ಕಥೆ – ಭಿಕನಾಸಿ

ಕಥೆ – ಶಾಂತಪ್ರಿಯ

೮ ಗಂಟೆಗೆಲ್ಲಾ ಬಸ್ ನಿಲ್ದಾಣದಲ್ಲಿ ಹಾಜರಿರುತ್ತಾನೆ. ನಾನು ತಪ್ಪಿಸಿ ಕೊಳ್ಳಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ನನಗೂ ಈಗ ಅಭ್ಯಾಸವಾಗಿಬಿಟ್ಟಿದೆ. ಬಸ್ ನಿಲ್ದಾಣದಲ್ಲಿ ಅವನು ಕಾಣಲಿಲ್ಲವೆಂದರೆ ನನ್ನ ಕಣ್ಣುಗಳು ಸುತ್ತಲೂ ಹುಡುಕತೊಡಗುತ್ತವೆ.
ಒಮ್ಮೊಮ್ಮೆ ಬಸ್ ನಿಲ್ದಾಣದ ಸಮೀಪ ರಸ್ತೆಯ ಬಲಭಾಗದಲ್ಲಿ ನಾಯಿ ಕೊಡೆಗಳಿಂತಿರುವ ಯಾವುದಾದರೂ ಚಹಾದಂಗಡಿ ಮುಂದೆ ಚಹಾ ಸೇವಿ ಸುತ್ತಾ ನಿಂತಿದ್ದರೆ ನನ್ನನ್ನು ಕಂಡವನೇ ಬಗಲಲ್ಲಿನ ಎರಡೂ ಊರು ಗೋಲುಗಳನ್ನು ನೆಲಕ್ಕೆ ಊರುತ್ತಾ ವೇಗವಾಗಿ ಬರಲು ಪ್ರಯತ್ನಿಸುತ್ತಾನೆ.

ಅವನ ಈ ಫಜೀತಿ ಕಂಡು ನಾನೇ ಅವನ ಬಳಿಗೆ ಸಾಗಿ ‘ಓಡಬೇಡ ‘ಭಿಕ ನಾಸಿ’ ಎಡವಿ ಬಿದ್ದರೆ ಗತಿಯೇನು?’ ಎಂದು ಗದರಿಸುತ್ತಲೇ ಜೇಬಿನಿಂದ ತೆಗೆದು ೧೦ ರೂ. ಅವನ ಕೈಗಿಡುತ್ತೇನೆ.ಇದು ಮಾಮೂಲೀ ದಿನಚರಿ. ಆಗ ಅವನು ‘ಚಾಮಿ ದೇವರು ನಿಮ್ಮನ್ನು ನೂರು ವರ್ಷ ಚೆನ್ನಾಗಿಟ್ಟಿರಲಿ’ಎಂದು ಮನ ತುಂಬಿ ಹಾರೈಸುತ್ತಾನೆ.‘ಬಿಡು ಭಿಕನಾಸಿ ದಿವ್ಸಾ ಹೇಳಿ ಹೇಳಿ, ನನ್ನ ಆಯುಷ್ಯ ಜಾಸ್ತಿ ಮಾಡ್ತಿದ್ದೀಯಾ….’ ನನಗೆ ಈಗ್ಲೆ ಸಾಕಾಗಿದೆ ಅನ್ನುತ್ತೇನೆ. ‘ಯಾಕ್ ಚಾಮಿ ಹಾಗೆನ್ನುತ್ತೀರಾ ನಿಮಗೆ ದೇವ್ರು ಚೆನ್ನಾಗಿಡುತ್ತಾನೆ. ತಲೆ ಮೇಲೆ ಬಂಡೆ ಬಿದ್ರು ನಿಮಗೆ ಏನೂ ಆಗಾಕಿಲ್ಲ ’ಎಂದು ಭಾಷಣ ಶುರು ಮಾಡುವ ವೇಳೆಗೆ ನನ್ನ ಬಸ್ಸು ಬಂದು ಬಿಡುತ್ತದೆ.

ಒಂದು ದಿನ ತಡವಾಗಿ ಬಸ್ ನಿಲ್ದಾಣಕ್ಕೆ ಬಂದೆ ಆ ದಿನ ಭಿಕನಾಸಿ ಬಸ್ ನಿಲ್ದಾಣದಲ್ಲಿ ಎಲ್ಲಿಯೂ ಕಾಣಲಿಲ್ಲ. ನನಗೂ ತಡವಾದ್ದರಿಂದ ಟೆಂಪೊ ಏರಿ ಹೊರಟು ಬಂದಿದ್ದೆ. ಮರುದಿವಸ ಬೆಳಿಗ್ಗೆ ೮ ಗಂಟೆಗೆ ಮಾಮೂಲಿಯಂತೆ ಬಸ್ ನಿಲ್ದಾಣಕ್ಕೆ ಬಂದಾಗ ಭಿಕನಾಸಿ ಆಗಲೇ ಎದುರಿಗೆ ಕಾಣಿಸಿಕೊಂಡ.

‘ನಿನ್ನೆ ಎಲ್ಲಿಗೋ ಹೋಗಿದ್ದೆ ಕಾಣಲಿಲ್ಲ ಎಂದೆ ’‘ಅಯ್ಯೋ….’ ಚಾಮಿ ಜ್ವರ ಬಂದಿದ್ವು ರಂಗಣ್ಣ ಬೈಕ್ ಮೇಲೆ ಸರ್ಕಾರಿ ಆಸ್ಪತ್ರೆಗೆ ಕರ‍್ಕೊಂಡು ಹೋಗಿದ್ದ’ ಅಂದ.
‘ರಾತ್ರಿ ಎಲ್ಲಿ ಮಲಗಿದ್ದೆ ’ಎಂದು ಪ್ರಶ್ನಿಸಿದೆ. ‘ದೇವಸ್ಥಾನದ ಕಟ್ಟೆ ಮೇಲೆ ಮಲಗಿದ್ದೆ ನನಗೇನು ಮನೇನಾ ಮಕ್ಳಾ… ಹೆಂಡ್ರಾ’ ಅಂದ ೧೦ ರೂ. ಅವನ ಕೈಗಿಟ್ಟು ಟ್ಯಾಕ್ಸಿ ಬಂದಿದ್ದರಿಂದ ಶಿವಮೊಗ್ಗದತ್ತ ಹೊರಟೆ. ಭಿಕನಾಸಿ ಆಡಿದ ಮಾತುಗಳನ್ನು ‘ಮೆಲುಕು’ ಹಾಕತೊಡಗಿದೆ.

ಸುಮಾರು ೪೫ ವರ್ಷಗಳ ಹಿಂದೆ ನಾನು ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಕಾಲವದು. ಈಗಿನಂತೆ ಆಗೆಲ್ಲಾ ಗ್ರಾಮಗಳಿಗೆ ನಲ್ಲಿಗಳ ಸಂಪರ್ಕವಿರಲಿಲ್ಲ. ಊರಿಗೆ ನಾಲ್ಕಾರು ಬಾವಿಗಳಿರುತ್ತಿದ್ದವು. ನಮ್ಮ ಮನೆಯ ಸಮೀಪವೇ ಬಾವಿ ಯಿತ್ತು.ಮನೆಯ ಹಿಂಭಾಗದ ಹಿತ್ತಲಿನ ಬೇಲಿ ದಾಟಿ ಬಾವಿಯಿಂದ ಎರಡು ಕೊಡಗಳಲ್ಲಿ ನೀರು ಹೊರುವುದು ನನ್ನ ನಿತ್ಯದ ಕಾಯಕವಾಗಿತ್ತು. ಬೆಳಿಗ್ಗೆ ೭ ರಿಂದ ೮ ಗಂಟೆವರೆಗೆ ಮನೆಗೆ ನೀರುಹೊತ್ತು ಹೊತ್ತು ಸಾಕಾಗಿ ಹೋಗುತ್ತಿತ್ತ್ತು.

ಒಂದುದಿನ ಬೆಳಿಗ್ಗೆ ೬ ಗಂಟೆಗೆಲ್ಲಾ ಬಾವಿಯ ಸಮೀಪವೇ ಗಾಡಿಯೊಂದು ನಿಂತಿತ್ತು. ಎತ್ತುಗಳನ್ನು ಗಾಡಿಗೆ ಕಟ್ಟಲಾಗಿತ್ತು. ಜೊತೆಗೆ ನಾಲ್ಕಾರು ಮೇಕೆ, ಕುರಿಗಳನ್ನು ಸಮೀಪದಲ್ಲಿಯೇ ಗೂಟ ಹೊಡೆದು ಕಟ್ಟಲಾಗಿತ್ತು.ಬುಟ್ಟಿಯಲ್ಲಿದ್ದ ಕೋಳಿಗಳು ಕೊಕ್-ಕೊರ್ …ಕೊರ್… ಕೊರ್ ಅನ್ನುತ್ತಿದ್ದವು. ಓರ್ವ ಹೆಂಗಸು, ಸುಮಾರು ೩೦ರ ಆಸುಪಾಸಿನ ಗಂಡಸು ರಸ್ತೆ ಪಕ್ಕ ದಲ್ಲಿ ಖಾಲಿ ಇದ್ದ ನಿವೇಶನದಲ್ಲಿ ಟೆಂಟ್ ಹಾಕಲು ಸಿದ್ದತೆ ನಡೆಸುತ್ತಿದ್ದ.
ಅದು ಚೇರ‍್ಮನ್ ನಂಜುಂಡೇಗೌಡರ ನಿವೇಶನವಾದ್ದರಿಂದ ಅವರಿಗೆ ಯಾರೋ ಆಗಲೇ ಸುದ್ಧಿ ಮುಟ್ಟಿಸಿದ್ದರು. ಸ್ವತಃ ನಂಜುಂಡೇಗೌಡರೇ ಜಾವಾ ಗಾಡಿ ಏರಿ ಸ್ಥಳಕ್ಕೆ ಬಂದರು. ‘ಏ ಯಾರೋ ನೀನು ಇಲ್ಲಿ ಗುಡಿಸಲು ಏಕೆ ಕಟ್ಟುತ್ತಿದ್ದೀಯ ? ಇದೇನ್ ನಿಮ್ಮಪ್ಪನ ಜಾಗನಾ ’ಅಂತ ಜೋರು ಮಾಡಿದ್ರು.

ಆಗ ೩೦ರ ಹರೆಯದ ವ್ಯಕ್ತಿ ಸೀದ ಬಂದವನೇ ನಂಜುಂಡೇಗೌಡರ ಕಾಲಿಗೆ ಬಿದ್ದು ‘ಸ್ವಲ್ಪದಿನ ಜಾಗ ಕೊಡಿ ಚಾಮಿ ನಿಮ್ಮ ಮನ್ಯಾಗ ಕೆಲ್ಸ ಮಾಡ್ತೀನಿ’ ಎಂದು ಗೋಗರೆದ ಗೌಡ ಹೆಂಗಸಿನತ್ತ ದಿಟ್ಟಿಸಿ ಯಾರೀಕೆ? ಎಂದು ಪ್ರಶ್ನಿಸಿದರು.

‘ನನ್ನ ಹೆಂಡ್ತಿ ಚಾಮಿ ಎಂದು ನಮ್ಮು ಗುಂಟೂರು ಚಾಮಿ’ ಎಂದ.

ಸರಿ ಸರಿ ಆಮೇಕಿಂದ ಮನೆ ಹತ್ರ ಬಾ ಎಂದು ಗೌಡರು ಹೇಳಿ ಹೋದರು. ಆ ಹೆಂಗಸಿಗೆ ಕನ್ನಡ ಬರುತ್ತಿರಲಿಲ್ಲ. ಬಾವಿ ಹತ್ತಿರ ಮಡಕೆ ತಂದು ‘ಪಾನೀ’ ಎಂದು ನನ್ನತ್ತ ನೋಡಿದಳು. ನಾನು ಬಾವಿಯಿಂದ ಕೊಡ ತುಂಬಿ ಸೇದಿದ ನೀರನ್ನು ಆಕೆಯ ಮಡಕೆಗೆ ಸುರಿದೆ. ಅಂದು ನಾನು ಶಾಲೆಗೆ ಹೋಗಿದ್ದೆ . ಸಂಜೆ ಮನೆಗೆ ಬರುವ ವೇಳೆಗೆ ಬಾವಿ ಸಮೀಪ ಟೆಂಟ್ ಸಿದ್ದವಾಗಿತ್ತು. ನಾನು ಕುತೂ ಹಲದಿಂದ ಟೆಂಟ್ ಬಳಿ ಹೋದೆ. ಆ ಹೆಂಗಸು ತನ್ನ ಎರಡೂ ಕೈಗಳಿಂದ ಮೇಕೆ ಹಾಲು ಕರೆಯುತ್ತಿದ್ದಳು.

ನನ್ನನ್ನು ನೋಡಿ ಹಾಲು ಬೇಕಾ ? ಎಂದು ಸನ್ನೆ ಮಾಡಿದಳು. ನಾನು ಆಕೆಯ ಹೆಸರು ಕೇಳಿದೆ. ‘ರಾಜಮ್ಮ ’ ಎಂದಳು. ಹೀಗೆ ಪರಿಚಯವಾದವಳು ಕ್ರಮೇಣ ಅವಳೊಂದಿಗೆ ಸಲುಗೆ ಬೆಳೆಯಿತು. ಆಗಾಗ ನಮ್ಮ ಮನೆಗೆ ಬರುತ್ತಿದ್ದಳು. ಕಚ್ಚೆ ಹಾಕಿದ ಇಳಕಲ್ ಸೀರೆ, ಹಣೆಗೆ ಅಗಲ ಕುಂಕುಮ ಕೈತುಂಬಾ ಬಳೆ ತೊಡುತ್ತಿದ್ದ ರಾಜಮ್ಮನನ್ನು ನಾನು ‘ಯಲ್ಲಮ್ಮದೇವಿ’ ಅನ್ನುತ್ತಿದೆ.

ಅವಳಿಗೆ ಕನ್ನಡ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಅವಳದು ತೆಲುಗು- ಮಿಶ್ರಿತ ಕನ್ನಡವಾದರೂ ಅರ್ಥವಾಗದ ಭಾಷೆಯಾಗಿತ್ತು.ನನ್ನ ಅಮ್ಮನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಅಕ್ಕಿ, ರಾಗಿ, ಹಿಟ್ಟು ಪಡೆದುಕೊಂಡು ಹೋಗುತ್ತಿದ್ದಳು. ಆಕೆಯ ಗಂಡನ ಹೆಸರು ‘ಸೋಮಯ್ಯ ’ ಎಂದು ತಿಳಿಯಿತು. ಕಟ್ಟು ಮಸ್ತಾದ ಆಳು, ಯಾವಾ ಗಲೂ ಬಾಯಿಯಲ್ಲಿ ಬೀಡಿ ಇರುತ್ತಿತ್ತು.

ಜೋಡು ಎತ್ತುಗಳೇ ಅವನ ಆಸ್ತಿಯಾಗಿದ್ದವು, ಚೇರ‍್ಮನ್ನರ ಮನೆ ಸೇರಿದಂತೆ ಊರಿನಲ್ಲಿ ಯಾರೇ ಕರೆದರೂ ಕೂಲಿ ಬೇಸಾಯಕ್ಕೆ ಹೋಗುತ್ತಿದ್ದ ಸೋಮಯ್ಯ ಶ್ರಮಜೀವಿ ಆಗಿದ್ದರಿಂದ ಟೆಂಟ್ ಇದ್ದ ಭಾಗದಲ್ಲಿ ಗುಡಿಸಲು ನಿರ್ಮಾಣ ಮಾಡಿದ್ದ.ಎಮ್ಮೆಗಳನ್ನು ಮೇಯಿಸುವುದು ಸಂಜೆ -ಬೆಳಿಗ್ಗೆ ಹಾಲು ಕರೆಯುವುದು ರಾಜ ಮ್ಮನ ನಿತ್ಯದ ಕೆಲಸವಾಗಿತ್ತು. ಅವರಿಗೆ ಮಕ್ಕಳಿರಲಿಲ್ಲ. ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಕೂಗಾಟ ಕೇಳಿಸಿತು. ಮನೆಯ ಹಿಂಭಾಗದಲ್ಲಿ ಸೋಮಯ್ಯನ ಗುಡಿಸಲಿಗೆ ಬೆಂಕಿ ಬಿದ್ದಿತ್ತು.

ನೂರಾರು ಜನ ಗುಂಪುಗೂಡಿದರು. ಬಾವಿಯಿಂದ ನೀರು ಸೇದಿ ಸೇದಿ ಪಾತ್ರೆಗಳಲ್ಲಿ ತುಂಬಿಕೊಂಡು ಬೆಂಕಿ ಬಿದ್ದ ಗುಡಿಸಲಿನತ್ತ ಎರಚಿದರು.ಆದರೆ ಬೆಂಕಿ ಉರಿಯುತ್ತಲೇ ಇತ್ತು. ಗುಡಿಸಲಿನ ಒಳಗಿನಿಂದ ಹೆಂಗಸಿನ ಚೀರಾಟ ಕೇಳಿ ಬರು ತ್ತಿತ್ತು. ಸೋಮಯ್ಯ ಗುಂಟೂರಿಗೆ ಹೋಗಿದ್ದರಿಂದ ರಾಜಮ್ಮ ಒಬ್ಬಳೇ ಮನೆಯಲ್ಲಿ ಇದ್ದಳು. ಕಟ್ಟಿ ಹಾಕಿದ್ದ ಮೇಕೆ ಹಗ್ಗ ಕಳಚಿಕೊಂಡು ಉರಿಯುತ್ತಿದ್ದ ಸೀಮೆ ಎಣ್ಣೆ ಬುಡ್ಡಿಯನ್ನು ಉರುಳಿಸಿದ್ದರಿಂದ ಬೆಂಕಿ ಆನಾಹುತಕ್ಕೆ ಕಾರಣವಾಗಿತ್ತು. ನಿದ್ರೆ ಯಲ್ಲಿದ್ದ ರಾಜಮ್ಮ ಎಚ್ಚರಗೊಳ್ಳುವ ವೇಳೆಗೆ ಬೆಂಕಿಯ ಕೆನ್ನಾಲಿಗೆಯು ಒಳಗೆಲ್ಲ ಆವರಿಸಿತ್ತು. ಕುರಿ, ಮೇಕೆ, ಕೋಳಿ, ಎಮ್ಮೆಗಳನ್ನು ರಕ್ಷಿಸಲು ಹೋಗಿ ರಾಜಮ್ಮ ಬೆಂಕಿಗೆ ಆಹುತಿಯಾಗಿದ್ದಳು.

ಸೋಮಯ್ಯ ಊರಿನಿಂದ ಮರಳುವ ವೇಳೆಗೆ ಅವನ ಕುಟುಂಬ ಸರ್ವ ನಾಶವಾಗಿತ್ತು. ಪ್ರೀತಿಯ ಮಡದಿ ರಾಜಮ್ಮ ,ಎತ್ತು, ಜಾನುವಾರುಗಳೆಲ್ಲ ಬೆಂಕಿ ಯಲ್ಲಿ ಬೆಂದು ಹೋಗಿದ್ದವು. ಸರ್ವಸ್ವವನ್ನೂ ಕಳೆದುಕೊಂಡ ಸೋಮಯ್ಯ ಹುಚ್ಚನಂತಾದ. ಆಗಾಗ ಕೂಲಿಗೆ ಹೋಗುತ್ತಿದ್ದ ,ಬಂದ ಹಣವನ್ನೆಲ್ಲ ಕುಡಿದು ಶಾಲೆಯ ಕಟ್ಟೆಯ ಮೇಲೆ ಮಲಗುತ್ತಿದ್ದ.
ಕೊನೆ ಕೊನೆಗೆ ಅವರಿವರ ಬಳಿ ಹಣ ಬೇಡಲು ತೊಡಗಿದ. ಕುಡಿಯುತ್ತಾ ನೆಂದು ಕೆಲವರು ಹಣ ಕೊಡುತ್ತಿರಲಿಲ್ಲ. ಹೀಗೆಯೇ ವಯಸ್ಸು ಕಳೆದು ಅವನಿಗೆ ಮುಪ್ಪು ಆವರಿಸಿತ್ತು. ಇವನ ಕಾಟ ತಡೆಯಲಾರದೆ ಚೇರ‍್ಮನ್ನರು ಒಂದು ದಿನ ‘ಹೋಗೋ ಭಿಕನಾಸಿ’ಅಂದ್ರು ಅವನಿಗೆ ಅಂದಿನಿಂದ ಅದೇ ಹೆಸೆರು ಖಾಯಂ ಆಯಿತು. ಎಲ್ರೂ ಅವನ ಮೂಲ ಹೆಸರು ಮರೆತು ಬಿಟ್ಟಿದ್ದರು.

ಒಂದು ದಿನ ರಾತ್ರಿ ರಸ್ತೆಯಲ್ಲಿ ಬರುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಎರಡೂ ಕಾಲುಗಳನ್ನು ಕಳೆದುಕೊಂಡ. ಈತನೆಂದರೆ ನಮ್ಮೂರಿನ ಭತ್ತದ ವ್ಯಾಪಾರಿ ರಂಗಯ್ಯನಿಗೆ ಭಾರೀ ಮಮಕಾರ. ಆತನೇ ಭಿಕನಾಸಿಯನ್ನು ಮಣಿಪಾಲಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಎರಡು ಊರುಗೋಲು ಕೊಡಿಸಿದ್ದ. ಊರುಗೋಲು ಸಹಾಯದಿಂದ ಭಿಕನಾಸಿ ಭಿಕ್ಷೆ ಬೇಡುತ್ತಿದ್ದ.

ಆಗಾಗ ನಮ್ಮ ಮನೆಗೆ ಬರುತ್ತಿದ್ದ… ರೊಟ್ಟಿ ಎಂದರೆ ಆತನಿಗೆ ಬಲು ಇಷ್ಟ. ‘ಅವ್ವಾ ರೊಟ್ಟಿ ’ಎಂದು ಕೇಳಿ ಪಡೆಯುತ್ತಿದ್ದ. ನಿತ್ಯವೂ ನಾನು ಆಫೀಸಿಗೆ ಹೊರಡುವಾಗ ಬಸ್‌ನಿಲ್ದಾಣದಲ್ಲಿ ನನ್ನೆದರು ಹಾಜರಾಗುತ್ತಿದ್ದ ಅವನಿಗೆ ತಪ್ಪದೆ ೧೦ ರೂ. ನೀಡುತ್ತಿದ್ದೆ. ಆಗಾಗ ಎಚ್ಚರಿಸುತ್ತಿದ್ದೆ ‘ಭಿಕನಾಸಿ ಇದು ಹೆದ್ದಾರಿ ಕಣೋ ಸಹಸ್ರಾರು ವಾಹನಗಳು ಓಡಾತ್ತವೆ. ನಿನಗೊ ನಡೆಯಲಿಕ್ಕೆ ಬರುವುದಿಲ್ಲ. ಆಚೆ, ಈಚೆ ರಸ್ತೆ ದಾಟಬೇಡ’ಎಂದು ನಾನೇ ಅವನಿದ್ದ ಜಾಗಕ್ಕೆ ಹೋಗಿ ೧೦ ರೂ. ಕೊಡುತ್ತಿದ್ದೆ.

ಈಗ್ಗೆ ಕೆಲವು ದಿನಗಳ ಹಿಂದೆ ನಾನು ಎಂದಿನಂತೆ ಹೊರಟು ಬಸ್ ನಿಲ್ದಾಣಕ್ಕೆ ಬಂದೆ. ರಸ್ತೆಯ ಆಚೆ ಬದಿ ನಿಂತಿದ್ದ ಭಿಕನಾಸಿ ನಾನಿದ್ದಲ್ಲಿಗೆ ಬರಲು ಯತ್ನಿಸಿದ.
ನಾನು ಬೇಡವೆಂದು ಕೈಸನ್ನೆ ಮಾಡಿದೆ. ಹತ್ತಾರು ವಾಹನಗಳು ಸಾಲುಗಟ್ಟಿ ಹೋಗುತ್ತಿದ್ದವು. ಕ್ಷಣಕಾಲ ಅವನು ನನ್ನ ಕಣ್ಣಿಗೆ ಕಾಣಿಸಲಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಕುಂಟುತ್ತಲೇ ವೇಗವಾಗಿ ಚಲಿಸಲಾರಂಭಿಸಿದ. ಎರಡೂ ಕಡೆ ಯಿಂದ ಕಾರು-ಬಸ್ಸು ಬರುತ್ತಿದ್ದವು. ನಾನು ಮುಂದೆ ಆಗಬಹುದಾದ ಅನಾಹುತ ನೆನೆದು ಕಣ್ಮುಚ್ಚಿಕೊಂಡೆ. ನಿರೀಕೆಯಂತೆಯೇ ಅಪಘಾತವಾಗಿತ್ತು. ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಭಿಕನಾಸಿ ವಿಲ ವಿಲ ಒದ್ದಾಡುತ್ತಿದ್ದ ಯಾರೋ ನೀರು ತಂದರು. ಅಂಬ್ಯು ಲೆನ್ಸ್‌ಗೆ ಫೋನ್‌ಮಾಡಿ ಎಂದರು.
ಆದರೆ ಭತ್ತದ ವ್ಯಾಪಾರಿ ರಂಗಯ್ಯ ಕಾರು ತಂದು ನಿಲ್ಲಿಸಿ ಅದರಲ್ಲಿ ಭಿಕನಾಸಿ ದೇಹವನ್ನು ಹಾಕಿಕೊಂಡು ಕಾರು ವೇಗವಾಗಿ ಆಸ್ಪತ್ರೆಯತ್ತ ಹೊರಟು ಹೋಯಿತು.
ನಾನು ದಿಗ್ಭ್ರಾಂತನಾಗಿದ್ದೆ. ನನ್ನಿಂದಾಗಿಯೇ ಭಿಕನಾಸಿ ಹೋಗಿಬಿಟ್ಟ ಎಂದು ದುಃಖಿಸುತ್ತಿದ್ದೆ. ನಂತರ ನಿಜಸಂಗತಿ ತಿಳಿಯಿತು. ಕಾನ್ವೆಂಟ್‌ಗೆ ಹೋಗುವ ಬಸ್ಸು ಬಂದು ನಿಂತಿದ್ದರಿಂದ ರಂಗಯ್ಯನ ಇಬ್ಬರು ಮಕ್ಕಳು ಬಸ್ ಹತ್ತುವ ಅವಸರದಲ್ಲಿ ರಸ್ತೆಗೆ ನುಗ್ಗಿದ್ದರು. ಇದನ್ನು ಗಮನಿಸಿದ ಭಿಕನಾಸಿ ವೇಗವಾಗಿ ಕುಂಟುತ್ತಲೇ ರಸ್ತೆ ಮೇಲೆ ಓಡಿ ಬಂದು ಮಕ್ಕಳನ್ನು ಜೋರಾಗಿ ಆಚೆ ತಳ್ಳಿ ತಾನು ಬಸ್ಸಿನಡಿ ಸಿಲುಕಿದ್ದ. ಎಲ್ಲರೂ ಭಿಕನಾಸಿಯನ್ನು ಹೊಗಳುವವರೇ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಭಿಕನಾಸಿ ಕೊನೆಯುಸಿರೆಳೆದಿದ್ದ.

ಎಲ್ಲರ ಬಾಯಲ್ಲೂ ಭಿಕನಾಸಿಯದೇ ಮಾತು. ತನ್ನ ಪ್ರಾಣ ಲೆಕ್ಕಿಸದೆ, ಇಬ್ಬರು ಎಳೆಯ ಕಂದಮ್ಮಗಳ ಪ್ರಾಣ ಉಳಿಸಿದ್ದು, ಸಾಧಾರಣ ಸಂಗತಿಯಾಗಿ ರಲಿಲ್ಲ. ನಾನು ಭಿಕನಾಸಿಗೆ ಮನದಲ್ಲೇ ‘ಹ್ಯಾಟ್ಸಾಫ್ ’ ಹೇಳಿದೆ. ಊರಿನ ಜನರೆಲ್ಲ ಸೇರಿ ಭಿಕನಾಸಿಯ ಅಂತ್ಯಕ್ರಿಯೆ ನೆರವೇರಿಸಿದ್ದರು.