ಟಿಡಿಪಿ, ಜೆಡಿಯು ಬೆಂಬಲ: ಕಾದು ನೋಡಿ ಎಂದ ಇಂಡಿಯಾ ಒಕ್ಕೂಟದ ತೇಜಸ್ವಿ ಯಾದವ್‌

ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚನೆಗೆ ಟಿಡಿಪಿ ಹಾಗೂ ಜೆಡಿಯು ಇಂಡಿಯಾ ಮೈತ್ರಿಕೂಟ ಸೇರುತ್ತವೆಯೇ ಎಂಬ ಅನುಮಾನಗಳ ನಡುವೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಕಾದು ನೋಡಿ ಎಂದು ಜನರಿಗೆ ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಕೇಂದ್ರ ಸರ್ಕಾರ ರಚನೆಯ ಕಿಂಗ್‌ ಮೇಕರ್‌ ಆಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಿಸಿದ ವಿಮಾನದಲ್ಲಿಯೇ ಬುಧವಾರ ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸಿದ ಯಾದವ್, ವಿಪಕ್ಷಗಳ ಕೂಟಕ್ಕೆ ನಿತೀಶ್ ಅವರನ್ನು ಕರೆದೊಯ್ಯುವ ಊಹಾಪೋಹಗಳ ಕುರಿತು ಮಾತನಾಡಿದರು. ವಿಮಾನದಲ್ಲಿ ತಮ್ಮ ನಡುವೆ ಪರಸ್ಪರ ಕುಶಲೋಪರಿಗೆ ವಿಚಾರಿಸುವುದಕ್ಕೆ ಮಾತ್ರ ಸಿಮೀತವಾಗಿತ್ತು ಎಂದರು.
ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಪ್ರತಿಪಕ್ಷಗಳು ಸಂಖ್ಯಾಬಲವನ್ನು ಹುಡುಕುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಾದವ್, “ನಾವು ಇಂದು ಸಭೆಗೆ ಬಂದಿದ್ದೇವೆ. ತಾಳ್ಮೆಯಿಂದಿರಿ, ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದರು.

ಈ ಚುನಾವಣೆಯಲ್ಲಿ ಜೆಡಿಯು “ಕಿಂಗ್‌ಮೇಕರ್” ಆಗಿ ಹೊರಹೊಮ್ಮಿದೆ. ಹೊಸ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದನ್ನು “ಕಿಂಗ್ ಮೇಕರ್” ಖಾತ್ರಿಪಡಿಸುತ್ತದೆ. ದೇಶಾದ್ಯಂತ ಜಾತಿ ಗಣತಿ ನಡೆಸುತ್ತದೆ. ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ನಲ್ಲಿ ಬಿಹಾರ ನೀಡಿದ ಶೇ. 75 ರಷ್ಟು ಮೀಸಲಾತಿಗೆ ನ್ಯಾಯಾಂಗ ಪರಿಶೀಲನೆಯಿಂದ ವಿನಾಯಿತಿ ನೀಡುತ್ತದೆ. ”ಬಿಹಾರ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ. ಯಾವುದೇ ಸರ್ಕಾರ ಬಂದರೂ ಕಿಂಗ್ ಮೇಕರ್ ಬಿಹಾರಕ್ಕೆ ವಿಶೇಷ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳಬೇಕು, ನಾವು ನೀಡಿದ ಶೇ 75ರಷ್ಟು ಮೀಸಲಾತಿಯನ್ನು ಶೆಡ್ಯೂಲ್ 9ರ ಅಡಿಯಲ್ಲಿ ತರಬೇಕು ಮತ್ತು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದರು.