ಅವಳ ಭೇಟಿ… ಭಾವಯಾನದಾಚೆ

ಕಥೆ : ಶಾಂತಪ್ರಿಯ

ಅವಳ ಭೇಟಿ… ಭಾವಯಾನದಾಚೆ

ಈಗ್ಗೆ ಎರಡು ವಾರಗಳ ಹಿಂದೆ “ಅಮ್ಮ ಹೋಗಿ ಬಿಟ್ಟಳು” ಎಂದು ರಾತ್ರಿ ೧೧-೫೦ರ ಸುಮಾರಿಗೆ ನನ್ನ ಮೊಬೈಲ್‌ಗೊಂದು ಮೆಸೇಜ್ ಬಂತು. ಆ ಸಂದೇಶ ಕಳಿಸಿದವರ ಹೆಸರು ಇರಲಿಲ್ಲ. ಅಲ್ಲದೆ ಆ ನಂಬರ್ ನನ್ನ ಮೊಬೈಲ್‌ನಲ್ಲಿ ದಾಖಲಾಗಿರದ ಕಾರಣ ‘ಯಾರಿರಬಹುದು’ ಎಂದು ಸ್ವಲ್ಪ ಯೋಚಿಸಿದೆ.
ಹೇಗಾದರಾಗಲಿ ಎಂದು ಮೆಸೇಜ್ ರವಾನಿಸಿದ್ದ ನಂಬರ್‌ಗೆ ಡಯಲ್ ಮಾಡಿದೆ. ಆ ಕಡೆಯಿಂದ “ಹಲೋ” ಎಂಬ ಹೆಣ್ಣು ಧ್ವನಿ ಕೇಳಿ ಬಂತು. ಧ್ವನಿ ಕ್ಷೀಣಿಸಿದ್ದರಿಂದ ಯಾರೆಂದು ಗುರುತಿಸಲಾಗಲಿಲ್ಲ.

ಹೀಗಾಗಿ “ಸಾರಿ ಯಾರು ಗೊತ್ತಾಗಲಿಲ್ಲ” ಎಂದೆ. ಆ ಕಡೆಯಿಂದ ನಾನು ಕಣೋ “ರೇಖಾ” ಅಮ್ಮ ಹೋಗಿಬಿಟ್ಟಳು ಎಂಬ ಉತ್ತರ ಬಂತು. ನನಗೆ ಮುಂದೆ ಮಾತು ಹೊರಡಲಿಲ್ಲ… ಕೆಲವು ಕ್ಷಣ ಮೌನ…. ಎಲ್ಲಿದ್ದೀಯಾ..? ಎಂದೆ, ಮೈಸೂರು.. .. ಸರಿ ನಾನು ಬರಲಾ ಅಡ್ರೆಸ್ ಮೆಸೇಜ್ ಮಾಡು ಅಂದೆ.
೫ ನಿಮಿಷದ ನಂತರ ಮೈಸೂರಿನ ಕುವೆಂಪು ನಗರ ೪ನೇ ತಿರುವು ಎಂದು ಮೆಸೇಜ್ ಬಂತು.

ತಕ್ಷಣವೇ ನಾನು ಮೈಸೂರಿಗೆ ಹೊರಟು ನಿಂತೆ. ವಿಷಯ ತಿಳಿದಿದ್ದರಿಂದ ಶಾರೂ (ಪತ್ನಿ) ಎಲ್ಲಿಗೆ ಎಂದು ಕೇಳಲಿಲ್ಲ. ಆದರೆ “ಚಳಿ.. ಇದೆ ಸ್ವೆಟರ್ ಹಾಕಿಕೊಳ್ಳಿ” ಎಂದಳು.
ನನ್ನೂರು ಹೆದ್ದಾರಿಯಲ್ಲಿರುವುದರಿಂದ ಮೈಸೂರಿನ ಬಸ್‌ಗಳಿಗೆ ಬರವಿರಲಿಲ್ಲ. ಶಿವಮೊಗ್ಗದಿಂದ ಬರುತ್ತಿದ್ದ ಬಸ್‌ಗೆ ಕೈ ತೋರಿದೆ. ಪುಣ್ಯಕ್ಕೆ ನಿಲ್ಲಿಸಿದ. ಟಿಕೆಟ್ ಪಡೆದು ಕುಳಿತವನಿಗೆ ನಿದ್ರೆ ಸುಳಿಯಲಿಲ್ಲ. ಬದಲಾಗಿ ಯೋಚನೆಯಲ್ಲಿ ಮುಳುಗಿದೆ.

ನೆನಪಿನ ಬುತ್ತಿಯಿಂದ ಒಂದೊಂದೇ ಸಂಗತಿಗಳು ಹೊರ ಬರಲಾರಂಭಿಸಿದವು. ೪೩ ವರ್ಷಗಳ ಹಿಂದೆ ನಾನು ಭದ್ರಾವತಿಯ ಸಿಲ್ವರ್ ಜುಬಿಲೀ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೆ. ಬಸ್ಸಿನ ಸೌಕರ್ಯ ಕಡಿಮೆ ಇದ್ದುದರಿಂದ ದಿನವೂ ಸೈಕಲ್ ಏರಿ ಬರುತ್ತಿದ್ದೆ.. ನನ್ನ ತರಗತಿಯಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚಾಗಿತ್ತು. ಪ್ರಥಮ ವರ್ಷದಲ್ಲಿದ್ದವರೇ ಬಹುತೇಕ ದ್ವಿತೀಯ ಪಿಯುಗೆ ತೇರ್ಗಡೆಯಾಗಿದ್ದರು.
ಈ ನಡುವೆ ಕೆಂಪು ವರ್ಣದ ಮುದ್ದುಮೊಗದ ಸುಂದರಿ ಯೋರ್ವಳು ನಮ್ಮ ತರಗತಿಗೆ ಹೊಸದಾಗಿ ಸೇರ್ಪಡೆ ಯಾಗಿದ್ದಳು.
ನನ್ನ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದ ಕನ್ನಡ ಉಪನ್ಯಾಸಕರು, ಸಾಹಿತ್ಯದ ವಿಚಾರ ಮಾತನಾಡುತ್ತಾ, ನಿಮ್ಮಲ್ಲಿ ಯಾರಿಗೆ ಕಥೆ, ಕವನ ಬರೆಯುವ ಹವ್ಯಾಸವಿದೆ ಎಂದು ಪ್ರಶ್ನಿಸಿದರು.

ಯಾರೂ ಪ್ರತಿಕ್ರಿಯಿಸಲಿಲ್ಲ. ಹಿಂದಿನ ಬೆಂಚ್‌ನಲ್ಲಿ ಕುಳಿತಿದ್ದ ನಾನು ನಿಧಾನವಾಗಿ ಎದ್ದು ನಿಂತೆ. ಸ್ವಲ್ಪ ಹೊತ್ತಿನ ನಂತರ ನನ್ನ ಪಕ್ಕದ ಬೆಂಚಿನಲ್ಲಿ ಕುಳಿತಿದ್ದ ಮುದ್ದು ಮೊಗದ ಹೊಸ ಹುಡುಗಿ ಕೂಡಾ ಎದ್ದು ನಿಂತಳು. ಹೈಸ್ಕೂಲ್‌ನಿಂದಲೇ ಬರೆಯುವ ಹವ್ಯಾಸವಿದ್ದು ಹಲವಾರು ಕವನ ಬರೆದಿರುವುದಾಗಿ ತಿಳಿಸಿದಳು.ತರಗತಿ ಮುಗಿದ ನಂತರ ಆಕೆಯೇ ಮೊದಲ್ಗೊಂಡು ತನ್ನನ್ನು ರೇಖಾ ಎಂದು ಪರಿಚಯ ಮಾಡಿಕೊಂಡಳು. ಸ್ವಂತ ಊರು ಮಡಿಕೇರಿ. ತಂದೆ ಕೊಡ್ಲಿಪೇಟೆಯಲ್ಲಿ ಶಿಕ್ಷಕರಾಗಿದ್ದಾರೆ. ಸೋದರ ಮಾವ ವಿಐಎಸ್‌ಎಲ್‌ನಲ್ಲಿ ಮ್ಯಾನೇಜರ್ ಆಗಿದ್ದು, ಮಕ್ಕಳಿಲ್ಲದ ಕಾರಣ ತನ್ನನ್ನು ಓದಲಿಕ್ಕೆ ಕರೆ ತಂದಿರುವುದಾಗಿ ತಿಳಿಸಿದಳು.

ಮುಂದಿನ ಬೆಂಚಿನಲ್ಲಿ ಐವರು ತರ‍್ಲೆ ಹುಡುಗರ ಗುಂಪು ಇದ್ದುದರಿಂದ ನಾವು ೫ ಜನ ಸ್ನೇಹಿತರು ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದೆವು. ರೇಖಾಳ ಸಹಪಾಠಿಗಳು ಕೂಡಾ ಐವರಿದ್ದುದರಿಂದ ಅವ ರನ್ನು ತರ‍್ಲೆ ಗುಂಪು ಪಂಚ ಕನ್ಯೆಯರೆಂದು, ರೇಖಾಳನ್ನು ಕವಿ ಎಂದು ಚುಡಾಯಿಸು ತ್ತಿದ್ದರು. ನನಗೂ ಕೂಡಾ ‘ಸೈಕಲ್’ ಎಂಬ ಬಿರುದು ನೀಡಿದ್ದರು.

ದಿನವೂ ನಮ್ಮ ನಡುವೆ ಹಿತ-ಮಿತ ಸಂಭಾಷಣೆ ನಡೆಯು ತ್ತಿತ್ತು. ಆ ಐದು ಜನ ಹುಡುಗಿಯರೂ ನನಗೆ ಆತ್ಮೀಯರಾಗಿ ದ್ದರು. ೧೯೭೬ರ ಜನವರಿ ಮೊದಲ ದಿನ ಕೆಮ್ಮಣ್ಣುಗುಂಡಿಗೆ ಪಿಕ್‌ನಿಕ್ ಹೊರಟಿದ್ದೆವು. ನನ್ನ ಸಹಪಾಠಿ ಹಾಗೂ ಆತ್ಮೀಯ ಗೆಳೆಯ ಶೇಖರ್ ನಮ್ಮ ಗುಂಪಿನಲ್ಲೇ ಹೆಚ್ಚು ಸುಂದರವಾಗಿದ್ದ. ಅಲ್ಲದೇ ಆತನಿಗೆ ರೇಖಾಳ ಬಗ್ಗೆ ವಿಶೇಷ ಒಲವಿತ್ತು.

ಈ ವಿಷಯ ಆಗಾಗ ಹೇಳಿಕೊಳ್ಳುತ್ತಿದ್ದ. ಮಧ್ಯದಲ್ಲೇ ವಿಷಯ ತುಂಡರಿಸಿ ಓದಿನ ಕಡೆಗೆ ಗಮನ ಕೊಡು ಎನ್ನುತ್ತಿದ್ದೆ.
ಹೊಸ ವರ್ಷವಾದ್ದರಿಂದ ಪರಸ್ಪರ ಗ್ರೀಟಿಂಗ್ಸ್ ಕೊಡುವ ಪದ್ಧತಿ ಇತ್ತು. ಶೇಖರ್ ಆ ಐದು ಜನರಿಗೂ ಗ್ರೀಟಿಂಗ್ಸ್ ಕೊಟ್ಟ. ಆದರೆ ರೇಖಾಳಿಗೆ ಕೊಡುವಾಗ ಆತನ ಕೈ ನಡುಗುತ್ತಿತ್ತು.

ಕೆಮ್ಮಣ್ಣು ಗುಂಡಿಯಲ್ಲಿ ಅತ್ಯಂತ ಸಂಭ್ರಮದಲ್ಲಿ ಮುಳುಗಿದ್ದ ನಮಗೆ ರೇಖಾ ಅಳುವುದು ಕಾಣಿಸಿತು. ಏನೋ ಎಡವಟ್ಟಾಗಿದೆ ಎಂದು ನೇರವಾಗಿ ಅವಳನ್ನು ವಿಚಾರಿಸಿದೆ. ಆಕೆಯ ಗೆಳತಿಯರು ಗ್ರೀಟಿಂಗ್ ತೋರಿಸಿ ಶೇಖರ್ ಪ್ರೀತಿ, ಪ್ರೇಮ ಎಂದೆಲ್ಲ ಬರೆದಿದ್ದಾನೆಂದು ದೂರಿದರು.
ನಾನು ಆತನಿಂದ ಸಾರಿ ಕೇಳಿಸಿ, ವಿಷಯವನ್ನು ಅಲ್ಲಿಗೇ ಮುಗಿಸಿದ್ದೆ.ಆದಾದ ನಂತರ ಪಂಚಕನ್ಯೆಯರು ನಮ್ಮ ಬಳಿ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಆಗಾಗ ರೇಖಾ- ಶೇಖರ್ ಪರಸ್ಪರ ಓರೆಗಣ್ಣಿನಿಂದ ನೋಡುವುದು, ಮುಗುಳ್ನಗುವುದನ್ನು ಗಮನಿಸಿದ್ದೆ.

ಇದು ಪ್ರೀತಿಸುವ ವಯಸ್ಸಲ್ಲ ಎಂದು ಹಿರಿಯನಂತೆ ಇಬ್ಬರಿಗೂ ಬುದ್ಧಿ ಹೇಳಿದ್ದೆ. ಪರೀಕ್ಷೆಯೂ ಮುಗಿದಿತ್ತು. ಪರಸ್ಪರ ಆಟೋಗ್ರಾಫ್ ಪಡೆದಿದ್ದರಿಂದ ನನ್ನ ವಿಳಾಸ ರೇಖಾಳ ಬಳಿ ಇತ್ತು. ರಜೆಯಲ್ಲಿ ವಾರಕ್ಕೊಂದರಂತೆ ರೇಖಾ ಪತ್ರ ಬರೆಯು ತ್ತಿದ್ದಳು. ಫಲಿತಾಂಶ ಪ್ರಕಟಗೊಂಡು ಡಿಗ್ರಿ ಕಾಲೇಜಿಗೆ ಸೇರ್ಪಡೆಯಾಗಿದ್ದೆವು. ಪಂಚಕನ್ಯೆಯರ ಪೈಕಿ ಅನ್ನಿ (ಅನ್ನಪೂರ್ಣ) ಮಾತ್ರನನ್ನ ಸಹಪಾಠಿ ಯಾಗಿ ಬಂದಳು. ಉಳಿದಂತೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಸೇರಿದ್ದರು.

ಶೇಖರ್ ತಿಪಟೂರಿನ ಕಲ್ಪತರು ಕಾಲೇಜಿಗೆ ಸೇರಿದ್ದ ರೇಖಾ ಕೂಡಾ ಅದೇ ಕಾಲೇಜಿಗೆ ಸೇರಿದ್ದ ರಿಂದ ಅವರಿಬ್ಬರ ನಡುವೆ ಹೆಚ್ಚಿನ ಒಡ ನಾಟವಿತ್ತು. ಅದು ಪ್ರೇಮಕ್ಕೆ ತಿರುಗಿದ್ದು, ಪರಸ್ಪರ ಪ್ರೀತಿಸುತ್ತಿರು ವುದಾಗಿ ಶೇಖರ್ ಆಗಾಗ ಪತ್ರದಲ್ಲಿ ವಿವರಿಸುತ್ತಿದ್ದ.ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಸಾಹಿತ್ಯಾಸಕ್ತ ನಾಗಿದ್ದೆ. ಡಿಗ್ರಿ ಕೂಡಾ ಮುಗಿಯಿತು. ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿ ಕನ್ನಡ ಎಂ.ಎ ತರಗತಿಗೆ ಸೇರಿಕೊಂಡೆ. ಕೆಲವೇ ದಿನಗಳಲ್ಲಿ ರೇಖಾ ಕೂಡ ಗಂಗೋತ್ರಿಗೆ ಬಂದಿದ್ದಳು. ಸಮಾಜಶಾಸ್ತ್ರ ವಿಷಯ ಆರಿಸಿ ಕೊಂಡಿದ್ದಳು. ಹಿಂದಿಗಿಂತ ಹೆಚ್ಚು ಗುಂಡಗೆ ಕಾಣುತ್ತಿದ್ದ ರೇಖಾ ಹಾಸ್ಟೆಲ್‌ನಲ್ಲಿದ್ದಳು. ನಾನು ಖಾಸಗಿಯಾಗಿ ಗೆಳೆಯನೊಂ ದಿಗೆ ರೂಮು ಮಾಡಿಕೊಂ ಡಿದ್ದೆ. ಆಗಾಗ ಕುಕ್ಕರಹಳ್ಳಿ ಕೆರೆಗೆ ಹೋಗುವ ಹವ್ಯಾಸ ವಿತ್ತು. ಅಗರ್ಭ ಶ್ರೀಮಂತನ ಮಗನಾಗಿದ್ದ ಶೇಖರ್ ಡಿಗ್ರಿ ಮುಗಿಯುತ್ತಿದ್ದಂತೆ ತರಾತುರಿಯಲ್ಲಿ ಅಕ್ಕನ ಮಗಳನ್ನು ಮದುವೆಯಾದ ವಿಷಯ ನಂತರ ತಿಳಿಯಿತು.

ನಾನೂ ಸೇರಿದಂತೆ ಗೆಳೆಯರನ್ನು ಅವನು ಮದು ವೆಗೆ ಆಹ್ವಾನಿಸಿರಲಿಲ್ಲ. ವಿಷಯ ತಿಳಿದು ರೇಖಾ ಆಘಾತಕ್ಕೆ ಒಳಗಾದಳು. ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಕುಳಿತು ನನ್ನೊಂದಿಗೆ ಗಂಟೆಗಟ್ಟಲೆ ಕಣ್ಣೀರು ಸುರಿಸಿದಳು.ನಾನು ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಸಮಾಧಾನ ಮಾಡಿದ್ದೆ. ಎಂ.ಎ . ಮುಗಿದಿತ್ತು. ಕೆಲವೇ ದಿನಗಳಲ್ಲಿ ನಾನು ಕಳಸದ ಜೂನಿಯರ್ ಕಾಲೇಜಿಗೆ ಅರೆಕಾಲಿಕ ಕನ್ನಡ ಉಪನ್ಯಾಸಕನಾಗಿ ಸೇರ್ಪಡೆಯಾಗಿದ್ದೆ.

ಓದು ಮುಗಿದ ನಂತರ ರೇಖಾಳ ಸಂಪರ್ಕ ಇರಲಿಲ್ಲ. ಆಕೆಯ ಊರಿನ ವಿಳಾಸಕ್ಕೆ ಪತ್ರ ಬರೆದೆ. ಉತ್ತರ ಮಾತ್ರ ಬರಲಿಲ್ಲ.
ಈ ನಡುವೆ ಶೇಖರ್ ಕಾರು ಅಪ ಘಾತದಲ್ಲಿ ತೀರಿಕೊಂಡಿದ್ದ. ಈ ಬಗ್ಗೆ ರೇಖಾಳಿಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ನಾನು ಕಳಸ ಬಿಟ್ಟು ಹರಿಹರದಲ್ಲಿ ಬಿ.ಎಡ್ ಮುಗಿಸಿ ಅಲ್ಲಿಯೇ ಹೈಸ್ಕೂಲ್ ಮುಖ್ಯ ಶಿಕ್ಷಕನಾದೆ. ನನ್ನ ಮದುವೆ ಕೂಡಾ ನಿಗದಿಯಾಗಿತ್ತು. ಮದುವೆ ಆಮಂತ್ರಣದೊಂದಿಗೆ ಪತ್ರ ಕೂಡಾ ಬರೆದು ರೇಖಾಳನ್ನು ಆಹ್ವಾನಿಸಿದ್ದೆ. ಅನ್ನಿ ಮಾತ್ರ ಮದುವೆಗೆ ಬಂದಿದ್ದಳು.
ಅಲ್ಲಿಗೆ ಸುಮಾರು ೨೦ ವರ್ಷಗಳು ಕಳೆದಿದ್ದವು. ನಾನು ಸ್ನೇಹಿತರ ಮಗಳ ಮದುವೆಗೆಂದು ಮೈಸೂರಿಗೆ ಹೋಗಿದ್ದೆ. ಅಚ್ಚರಿ ಎಂದರೆ, ಅಲ್ಲಿಗೆ ರೇಖಾ ಕೂಡಾ ಬಂದಿದ್ದಳು. ದುಂಡು ದುಂಡಾಗಿದ್ದ ಕಾಲೇಜಿನ ಹುಡುಗಿ ಈಗ ಮಧ್ಯ ವಯಸ್ಸಿನ ಹೆಂಗಸಿನಂತೆ ಕಾಣುತ್ತಿದ್ದಳು.
ಹಳೆಯ ಘಟನೆಗಳನ್ನು ನೆನೆಸಿಕೊಂಡು ಶೇಖರ್ ಹೋದ ವಿಷಯ ತಿಳಿದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಇಬ್ಬರೂ ಪರಸ್ಪರ ಪ್ರೀತಿಸಿದ್ದು, ಶೇಖರ್ ಆಕೆಗೆ ಕೈ ಕೊಟ್ಟಿದ್ದು, ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕಿ ಯಾಗಿದ್ದು, ತಮ್ಮ -ತಂಗಿಯರ ಮದುವೆ ಮಾಡಿಸಿ ತಾನು ಅವಿವಾಹಿತೆಯಾಗಿಯೇ ಉಳಿದ ಸಂಗತಿ ಕೇಳಿ ತುಂಬಾ ವೇದನೆಯಾಯಿತು. ಶ್ರೀಗಂಧ ತಾನು ಸವೆದು ಪರಿಮಳ ಬೀರುವಂತೆ ರೇಖಾ ತನ್ನ ಬದುಕನ್ನು ಸವೆಸಿದ್ದಳು. “ಆಗಾಗ ಪತ್ರ ಬರೆಯುತ್ತಿರು” ಎಂದು ಹೊರಟು ಬಂದಿದ್ದೆ. ಮತ್ತೆ ೧೫ ವರ್ಷಗಳ ಕಾಲ ನಮ್ಮ ಸಂಪರ್ಕ ಇರಲಿಲ್ಲ. ಮೊನ್ನೆ ನನ್ನ ಮೊಬೈಲ್‌ಗೆ ಆಕೆಯಿಂದ ಮೆಸೇಜ್ ಬಂದಿತ್ತು.

ಬಸ್ ಇಳಿದವನೇ ಹೋಟೆಲ್‌ನಲ್ಲಿ ಚಹಾ ಸೇವಿಸಿ, ಕುವೆಂಪು ನಗರಕ್ಕೆ ಆಟೋ ಏರಿದೆ. ಮಧ್ಯಾಹ್ನದ ವೇಳೆಗೆ ಅಂತ್ಯಕ್ರಿಯೆ ಮುಗಿಯಿತು. “ಏಕೈಕ ಆಸರೆಯಾಗಿದ್ದ ಅಮ್ಮನೂ ಹೋಗಿಬಿಟ್ಟಳು. ತಮ್ಮ-ತಂಗಿಯರ ಮಕ್ಕಳನ್ನು ಓದಿಸಿದ್ದೇನೆ. ಒಳ್ಳೆಯ ಕೆಲಸದಲ್ಲಿದ್ದಾರೆ. ಅನ್ನಿ ಸಿಕ್ಕಿದ್ದಳು. ನಿನ್ನ ನಂಬರ್ ಕೊಟ್ಟಳು. ಹೇಗಿದ್ದೀಯಾ?” ಎಂದಳು “ವಯಸ್ಸಾಯಿತು ” ಎಂದು ನಕ್ಕೆ. ಸ್ವಲ್ಪ ಹೊತ್ತು ಮೌನವಾಗಿದ್ದ ಅವಳು. “ಜೂನ್‌ಗೆ ನಿವೃತ್ತಿಯಾಗುತ್ತಿದ್ದೇನೆ” ಎಂದಳು. ಮುಂದೇನು ಎಂದೆ. ಅವಳು ಆನಂದಮಾರ್ಗಿ ಯಾಗಿರುವುದಾಗಿಯೂ, ನಿವೃತ್ತಿ ನಂತರ ಮೌಂಟ್ ಅಬುವಿನಲ್ಲಿ ನೆಲೆಸುವುದಾಗಿ ತಿಳಿಸಿದಳು.

ಮೊದಲ ಬಾರಿಗೆ ಅವಳ ಮುಖ ದಿಟ್ಟಿಸಿದೆ. ತಲೆಯಲ್ಲಿ ಅಲ್ಲಲ್ಲಿ ಬಿಳಿ ಕೂದಲು. ಕಣ್ಣಿನ ಕೆಳಗೆ ಕಪ್ಪುಗೆರೆ, ಪ್ರಶಾಂತವಾದ ಮುಖದಲ್ಲಿ ನಿರ್ಲಿಪ್ತ ಭಾವ ಎದ್ದು ಕಾಣುತ್ತಿತ್ತು. ಭಾರವಾದ ಹೆಜ್ಜೆ ಇಡುತ್ತಾ ಅಲ್ಲಿಂದ ನಿರ್ಗಮಿಸಿದೆ.