ಅಬ್ಬಾ ! ಬೆಂಕಿಯುಗುಳುತ್ತಿದೆ ಭೂಮಿ
“ಭೂಮಿ ಬಾಯಾರಿದೆ… ದಾಹ ತಣಿಸಲು ಮಳೆರಾಯ ಬರಲಿಲ್ಲ. ಮುನಿಸು ಬಿಡು ಮಳೆರಾಯ ಕರುಣೆ ತೋರು ನಮ್ಮತ್ತ ಎಂದು ಮಣ್ಣಿನ ಮಕ್ಕಳು ಗೋಗರೆಯುತ್ತಿದ್ದರೂ ಕಿವುಡಾಗಿದೆ ವರುಣ ದೇವನಿಗೆ” ಎಂಬ ಕವಿಯ ಮಾತು ಪ್ರಸ್ತುತ ದಿನಗಳಿಗೆ ಹೆಚ್ಚು ಅನ್ವಯವಾಗುತ್ತಿದೆ.
ಅಬ್ಬಾ ! ಎಂಥಾ ಬಿಸಿಲಿದು ನೆತ್ತಿ ಸುಡುತ್ತಿದೆ. ಭೂಮಿ ಕಾವೇರಿಬಿಟ್ಟಿದೆ. ಡಾಂಬರು ರಸ್ತೆಯಂತೂ ಬೆಂಕಿ ಉಗುಳುತ್ತಿದೆ. ಆಗಸವಂತೂ ಬೆಂಕಿ ಮಳೆ ಸುರಿಸುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿದ್ದರೂ ಭೂಮಿಯ ಕಾವು ಹೆಚ್ಚುತ್ತಲೇ ಇದೆ.
ರಕ್ತದೊತ್ತಡ, ಹೃದಯರೋಗ, ಮಧುಮೇಹ ಇರುವವರಂತೂ ಬಿಸಿಲಿಗೆ ಮೈ ಚಾಚುವಂತಿಲ್ಲ. ಅನಿವಾರ್ಯವಾಗಿ ಒತ್ತಡದ ಕಾರಣ ಬಿಸಿಲ ವೇಳೆ ಹೊರ ನಡೆದರೆ ಮನೆಗೆ ಸುರಕ್ಷಿತವಾಗಿ ಹಿಂದಿರುಗುವ ಖಾತರಿ ಇಲ್ಲ. ಯಜಮಾನರು ಇನ್ನೂ ಬರಲಿಲ್ಲ. ಬಿಸಿಲಿಗೆ ತಲೆ ಸುತ್ತಿ ಬಂದು ಎಲ್ಲಿ ಬಿದ್ದು ಬಿಟ್ಟರೋ ಎಂದು ಮನೆ ಮಂದಿಯೆಲ್ಲಾ ಆತಂಕ ಪಡುವ ವಾತಾವರಣ ಸೃಷ್ಟಿಯಾಗಿದೆ.
ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲಿ ಇತ್ತೀಚೆಗೆ ವ್ಯತ್ಯಾಸವೇ ಇಲ್ಲವಾಗಿಬಿಟ್ಟಿದೆ. ಧೋ… ಎಂದು ನೆತ್ತಿಯ ಮೇಲೆ ಒಂದೇ ಸಮನೆ ಮಳೆ ಸುರಿಯುತ್ತಿದ್ದ ಕಾಲವೊಂದಿತ್ತು. ಮಳೆಗಾಲವೆಂದರೆ ಛತ್ರಿ ಹಿಡಿದು, ರೈನ್‌ಕೋಟ್ ಧರಿಸಿ ಶೀತಲ ಗಾಳಿಗೆ ಮೈಯೊಡ್ಡುವುದೇ ಹಿತವೆನಿಸುತ್ತಿತ್ತು.
ಅಂತೆಯೇ ಮೈ ಕೊರೆಯುವ ಛಳಿಗೆ ಬೆಚ್ಚನೆ ಸ್ವೆಟರ್ ಧರಿಸಿ ವಾಯುವಿಹಾರ ನಡೆಸುವುದು ಹೊಗೆಭರಿತ ಬಿಸಿ ಬಿಸಿ ಕಾಫಿ ಹೀರುವುದು ಆಹ್ಲಾದಕರ ಸಂಗತಿಯಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ, ಚಳಿಗಾಲದ ಹಿತಾನುಭವವಾಗುತ್ತಿಲ್ಲ. ಬದಲಿಗೆ ಎಲ್ಲಾ ಕಾಲವೂ ನೆತ್ತಿ ಸುಡುವ ಬೇಸಿಗೆಯಾಗಿ ಪರಿಣಮಿಸಿದ್ದು, ಪ್ರಕೃತಿಯಲ್ಲಿನ ಏರುಪೇರುಗಳಿಂದಾಗಿ ಎಲ್ಲ ಕಾಲವೂ ಒಂದೇ ಎಂಬಂತಾಗಿದೆ.
ಅದರಲ್ಲೂ ಬೇಸಿಗೆಯನ್ನು ಕಳೆಯುವುದು ಅತ್ಯಂತ ಪ್ರಯಾಸದ ಸಂಗತಿಯಾಗಿದೆ. ಕೇವಲ ಹತ್ತಾರು ವರ್ಷಗಳ ಹಿಂದೆ ಹೆದ್ದಾರಿ, ಊರದಾರಿ, ನಗರ ಪ್ರದೇಶ ಸೇರಿದಂತೆ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ವರ್ಷಗಳ ಹಳೆಯದಾದ ಬೃಹದಾಕಾರದ ಸಾಲು ಮರಗಳಿರುತ್ತಿದ್ದವು.