.ಎಸ್.‌ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು,ಪದವೀಧರರಿಗೆ ಗುಂಡು ಪಾರ್ಟಿ ಕೊಡುವ ಮೂಲಕ ಈ ಚುನಾವಣೆಯನ್ನು ಸರ್ಜಿ ಗುಂಡುಪಾರ್ಟಿಯನ್ನಾಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿಯ  ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರಿಗೆ ಸಲ್ಲುತ್ತದೆ ಎಂದು ಟೀಕಿಸಿದ್ದಾರೆ.
ಬುಧವಾರ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅನೇಕ ಚುನಾವಣೆಯನ್ನು ಎದುರಿಸಿದ್ದೇವೆ ಮತ್ತು ಗೆದ್ದಿದ್ದೇವೆ. ಅನಂದ ರಾವ್ ಅವರನ್ನು ಇದೇ ಎಂಎಲ್ ಸಿ ಸ್ಥಾನದಲ್ಲಿ ಗೆಲ್ಲಿಸಿದ್ದೇವೆ. ಅಯನೂರು ಅವರನ್ನು ಎಂ ಎಲ್ ಸಿ, ಎಂಪಿ ಸ್ಥಾನದಲ್ಲಿ ಗೆಲ್ಲಿಸಿದ್ದೇವೆ. ನಾನು ೫ ಬಾರಿ ಗೆದ್ದು ಶಾಸಕನಾಗಿದ್ದೇನೆ. ಇಷ್ಟೆಲ್ಲವನ್ನು ನಡೆಸುವಾಗ ಸರಿದಾರಿಯಲ್ಲೇ ನಡೆದಿದ್ದೇವೆ. ಪದವೀಧರ ಕ್ಷೇತ್ರದಲ್ಲಿ ಸರ್ಜಿಯವರಿಂದ ಈಗ ನಡೆಯುತ್ತಿರುವ ಗುಂಡು ಪಾರ್ಟಿ ತುಂಬಾ ನೋವಿನ ಸಂಗತಿ ಎಂದು ಬೇಸರ ಹೊರ ಹಾಕಿದರು.
ಸುಸಂಸ್ಕೃತ ಮನೆತನದ ಸರ್ಜಿ ಈ ರೀತಿ ದಾರಿ ತಪ್ಪಿರುವುದು ದುರಂತ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಸಂದರ್ಭ ನಕ್ಸಲೈಟರು, ಮುಸ್ಲಿಂರು ಸೇರಿ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ಮಾಡಿದಾಗ ಅದರಲ್ಲಿ ಸರ್ಜಿ ಭಾಗವಹಿಸಿದ್ದರು. ಒಬ್ಬ ಹಿಂದು ಕೊಲೆ ಸಂದರ್ಭದಲ್ಲಿ ನ್ಯಾಯ ಕೇಳಬೇಕಾದ ಸಂದರ್ಭದಲ್ಲಿ ಈ ರೀತಿ ನಡೆದುಕೊಂಡವರಿಗೆ ಪಕ್ಷ ಟಿಕೇಟ್ ನೀಡಿರುವುದು ಯಾವ ಮಾತ್ರಕ್ಕೂ ಕ್ಷಮೆಗೆ ಅರ್ಹವಲ್ಲ. ಈ ಹರ್ಷ ಹತ್ಯೆ ಸಂದರ್ಭದಲ್ಲಿ ಸರ್ಜಿ ಆಕ್ರೋಶವನ್ನು ವ್ಯಕ್ತಪಡಿಸಬೇಕಾಗಿತ್ತು. ಇಲ್ಲವೇ ತಟಸ್ಥವಾಗಿಯಾದರೂ ಇರಬೇಕಾಗಿತ್ತು. ಪದವೀಧರರಿಗೆ ಗುಂಡು ಪಾರ್ಟಿ ಮಾಡಿ, ದುಶ್ಚಟಕ್ಕೆ ಹಚ್ಚಿ ಮತಸೆಳೆಯುತ್ತಿರುವುದನ್ನು ಬಿಜೆಪಿಯ ಚಿಂತಕರ ಛಾವಣಿ ಮತ್ತೊಮ್ಮೆ ಯೋಚಿಸಬೇಕಿದೆ. ಈ ಕಾರಣಕ್ಕಾಗಿ ಸರ್ಜಿಯನ್ನು ಮತದಾರರು ೧೦೦%  ಸೋಲಿಸುತ್ತಾರೆ ಎಂದು ಅಭಿಪ್ರಾಯಿಸಿದರು.

ರಘುಪತಿ ಭಟ್ ಅವರು ನಾಮಪತ್ರ ಸಲ್ಲಿಕೆ ಮಾಡಿದ ಮೇಲೆ ನಾಮಪತ್ರ ಹಿಂದೆಗೆದುಕೊಳ್ಳುವ ಕೊನೆ ದಿನವಾದ ಮೇ ೨೦ರವರೆಗೆ ಕಾದೆ. ಬಿಜೆಪಿಯ ಹಿರಿಯರು ಭಟ್ಟರ ಮನವೊಲಿಸಿ, ನಾಮಪತ್ರ ಹಿಂದೆಗೆದುಕೊಳ್ಳಲು ಒಪ್ಪಿಸುತ್ತಾರೆ ಎಂದು ಕೊಂಡಿದ್ದೆ. ಆದರೆ ಆದ್ಯಾವುದು ನಡೆಯದೆ ಇದ್ದಾಗ ೨೧ರಿಂದ ರಘುಪತಿ ಭಟ್‌ ಅವರಿಗೆ ನಾವು ಬೆಂಬಲವನ್ನು ಸೂಚಿಸಲು ಯೋಚಿಸಿದೆವು. ಕರಾವಳಿ ಭಾಗದಲ್ಲಿ ಭಟ್ ಪರವಾಗಿ ಮತಯಾಚಿಸಲು ಹೋದಾಗ ಅಲ್ಲಿಯ ಮತದಾರರ ಬೆಂಬಲ ನೋಡಿ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿದೆ. ಅವರು ೧೦೦ ರಷ್ಟು ಗೆಲ್ಲುತ್ತಾರೆ. ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಮ ಲಕ್ಷ್ಮಣ ಇದ್ದಂತೆ. ರಾಷ್ಟ್ರೀಯ ವಾದದಲ್ಲಿ ನಡೆಯುತ್ತಿರುವ ಮೋದಿ-ಶಾರೇ ನಮಗೆ ಮಾರ್ಗದರ್ಶಕರು. ಸರ್ಜಿಯ ಗುಂಡು ಪಾರ್ಟಿಯ ನಡವಳಿಕೆ ಬೇಸರ ತರಿಸಿದೆ. ೪೦ ವರ್ಷದಿಂದ ಕಟ್ಟಿದ ನನ್ನ ಪಕ್ಷವನ್ನು ಸರ್ಜಿ ಈ ದುಸ್ಥಿತಿಗೆ ತಳ್ಳಿರುವುದು ದುರಂತ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ಶಂಕರ್‍, ಪ್ರಕಾಶ್, ವಾಗೀಶ್, ಹೊನ್ನಾಳಿ ನಾರಾಯಣ ರಾವ್ ಉಪಸ್ಥಿತರಿದ್ದರು.

………………………………..

ಸರ್ಜಿಯವರು ಎಲ್ಲ ಪದವೀಧರರಿಗೆ ಗುಂಡು ಪಾರ್ಟಿಯನ್ನು ಏರ್ಪಡಿಸಿ, ಮತಸೆಳೆಯುತ್ತಿರುವುದು ಅತ್ಯಂತ ಶೋಚನೀಯ. ಈ ಮೂಲಕ ಪದವೀಧರ ಮತದಾರರನ್ನು ಅವರು ದುರುಭ್ಯಾಸಕ್ಕೆ ತಳ್ಳುತ್ತಿದ್ದಾರೆ. ಗುಂಡು ಪಾರ್ಟಿಗೆ ಹೋಗಿದ್ದ ಹಲವು ಪದವೀಧರ ಮತದಾರರು ಬೆಳಗ್ಗೆ ನಶೆ ಇಳಿದ ಮೇಲೆ ನನಗೆ ಪೋನ್ ಮಾಡಿ ಈ ವಿಷಯ ತಿಳಿಸಿದ್ದಾರೆ. ಅನಿವಾರ್ಯ ಕಾರಣ ತಾವು ಈ ಪಾರ್ಟಿಗೆ ಹೋಗಬೇಕಾಗಿರುವುದನ್ನು ವಿವರಿಸಿರುವ ಅವರು, ರಘುಪತಿ ಭಟ್ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.

– ಕೆ.ಎಸ್.‌ ಈಶ್ವರಪ್ಪ, ಮಾಜಿ ಸಚಿವ