ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಶೃಂಗೇರಿ ನಾಗರಾಜ್ ಮಾಹಿತಿ
ಶಿವಮೊಗ್ಗ : ಶಿವಮೊಗ್ಗದ ಹೆಮ್ಮೆಯ ಶ್ರೀಗಂಧ ಸಾಂಸ್ಕøತಿಕ ಸಂಸ್ಥೆ ವತಿಯಿಂದ ನ.03 ರಂದು ಸಂಜೆ 6.00 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ‘ಸುಗಮ ಸಂಭ್ರಮ’ ಸುಗಮ ಸಂಗೀತ ಕ್ಷೇತ್ರದ ಹಿರಿಯ ಸಾಧಕರಿಗೆ ಸನ್ಮಾನ ಹಾಗೂ ಗೀತ ನಮನ ಕಾರ್ಯಕ್ರಮವನದನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲ ಶೃಂಗೇರಿ ನಾಗರಾಜ್ ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸುಗಮ ಸಂಗೀತದ ಖ್ಯಾತ ಹಿರಿಯ ಕಲಾವಿದರಾದ ಹೊ.ನಾ.ರಾಘವೇಂದ್ರ (ಗರ್ತಿಕೆರೆ ರಾಘಣ್ಣ), ಎಂ.ಕೆ.ಜಯಶ್ರೀ, ಪುತ್ತೂರು ನರಸಿಂಹ ನಾಯಕ್ ಹಾಗೂ ಕನ್ನಡ ನಾಡು- ನುಡಿಗೆ ವಿಶೇಷವಾಗಿ ಸೇವೆ ಸಲ್ಲಿಸಿದ ಶಿವಮೊಗ್ಗದ ಅಭಿರುಚಿ ಸಂಸ್ಥೆಯ ಅಧ್ಯಕ್ಷ ಡಾ.ಶಿವರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಶಂಕರನಾರಾಯಣ ಶಾಸ್ತ್ರಿ ಹಾಗೂ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ. ಕಿರಣ್ ದೇಸಾಯಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಕವಿಯ ಭಾವನೆಯನ್ನು ಎತ್ತಿಹಿಡಿದು ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಟ್ಟು ಸೂಕ್ತವಾದ ಸಂಗೀತವನ್ನು ಸಂಯೋಜಿಸಿ ಹಾಡುವ ಭಾವಗೀತೆಗಳು ಕರ್ನಾಟಕದಲ್ಲಿ ಮಾನ್ಯತೆ ಪಡೆದ ಕಲೆ, ಇಂತಹ ಭವ್ಯ ಪರಂಪರೆಯ ಮೂವರು ಮಹಾನ್ ಸಾಧಕಕ ಕಲಾವಿದರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಈ ಮಹಾನ್ ಕಲಾವಿದರು ಹಾಡಿ ಜನಪ್ರಿಯಗೊಳಿಸಿದ ಕನ್ನಡ ಗೀತೆಗಳ ಗಾಯನವನ್ನು ಶಿವಮೊಗ್ಗದ ಹೆಸರಾಂತ ಸಂಗೀತ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಕಲಾವಿದರು ಹಾಡಿ ಗೀತನಮನ ಸಲ್ಲಿಸಲಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಹಿಸಲಿದ್ದು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ, ವಿನಯ್, ಉಮೇಶ್ ಆರಾಧ್ಯ, ಬಾಲು, ಹರೀಶ್ ಕಾರ್ಣಿಕ್, ಕುಪೇಂದ್ರ, ಮೋಹನ್‍ರಾವ್ ಜಾಧವ್ ಉಪಸ್ಥಿತರಿದ್ದರು.