ಕಥೆ : ಲೇಡಿ ಕಂಡಕ್ಟರ್

PC : Internet

ಕಥೆ : ಬಿ.ನಾಗರಾಜ್ 

ಕೆಂಪು ಬಸ್ಸಿಗೂ ನನಗೂ ಅವಿನಾ ಭಾವ ಸಂಬಂಧ. ನನ್ನ ದಿನ ನಿತ್ಯದ ಓಡಾಟದಲ್ಲಿ ಬಸ್ ಪ್ರಯಾಣ ಬಿಟ್ಟರೆ ನನ್ನಂಥವರು ಕಾರು ಕೊಳ್ಳು ವುದು ಕನಸಿನ ಮಾತು. ಟ್ರಾಫಿಕ್ ಕಿರಿಕಿರಿಯಲ್ಲಿ ಬೈಕ್ ಓಡಿಸುವುದೆಂ ದರೆ ಆಗದ ಮಾತು. ಹೀಗಾಗಿ ಸಾರಿಗೆ ಸಂಸ್ಥೆಯ ಕೆಂಪು ಬಸ್‌ಗಳೇ ನಮಗೆ ಸ್ವಂತ ವಾಹನ.

ನನ್ನ ಜೀವನದ ಕಾಲುಭಾಗ ಕ್ಕಿಂತ ಜಾಸ್ತಿ, ಅರ್ಧ ವಯಸ್ಸಿಗಿಂತ ಸ್ವಲ್ಪ ಕಡಿಮೆ ಬಸ್ ಪ್ರಯಾಣ ದಲ್ಲೇ ಆಯುಷ್ಯ ಕಳೆದಿದ್ದೇನೆ. ಕಷ್ಟವೋ, ಸುಖವೋ, ನಮ್ಮ ಜೀವನ ಬಸ್ ಪ್ರಯಾಣ ಸೂರ್ಯೋ ದಯದಿಂದ ಆರಂಭ ಗೊಂಡು ಸೂರ್ಯಾಸ್ತದೊಂದಿಗೆ ಮುಗಿ ಯುತ್ತದೆ.
ಪುರುಷ ಪ್ರಧಾನ ಸಮಾಜವೆಂ ಬಂತೆ ಈ ಬಸ್ಸುಗಳು ಕೂಡಾ ಪುರುಷ ಪ್ರಧಾನವಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದ್ದು, ಪುರುಷ ಕಂಡಕ್ಟರ್ ಜಾಗಕ್ಕೆ ಸಾಕಷ್ಟು ಮಹಿಳಾ ಕಂಡಕ್ಟರ್ ಬಂದಿದ್ದಾರೆ. ಎಲ್ಲರ ಬಾಯಲ್ಲೂ ಈಗ ಕಂಡ ಕ್ಟರ್ ಹೋಗಿ ಲೇಡಿ ಕಂಡಕ್ಟರ್ ಶಬ್ಧ ಕೇಳಿ ಬರುತ್ತಿದೆ.
ಸಾಮಾನ್ಯವಾಗಿ ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋದಾಗ ಮಾತ್ರ ಲೇಡಿ ಕಂಡಕ್ಟರ್‌ಗಳನ್ನು ನೋಡುತ್ತಿದ್ದೆ. ಈಗ ನಮ್ಮೂರಲ್ಲೇ ಉತ್ತರ ಕರ್ನಾಟಕದ ಬಹಳಷ್ಟು ಮಹಿಳೆಯರು ಕಂಡಕ್ಟರ್ ಹುದ್ದೆಗೆ ಬಂದಿದ್ದಾರೆ. ಮಹಿಳಾ ಕಂಡಕ್ಟರ್ ಬಂದ ಮೇಲೆ ಬಸ್ಸಿನ ವಾತಾ ವರಣವೇ ಬದಲಾಗಿಬಿಟ್ಟಿದೆ.

ಸದಾ ಕಾಲೇಜು ಹುಡುಗ- ಹುಡುಗಿಯರಿಂದ ತುಂಬಿ ತುಳು ಕುವ ಬಸ್ಸಿನಲ್ಲಿ ಪ್ರಭಾವಶಾಲಿಗಳ ಮಕ್ಕಳದೇ ಕಾರುಬಾರು. ಹುಡುಗಿ ಯರ ಮುಂದೆ ಹೀರೋಯಿಸಂ ತೋರಿಸಲು ಆಡದ ಆಟವಿಲ್ಲ. ಒಟ್ಟಿ ನಲ್ಲಿ ಪುರುಷ ಕಂಡಕ್ಟರ್ , ಡ್ರೈವರ್ ಗಳನ್ನು ಹೆದರಿಸಿಕೊಂಡು ಮೆರೆಯು ತ್ತಿದ್ದರು.
ಇದೀಗ ಮಹಿಳಾ ಕಂಡಕ್ಟರ್‌ಗಳ ಕಾಲ. ಒಂದು ಸಲ ಬಹುತೇಕ ಕಾಲೇ ಜು ಹುಡುಗ-ಹುಡುಗಿಯರಿಂದ ಬಸ್ಸು ತುಂಬಿ ತುಳುಕುತ್ತಿತ್ತು. ಲೇಡಿ ಕಂಡಕ್ಟರ್,ವಿದ್ಯಾರ್ಥಿನಿಯರ ಪಾಸ್ ಪರಿಶೀಲಿಸುತ್ತಾ ಮುಂದೆ ಸಾಗಿದ್ದರು.

ಹುಡುಗಿಯರ ಮೈಗೆ ಮೈಗೆ ತಗುಲಿಸಿಕೊಂಡು ನಿಂತಿದ್ದ ಪುಢಾರಿ ಯತ್ತ ಅವರ ಗಮನ ಹರಿಯಿತು. ಪಕ್ಕಕ್ಕೆ ಸರಿದು ನಿಂತುಕೋ ಎಂದು ಸೂಚಿಸಿದರು. ‘ನಾನು ಇಲ್ಲೇ ನಿಲ್ಲೋದು ನೀ ಏನ್ ಮಾಡ್ಕೋ ತೀಯಾ ಮಾಡ್ಕೋ ಹೋಗು ’ ಅಂದ. ಮೊದಲೇ ಬಸ್ ರಶ್ ಇದ್ದು ದರಿಂದ ಟಿಕೆಟ್ ತೆಗೆಯುವ ಗಡಿಬಿಡಿ ಯಲ್ಲಿದ್ದ ಮೇಡಂಗೆ ಎಲ್ಲಿಲ್ಲದ ಕೋಪ ಬಂತು. ‘ಯಾಕಲೇ ಮೈಯ್ಯಾಗ ನೆಟ್ಟ ಗೈತಿ ಇಲ್ಲವೋ, ಅವ್ವ, ಅಪ್ಪ, ಇದನ್ನೇ ಮಾಡ್ಲಿಕ್ಕೆ ಕಾಲೇಜಿಗೆ ಕಳ್ಸಾರೇನು, ಮಾನ, ಮರ‍್ಯಾದಿ ಸ್ವಲ್ಪವಾದ್ರೂ ಐತೋ, ಇಲ್ಲ ವೋ ಬದಿಗೆ ಸರಿ ತಿಯೋ ಇಲ್ಲ ನಾನೇ ಎಳೆದು ಕೆಳಗಿಳಿಸಲೋ, ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಧಮಕಿ ಹಾಕಿದರು.

ಗಲಾಟೆಯಿಂದ ಕೂಡಿದ್ದ ಬಸ್ ಒಮ್ಮೆ ಸೈಲೆಂಟಾಯಿತು. ಹುಡುಗಿ ಯರ ಗಮನ ಪೋಕರಿ ಹುಡುಗರತ್ತ ಹರಿಯಿತು. ಅವನು ಹಾಗೂ ಆತನ ಗೆಳೆಯರ ಮುಖ ಇಂಗು ತಿಂದ ಮಂಗ ನಂತಾಗಿತ್ತು. ತಾನು ಕಳೆದ ಮೂರು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ಹೀರೋಯಿಸಂ ಅನ್ನು ಒಬ್ಬ ಲೇಡಿ ಕಂಡಕ್ಟರ್ ಚಿತ್ ಮಾಡಿಬಿ ಟ್ಟಳಲ್ಲ ಎಂದು, ‘ನಮ್ಮೂರು ಹೇಗೆ ದಾಟಿ ಹೋಗುತಿಯಾ ನೋಡ್ತೀನಿ’ ಅಂದ. ಲೇಡಿ ಕಂಡಕ್ಟರ್‌ಗೂ ಸಿಟ್ಟು ಬಂತು. ‘ಯಾಕಲೇ ಜೈಲಿನಾಗೆ ಮುದ್ದೆ ಮುರಿಯೋ ಆಸೆ ಆಗೈತೇನು? ಪೊಲೀಸ್ ಸ್ಟೇಷನ್‌ಗೆ ಗಾಡಿ ತಿರುಗಿ ಸಲು ಡ್ರೈವರ್‌ಗೆ ಹೇಳಲೇನು’ ಅಂದರು.

ಫೊಲೀಸ್ ಶಬ್ಧ ಕಿವಿಗೆ ಬಿದ್ದ ತಕ್ಷಣ ಅವನ ಬೆಂಬಲ ಕ್ಕಿದ್ದ ಪೋಕರಿಗಳೆಲ್ಲ ಜಾಗ ಖಾಲಿ ಮಾಡಿಬಿಟ್ಟರು. ಒಬ್ಬಂಟಿಯಾದ ಅವನಿಗೆ ಪೊಲೀಸ್ ಸ್ಟೇಷನ್ ಹೋದರೆ, ಅದರಲ್ಲೂ ಮಹಿಳೆಯನ್ನು ಎದುರು ಹಾಕಿಕೊಂಡು ಹೋದರೆ ಎಡವಟ್ಟು ಖಚಿತ ಎಂದ ವನೇ ಹಿಂದಿನ ಸೀಟಿಗೆ ಹೋಗಿ ಕುಳಿತ. ಅದೇ ಕೊನೆ. ಅವನು ಮಹಿಳಾ ಕಂಡಕ್ಟರ್ ಇರುವ ಬಸ್ ಹತ್ತುವುದನ್ನೇ ಬಿಟ್ಟ.

PC : Internet

ಒಮ್ಮೆ ಹೀಗಾಯಿತು ಬಾಗಿಲು ಇಲ್ಲದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಸಾಕಷ್ಟು ಹುಡುಗಿಯರು, ಹೆಂಗಸರು ಇದ್ದರು. ಜೀನ್ಸ್ ಪ್ಯಾಂಟು, ಟೈಟ್ ಟೀ ಶರ್ಟ್ ಹಾಕಿದ್ದ ಯುವಕ ನೋರ್ವ ಹಿಂದೆ ಸಿನಿಮಾ ಹೀರೋ ನಂತೆ ಚಲಿಸುತ್ತಿದ್ದ ಬಸ್ಸನ್ನು ಓಡೋಡಿ ಬಂದು ಹತ್ತಿದ. ಬಾಗಿಲಲ್ಲೇ ನಿಂತಿದ್ದ ಅವನಿಗೆ ಲೇಡಿ ಕಂಡಕ್ಟರ್ ಮೇಲೆ ಬರಲು ಎರಡು ಬಾರಿ ಸೂಚಿಸಿದಳು. ‘ನಿಮಗ್ಯಾಕ್ರಿ ಹೆದರಿಕೆ’ ಅಂದ. ಇದರಿಂದ ಲೇಡಿ ಕಂಡಕ್ಟರ್‌ಗೆ ಪಿತ್ತ ನೆತ್ತಿಗೇರಿರಬೇಕು. ‘ಯಾಕ್ ಮನ್ಯಾಗ ಅಪ್ಪ -ಅಮ್ಮಂಗ ಹೇಳಿಬಂದಿಲ್ವೇನು? ಸಾಯೋಕೆ ನನ್ನ ಬಸ್ಸೇ ಬೇಕೇನು, ಬೇರೆ ಗಾಡಿಗೆ ಹೋಗಿ ಸಾಯಲಾ, ನನಗೇನಾಗತೈತಿ ನೀನು ಗಾಡಿಯಿಂದ ಬಿದ್ದು ಸತ್ರೆ ನನ್ನ ಮೇಲೆ ಕೇಸು ಆಗತೈತಿ’ ನಾವು ಹೊಟ್ಟೆಪಾಡಿಗೆ ಅಷ್ಟು ದೂರ ದಿಂದ ಬಂದಿದ್ದೇವೆ. ಅದರಾಚೆ ನಿನ್ನ ಉಪಟಳ ಬ್ಯಾರೆ ಎಂದು ಜಾಡಿಸಿ ದಳು. ಅವಮಾನಿತನಾದ ಯುವಕ, ಮುಂದಿನ ಸ್ಟಾಪ್‌ನಲ್ಲೇ ಇಳಿದುಬಿಟ್ಟ. ಇನ್ನೊಂದು ದಿನ ಸುಮಾರು ೩೮ರ ಆಸುಪಾಸಿನ ಮಹಿಳಾ ಕಂಡಕ್ಟರ್ ಡ್ಯೂಟಿಯಲ್ಲಿದ್ದರು. ಆ ದಿನ ಪೊಲೀಸ್ ಹವಾಲ್ದಾರನೊಬ್ಬ, ಕಂಠ ಪೂರ್ತಿ ಕುಡಿದುಕೊಂಡು ಮಾರ್ಗ ಮಧ್ಯೆ ಅಡ್ಡ ಹಾಕಿ ಬಸ್ಸು ಏರಿದ್ದ.

ಮರಿ ವೀರಪ್ಪನ್‌ನಂತಿದ್ದ ಆತನನ್ನು ಕುರಿತು ‘ಎಲ್ಲಿಗೆ ಹೋಗೋರು ಟಿಕೆಟ್ ತಗೊಳ್ಳಿ ಅಂದ್ರು. ಆತ ತನ್ನ ಪಕ್ಕದವರೊಂದಿಗೆ ಜೋರು ದನಿ ಯಲ್ಲಿ ಹರಟೆ ಹೊಡೆಯುತ್ತ, ನಾನು ಪೊಲೀಸ್ ಗೊತ್ತಾಗಲ್ಲೇನಮ್ಮ ’ ಅಂದ. ಇದರಿಂದ ಕೋಪಗೊಂಡ ಲೇಡಿ ಕಂಡಕ್ಟರ್, ನೀನು ಪೊಲೀಸ್ ಆಗಿರು, ಎಸ್ಪಿ ಆಗಿರು ನನಗೆ ಸಂಬಂಧ ಇಲ್ಲ. ಟಿಕೆಟ್ ತೆಗಿತಿಯೋ ಇಲ್ಲ, ಸೀಟಿ ಊದಲೋ’ ಎಂದು ಕೇಳಿದ್ದಳು. ಆದರೂ ಅವನು ಬಗ್ಗದಿದ್ದಾಗ ಸೀಟಿ ಊದಿ ಗಾಡಿ ನಿಲ್ಲಿಸಿ ಬಸ್ಸಿನಿಂದ ಇಳಿಯುವಂತೆ ಹೇಳಿದ್ದರು. ತಾನು ಪೊಲೀಸ್, ತನಗೇನೂ ಮಾಡಲಾ ರಳು ಎಂದು ತಿಳಿದಿದ್ದ ಪೊಲೀಸಪ್ಪಗೆ ಒಂದೇ ಸಲ ಶಾಕ್ ಆಯಿತು. ಮತ್ತೇ ನೋ ಹೇಳಲು ಹೋದ, ‘ಇಳಿತೀಯೋ ಇಲ್ಲ ಎಸ್ಸಿ ಸಾಹೇಬ್ರಿಗೆ ಫೋನ್ ಮಾಡಲೋ ಎಂದು ಮೊಬೈಲ್ ಹೊರ ತೆಗೆದಳು. ಎಸ್ಸಿ ಸಾಹೇಬ್ರ ಹೆಸರು ಕೇಳುತ್ತಿದ್ದಂತೆ, ಪೊಲೀಸಪ್ಪಗೆ ಕುಡಿದಿದ್ದೆಲ್ಲ ಒಮ್ಮೆಗೆ ಇಳಿಯಿತು. ಸುಮ್ಮನೆ ಬಸ್ ಇಳಿದು ಹೋದ. ಲೇಡಿ ಕಂಡಕ್ಟರ್ ಟಿಕೆಟ್ ಮಾಡುತ್ತಾ ಬಂದವಳು. ನನನ್ನೇ ದಿಟ್ಟಿಸಿ ನೋಡಿ, ನಮಸ್ಕಾರ ಸಾರ್, ಚೆನ್ನಾಗಿದ್ದೀರಾ’ ಎಂದಳು. ನನಗೆ ತಕ್ಷಣ ಅರ್ಥವಾಗಲಿಲ್ಲ. ಯಾಕ್ ಸಾರ್, ಗೊತ್ತು ಹತ್ತಿಲ್ಲವೇನ್ರಿ ಸರ್’ ಎಂದು ಪ್ರಶ್ನಿಸಿದಳು. ನಾನು ಸ್ವಲ್ಪ ಹೊತ್ತು ಅವಳ ಮುಖವನ್ನೇ ನೋ ಡಿದೆ. ವಾಣಿ ಅಲ್ವ ಅಂದೆ. ಅವಳಿಗೆ ಖುಷಿಯಾಯ್ತು. ಸಾರ್, ಅಂತೂ ೨೫ ವರ್ಷ ಆಯ್ತು. ನಿಮ್ಮನ್ನು ನೋಡಿ. ಎಂದು ಒಂದೇ ಸಮನೆ ಮಾತನಾಡಿ ಕುಶಲೋಪರಿ ವಿಚಾರಿಸಿದಳು.

೨೫ ವರ್ಷಗಳ ಹಿಂದೆ ವಾಣಿ ಹರಿಹರದಲ್ಲಿ ನನ್ನ ವಿದ್ಯಾರ್ಥಿನಿ ಯಾಗಿದ್ದಳು. ‘ಜೋರಾಗಿ ಮಾತನಾ ಡಿಸಿದರೆ ಅಳುತ್ತಿದ್ದೆ. ಅಷ್ಟೊಂದು ಮುಗ್ಧೆಯಾಗಿದ್ದವಳು. ಅದು ಹೇಗೆ ಕಂಡಕ್ಟರ್ ಆದೆ ಎಂದು ಪ್ರಶ್ನಿಸಿದೆ. ಎಷ್ಟೇ ಒತ್ತಾಯಿಸಿದರೂ ಟಿಕೆಟ್ ಹಣ ಪಡೆಯಲಿಲ್ಲ. ಹೀಗೆಯೇ ಐದಾರು ಬಾರಿ ಮಾಡಿದ್ದಳು. ಹೀಗಾದ್ರೆ ನೀನಿರುವ ಬಸ್ ಹತ್ತೋದೆ ಇಲ್ಲ ಅಂದಾಗ ಒಲ್ಲದ ಮನಸ್ಸಿನಿಂದ ಹಣ ಪಡೆದಿದ್ದಳು. ನನ್ನ ಶಿಷ್ಯೆಯೊಬ್ಬಳು ಪೊಲೀಸನ್ನು ಹೆದರಿಸುವಷ್ಟು ಗಟ್ಟಿಯಾಗಿದ್ದುದು ಹೆಮ್ಮೆ ಅನಿಸಿತ್ತು.

ಇತ್ತೀಚೆಗೆ ನಾನು ಪ್ರಯಾ ಣಿಸುವ ಬಸ್‌ಗಳಲ್ಲಿ ವಾತಾವರ ಣವೇ ಬದಲಾಗಿದ್ದು, ಬರೀ ಪುರುಷರ ಗಲಾಟೆ ಕೇಳುತ್ತಿದ್ದ ಆ ದಿನಗಳು ಬದಲಾಗಿ ಮಹಿಳೆಯರ ಜೋರು ದನಿ ಕೇಳಿ ಬರುತ್ತಿದೆ. ಮಹಿಳೆಯರು, ಕಾಲೇಜು ಹುಡುಗಿಯರು ತಮ್ಮದೇ ಬಸ್ ಎಂಬಂತೆ ಸಂಭ್ರಮಿಸುತ್ತಾರೆ.
ಮಹಿಳೆಯೊಬ್ಬಳಿಗೆ ಉದ್ಯೋ ಗಾವಕಾಶ ಸಿಕ್ಕಿದ್ದು, ಮಹಿಳೆಯರು ಖುಷಿಪಡುವಂತಾಗಿದೆ. ಮಹಿಳೆ ಯರಿಗೆ ಮೀಸಲು ಸೀಟಿನಲ್ಲಿ ಪುರುಷರು ಕುಳಿತಿದ್ದರೆ ಎಬ್ಬಿಸಿ ತಾವು ಕುಳಿತುಕೊಳ್ಳುವಷ್ಟು ಬದಲಾಗಿದ್ದಾರೆ.

ಕೇವಲ ಬಸ್ಸಿನಲ್ಲಿ ಲೇಡಿ ಕಂಡಕ್ಟರ್ ಉಪಸ್ಥಿತಿಯಿಂದ ಇಷ್ಟೆಲ್ಲ ಬದಲಾವಣೆಯಾಗಿರುವಾಗ, ಉಳಿದ ರಂಗಗಳಲ್ಲಿ ಸಾಕಷ್ಟು ಅವಕಾಶ ದೊರೆತರೆ, ಬದಲಾವ ಣೆಯ ವೇಗ ಹೇಗಿರಬಹುದು ಊಹಿಸಿ ಸ್ತ್ರೀ ಸ್ವಾತಂತ್ರ್ಯ ಅಂದರೆ ಇದೇ ಅಲ್ಲವೇ ?