ಲೇಖನ : ಶಾಂತಪ್ರಿಯ
ಆತಂಕ
ಮೊನ್ನೆ ಸಂಜೆನೇ ಬ್ಲೌಸ್ ಹೊಲಿದು ರೆಡಿ ಇಟ್ಟಿರ‍್ತೀನಿ ಅಂತ ಹೇಳಿದ್ದಾಳೆ ಟೈಲರ್. ನಿಂಗಿನ್ನೂ ಹೋಗಕ್ಕೆ ಬಿಡುವೇ ಆಗ್ಲಿಲ್ಲ. ಇವತ್ತಾದ್ರೂ ಸ್ವಲ್ಪ ಆಫೀಸಿಂದ ಬರುವಾಗ ಆ ಕಡೆ ಹೋಗಿ ಬಾ ಪ್ಲೀಸ್, ನಂಗೆ ಆ ಹೊತ್ತಿಗೆ ಇವಳ ಹೋಮ್ ವರ್ಕ್ ಮಾಡಿಸೋದು ಇರುತ್ತೆ. ಎಕ್ಸಾಮ್ ಬೇರೆ ನಡೀತಾ ಇದೆ ! ರಾಕೇಶ್ ಸೋಫಾದಲ್ಲಿ ಕುಳಿತು ಕಾಲಿಗೆ ಸಾಕ್ಸ್ ಏರಿಸುವುದನ್ನು ನೋಡುತ್ತಲೇ, ಅವನಿಗೆ ಕೇಳುವಂತೆ ಹೇಳುತ್ತಾ ಹತ್ತಿರ ಬಂದಳು ಮೇನಕಾ.
‘ಅಮ್ಮಾವ್ರಿಗೆ ತಮ್ಮ ಕೆಲಸ ಮಾಡಿಸುವಾಗ ಎಷ್ಟು ಸ್ವೀಟಾಗಿ ಪ್ಲೀಸ್ ಬರುತ್ತೋ, ಇನ್ನೂ ಒಂದೆರಡು ಸಲ ಹೇಳು, ನಿನ್ನ ಬಾಯಲ್ಲಿ ಅಪರೂಪಕ್ಕೆ ಆ ಶಬ್ಧ ಕೇಳೋಕೆ ಹಿತವಾಗಿದೆ’ ಸೋಫಾ ಕಿರ್ರೆನ್ನುವಂತೆ ಹಾರಿ ಅವನ ಪಕ್ಕ ಕುಳಿತವಳೇ, ‘ಏನು ರಾಯರು ಭಾರೀ ಮೂಡಲ್ಲಿ ಇದ್ದೀರಾ? ಇವತ್ತೇ ನಾದರೂ ನಿಮ್ಮ ಲೇಡಿ ಸೆಕ್ರೆಟರಿ ರಜಾನಾ ?ಪಕ್ಕಕ್ಕೆ ತಿರುಗಿ ಮೇನಕಾಳ ಜುಟ್ಟೆಳೆದು ಹತ್ತಿರಕ್ಕೆ ಜಗ್ಗಿ ಹುಂ…ಡಾರ್ಲಿಂಗ್ ಇವತ್ತು ಮಾತ್ರ ಅಲ್ಲ, ಇನ್ಯಾವತ್ತೂ ರಜವೇ, ನಿನ್ನೆ ರಿಟೈರ್ ಆಗಿ ಹೋದರು. ಇವತ್ತಿಂದ ಹೊಸ ಲೇಡಿ ಬರ‍್ತಾಳೆ. ಅದಕ್ಕೇ ಈ ಮೂಡ್, ಈ ಸ್ಮೈಲ್, ಎಲ್ಲಾ ಗೊತ್ತಾಯ್ತಾ ’ ಪಕ್ಕನೆ ಮುತ್ತಿಟ್ಟು ಹೊರ ನಡೆದ ರಾಕೇಶ್‌ನ ಹಿಂದಿನಿಂದಲೇ ಹೋದವಳು, ‘ಸಂಜೆ ಬ್ಲೌಸ್ ಮರೆತು ಬಂದರೆ ನನ್ನ ಮೂಡ್‌ಹೇಗಿರುತ್ತೇ ಅಂತ ನೆನಪಿಟ್ಟುಕೋ’ ಕಾರು ಏರಿದವನು ಕನ್ನಡೀಲಿ ಅವಳ ಮುಖ ಗಮನಿಸುತ್ತ ಹೋದ.
ಗೇಟು ತಾನೇ ಹಾಕಿ ಒಳ ಬರಬೇಕೆಂದು ಕೊಳ್ಳುವಾಗ ತಿರುವಿನಲ್ಲಿ ಚಂದ್ರಿಕಾ ಬರುತ್ತಿರುವುದು ಕಾಣಿಸಿ ನಿಧಾನಿಸಿದಳು. ಗೇಟು ತಾನೇ ಹಾಕಿಕೊಂಡು ಒಳ ಬಂದ ಚಂದ್ರಿಕಾ, ‘ಅಮ್ಮಾವ್ರೆ ಸುದ್ದಿ ಗೊತ್ತಾಯ್ತಾ’ ಎಂದು ಬಾಂಬ್ ಎಸೆದಳು.ಅವಳು ಯಾವಾಗಲೂ ಹಾಗೆಯೇ ? ಹಿಂದಿನ ಜನ್ಮದಲ್ಲಿ ಲೇಡಿ ಶೆರ್ಲಾಕ್ ಹೋಮ್ ಆಗಿದ್ದಳೇನೋ, ಎನ್ನುವಂತೆ ಅವಳ ನಡವಳಿಕೆ, ಹಾವಭಾವ ಎಲ್ಲ, ಎಲ್ಲ ಮನೆಯ ದೋಸೆಯ ತೂತುಗಳ ಸಂಖ್ಯೆಯೂಅವಳಿಗೆ ಲೆಕ್ಕಕ್ಕೆ ಸಿಕ್ಕಿಯೇ ತೀರುತ್ತದೆ.ಅವರ ಸುದ್ದಿ ಇವರಿಗೆ ಇವರ ಅವರಿಗೆ ಹೇಳಿ ಮನೆ ಕೆಲಸ ಮುಗಿಯುವವರೆಗೆ ಮಾತಿಗೆಳೆಯುವುದು ಅವಳ ಚಾಳಿ. ಆದಷ್ಟೂ ತನ್ನ ಮನೆಯ ಸುದ್ದಿ ಸುಲೇಖಗಳು ಅವಳ ಕಿವಿ ಸೇರದಂತಿರಲು ಪ್ರಯತ್ನಿಸುತ್ತಿದ್ದಳು ಮೇನಕಾ. ಆದರೂ ಅವಳ ಆತಂಕದ ಗುಣ ಕೆಲವೊಮ್ಮೆ ಗುಟ್ಟು ರಟ್ಟು ಮಾಡಿಬಿಡುತ್ತಿತ್ತು.
ಗಂಡ ರಾಕೇಶ್,ಮಗಳು ಸುರಭಿ, ಕಣ್ಣೆದುರಿಗೆ ಇರುವಷ್ಟು ಹೊತ್ತು ಶಾಂತ ರೀತಿಯಲ್ಲಿ ಇರುವ ಮೇನಕಾಗೆ ಅವರೊಮ್ಮೆ ಮನೆಯ ಹೊರಗೆ ಕಾಲಿಟ್ಟರೆ ಮತ್ತೆ ಮನೆ ಸೇರುವವರೆಗೆ ಅದೇನೋ ಹೇಳಲಾರದ ಆತಂಕ.ನ್ಯೂಸ್ ಪೇಪರ್,ಫೇಸ್‌ಬುಕ್, ಟಿವಿ ಚಾನೆಲ್ ಎಲ್ಲಿ ನೋಡಿದಲ್ಲಿ ಕಾಣುವ ಅಪಘಾತದ ಸುದ್ದಿಗಳು, ಕೊಲೆ,ಸುಲಿಗೆ, ಅತ್ಯಾಚಾರದ ಸುದ್ದಿಗಳು, ಮೋಸ, ವಂಚನೆಯ ವಿವಿಧ ರೂಪಗಳು ಅವಳ ಬಿ.ಪಿ. ಏರಿಸುತ್ತಿದ್ದುದು ಮಾಮೂಲಿ.ಅದರ ಜೊತೆಗೆ ಆಗೀಗ ಚಂದ್ರಿಕಾ ತರುವ ಮನೆ, ಮನೆ, ವಾರ್ತೆಗಳು, ಕೂಡಲೇ ಗಂಡನಿಗೆ ಫೋನ್ ಮಾಡಿ ‘ಆಫೀಸ್ ತಲುಪಿದ್ದೀರಾ?’ ಎಂದು ಕೇಳುವಂತೆ ಮಾಡುತ್ತಿತ್ತು. ಅವನ ಉತ್ತರ ಬಂದ ಕೂಡಲೇ ಮಗಳ ನೆನಪು, ಶಾಲೆ ವಾಹನಗಳ ಬಗ್ಗೆಯೇನೂ ಟಿ.ವಿ.ಯಲ್ಲಿ ಬರುತ್ತಿಲ್ಲ ತಾನೇ ಎಂದು ಕಣ್ಣು ನೆಟ್ಟು ಕಾದಿರುತ್ತಿದ್ದಳು.
ಈ ಆತಂಕವನ್ನು ಕಡಿಮೆಗೊಳಿಸಲು ಮಾಡುತ್ತಿದ್ದ ಯೋಗ, ಧಾನ್ಯಗಳೆಲ್ಲಾ ನಾನು ಕಣ್ಣು ಮುಚ್ಚಿ ಕುಳಿತ ಇಷ್ಟು ಹೊತ್ತಿನಲ್ಲಿ ಪ್ರಪಂಚವೇ ಮುಳುಗಿ ಹೋಗಿದ್ದರೆ ಎಂದು ಭಯಬೀಳಲಾರಂಭಿಸಿದ ಮೇಲೆ ಅವುಗಳನ್ನು ಬಿಟ್ಟು ಬಿಟ್ಟಿದ್ದಳು.ಈಗಿನ್ನೇನು ಹೊಸಾ ಸುದ್ದಿ ಹೇಳುತ್ತಾಳೋ ಎಂದು ಅವಳ ಹಿಂದೆಯೇ ನಡೆದಳು ಮೇನಕಾ. ಚಂದ್ರಿಕಾ ಸಿಂಕಿನ ಬಳಿ ಹೋಗಿ ಕೈಗೆ ಗ್ಲೌಸ್ ಏರಿಸಿಕೊಂಡು ಪಾತ್ರೆ ತೊಳೆಯಲು ಶುರು ಮಾಡಿದವಳು. ಇನ್ನೂ ಪ್ರಶ್ನಾರ್ಥಕ ಚಿಹ್ನೆಯನ್ನು ಮುಖದಲ್ಲಿ ಹೊತ್ತು ನಿಂತಿದ್ದ ಮೇನಕಾಳ ಕಡೆ ತಿರುಗಿ, ನಾನು ಬರುವಾಗ ನಾಲ್ಕನೇ ಕ್ರಾಸ್ ಸಾನ್ವಿ ಟೆಕ್ಸ್‌ಟೈಲ್ಸ್ ಪಕ್ಕ ತುಂಬಾ ಜನನಿಂತಿದ್ರು. ನಂಗೂ ಕುತೂಹಲ ಆಗಿ ನೋಡೋಕೆ ಹೋದೆ. ಅಲ್ಲಿದ್ದ ಎಲ್ಲಾ ಲೇಡೀಸ್ ಟೈಲರ್, ಅವ್ಳು ಹೊಲಿಯಕ್ಕೆ ಬಂದಿರೋ ಬಟ್ಟೆ , ಸೀರೆ, ಎಲ್ಲಾ ಎತ್ಕೊಂಡು ಎಲ್ಲೋ ಓಡಿ ಹೋಗಿದ್ದಾಳಂತೆ’ ನಮ್ಮ ಪಕ್ಕದ ಬಿಲ್ಡಿಂಗ್ ಆಶಾ ಮೇಡಂ, ಅವರದ್ದು ಎಂದು ಸಾವಿರದ ಸೀರೆ ಕೊಟ್ಟಿದ್ರಂತೆ ಫಾಲ್ಸ್ ಹಾಕಲು, ಅದು ಹೋಯ್ತಂತೆ, ಪೊಲೀಸ್ ಕಂಪ್ಲೇಟ್ ಕೊಡುವ ಬಗ್ಗೆ ಮಾತಾಡ್ತಾ ಇದ್ರಪ್ಪ’.
‘ಯಾರು….? ಪದ್ಮ ಟೈಲರ್‌ಅಂತ ಇತ್ತಲ್ಲ… ಅದಾ ಅಥವಾ ಅದರ ಪಕ್ಕದಲ್ಲಿರೋ, ಶೃಂಗಾರ್ ಟೈಲರಾ ? ಮೇನಕಾಳ ಧ್ವನಿ ಅರಿವಿಲ್ಲದಂತೆ ನಡುಗುತ್ತಿತ್ತು.
‘ಶೃಂಗಾರ್, ಸೀರೆ, ಬ್ಲೌಸ್ ಎಲ್ಲಾ ಹೊಲೀತಾ ಇರ‍್ಲಿಲ್ಲಾ. ಬರೀ ಚೂಡಿದಾರ ಮಾತ್ರ ಹೋಲಿಯೋದು ಆಕೆ. ಇದು ಪದ್ಮ ‘ಟೈಲರ್….’
ಇದ್ದ ಒಂದೆರಡು ಪಾತ್ರೆ ತೊಳೆದು ಒಗೆಯುವ ಬಟ್ಟೆ ಎತ್ತಿಕೊಂಡ ಚಂದ್ರಿಕಾ ಬಾತ್‌ರೂಮ್ ಕಡೆ ನಡೆದಳು.
ಮೇನಕಾಳ ತಲೆ ಧಿಮ್ಮೆಂದಿತು. ತಂಗಿ ಮಗನ ಮುಂಜಿಗೆ ಅಂತ ಅಮ್ಮನ ಮನೆಯಿಂದ ತೆಗೆದ ಸೀರೆ, ತಂಗಿ ಕೊಟ್ಟ ಭರ್ಜರಿ ಸೀರೆ, ಇಷ್ಟು ಸಾಲದು ಅಂತ ತಾನೇ ಆರ್ಡರ್ ಕೊಟ್ಟು ನೇಕಾರರಿಂದ ನೇಯಿಸಿದ್ದ ಅಪ್ಪಟ ರೇಷ್ಮೆ ಸೀರೆ ಎಲ್ಲವನ್ನೂ ಅಲ್ಲೇ ಕೊಟ್ಟು, ಬ್ಲೌಸಿನ ಅಳತೆಗೆ ಅಂತ ಧಾರೆ ಸೀರೆಯ ಬ್ಲೌಸ್‌ನ್ನು ಕೊಟ್ಟು ಬಂದಿದ್ದಳು. ಹೋದ್ರೆ ನಾಲ್ಕು ಬ್ಲೌಸ್, ಮೂರು ಸೀರೆ ಏನಿಲ್ಲಾ ಅಂದ್ರು ಲಕ್ಷದ ಹತ್ತಿರ ಬೆಲೆ ಬಾಳುವಂತವು.
‘ದೇವ್ರೆ… ಎಲ್ಲಾ ನಂಗೆ ಯಾಕಾಗುತ್ತೆ? ರಾಕೇಶ್ ಹತ್ರ ಸಂಜೆ ಹೋಗಲಿಕ್ಕೆ ಹೇಳಿದ್ದು ಅವರೇ ಹೋಗಿ ವಿಚಾ ರಿಸಿದರೆ ಸಾಕಾ ?ಅಥವಾ ಚಂದ್ರಿಕಾಳನ್ನೊಮ್ಮೆ ಒಂದ್ಸಲ ಕಳ್ಸಿ ವಿಚಾರಿಸೋದಾ ? ನಿರ್ಧಾರಕ್ಕೆ ಬರಲಾರದೆ ಯಾವುದಕ್ಕೂ ರಾಕೇಶ್‌ಗೆ ಒಂದು ಫೋನ್ ಮಾಡಿ ಬಿಡೋಣ’ ಎಂದು ಮೊಬೈಲ್ ಎತ್ತಿಕೊಂಡಳು.
ಪಕ್ಕನೆ ಸೆರ ಗಿಗೆ ಕೈ ಒರೆ ಸುತ್ತಾ ಬಂದ ಚಂದ್ರಿಕಾ? ‘ಹೊಸ ಸುದ್ದಿ ಗೊತ್ತಾಯ್ತಾ ಅಮ್ಮಾವ್ರೇ?’ ಕಣ್ಣುಗಳನ್ನು ಮೇಲೆತ್ತದೆ, ಟಚ್ ಸ್ಕ್ರೀನ್ ಮೊಬೈಲ್‌ನ್ನು ಆನ್ ಮಾಡುತ್ತಾ ಏನನ್ನೋ ಹುಡುಕತೊಡಗಿದಳು.
‘ಏನೇ ಹೊಸಾ ಸುದ್ದಿ ? ಅವ್ಳು ಸಿಕ್ಕಿದ್ಲಾ ?’ ಎಲ್ಲೋ ಒಂದು ಆಶಾಕಿರಣ ಬೆಳಕು ಮೂಡಬಹುದೆಂಬಾಸೆ ಮೇನಕಾಳದು.
‘ಇಲ್ಲಾ ಅಮ್ಮಾವ್ರೆ, ಅವ್ಳು ಸಿಕ್ಕಿಲ್ಲ. ಆದ್ರೆ ಅವಳು ಓಡಿ ಹೋಗಿರೋದು ಯಾರ ಜೊತೆ ಅಂತ ಗೊತ್ತಾಯ್ತಾ..?’ ಸೀರೆಯ ಸುದ್ದಿ ಪಕ್ಕಕ್ಕೆ ಸರಿಸಿ, ಯಾರ್ ಜೊತೆ ಹೋಗಿದ್ದಂತೆ ಅಂತ ಕುತೂಹಲದಿಂದ ಕೇಳಿದಳು.
‘ಅದೇ ಪಕ್ಕದ ಸಾನ್ವಿ ಟೆಕ್ಸ್‌ಟೈಲ್‌ನ ಓನರ್ ಮಗನ ಜೊತೆ’ ಬಟ್ಟೆ ಒಣ ಹಾಕಲು ಟೆರೇಸ್ ಮೇಲೆ ಹೋದಳು. ಬೇರೆಯವರ ಪ್ರೇಮದ ಕತೆ ಯಾವತ್ತೂ ಖಡಕ್ ಖಾರದ ಉಪ್ಪಿನ ಕಾಯಿಯಂತೆ, ನೆಂಚಿಕೊಳ್ಳಲು ಬಲು ಹಿತ. ಅವನ್ಯಾರಪ್ಪಾ ಹುಡುಗ ? ನಾನು ನೋಡಿದ್ದೀನಾ? ಎಂದು ಆ ಅಂಗಡಿಯಲ್ಲಿ ಕಣ್ಣಿಗೆ ಕಂಡ ಮುಖಗಳ ಚಿತ್ರಗಳನ್ನುಮನದೊಳಗೆ ಮೂಡಿಸಲೆತ್ನಿಸುತ್ತಿ ರುವಾಗಲೇ, ಮೇನಕಾಗೆ ಸೀರೆಯ ನೆನಪು ಮೇಲಕ್ಕೆದ್ದು ಬಂತು.
ಅವಳ ಪ್ರೇಮಕ್ಕೆ ಮಣ್ಣು ಬಿತ್ತು. ತನ್ನ ಸೀರೆ, ಬ್ಲೌಸ್ ಸಿಕ್ಕಿದರೆ ಸಾಕು ಎಂದು ರಾಕೇಶ್‌ನ ನಂಬರ್ ಮೇಲೆ ಬೆರಳೊತ್ತಿದ್ದಳು. ಈ ನಂಬರ್ ಸ್ವಿಚ್ ಆಫ್ ಆಗಿದೆ ಎಂಬ ಉತ್ತರ ಬಂತು. ಅರ್ಧ ಸಿಟ್ಟು , ಇನ್ನರ್ಧ ಆತಂಕ ಅವಳನ್ನು ಬವಳಿ ಬರುವಂತೆ ಮಾಡಿತ್ತು.
ಕಣ್ಣಿಗೆ ದೂರದ ಸೋಫಾದಲ್ಲಿ ಅನಾಥವಾಗಿ ಕೂತಿದ್ದ ಕಾರಿನ ಭರ್ಜರಿ ಕಾರ್ಡ್ ಕಂಡಿತು. ‘ನನ್ನ ಕರ್ಮ, ಯಾವು ದಕ್ಕೆಲ್ಲಾ ಒದ್ದಾಡಿ ಸಾಯಬೇಕೋ,’ ರಾತ್ರಿ ಮೊಬೈಲ್ ಜಾರ್ಜರ್, ಪಕ್ಕದ ರೂಮಲ್ಲಿತ್ತು ಅಂತ ಎದ್ದು ಹೋಗಲಾರದೇ ತರಲು ಉದಾಸೀನ ಮಾಡಿ, ಕಾರಲ್ಲಿ ಜಾರ್ಜ್ ಮಾಡ್ಕೋಳ್ತೇನೆ ನಾಳೆ ಎಂದಿದ್ದ !’
ಇಲ್ಲಿ ನೋಡಿದರೆ ಚಾರ್ಜರ್, ಬಿಟ್ಟು ಹೋಗಿದ್ದಾನೆ. ಆಫೀಸಿನ ನಂಬರ್‌ಗೆ ಫೋನ್ ಮಾಡಬೇಕಷ್ಟೇ ಎಂದು ಸಿಡಿಮಿಡಿಯಲ್ಲಿ ಮೊಬೈಲಿನ ಮೇಲೆ ಬೆರಳು ಒತ್ತಿದ್ದಳು. ಹೆಣ್ಣು ಸ್ವರವೊಂದು ಮಧುರವಾಗಿ ‘ಅವರು ಸೈಟ್ ವಿಸಿಟ್‌ಗೆ ಹೋಗಿದ್ದಾರೆ ಮೇಡಂ’ ಎಂದಿತು.
ಹೊಸ ಸೆಕ್ರೆಟರಿಯೇ ಇರಬೇಕು. ಇದು ಸಣ್ಣ ವಯಸ್ಸಿನವರಂತೆ ಇದೆ ಧ್ವನಿ’ ಮನಸಿಗೊಂದಿಷ್ಟು ಕಿರಿ ಕಿರಿ ಮಾಡಿಕೊಂಡಳು. ಕೈಯಲ್ಲಿರುವ ಮೊಬೈಲ್‌ನ್ನೇ ನೋಡುತ್ತಾ ಲೀಲಾಜಾಲವಾಗಿ ಮೆಟ್ಟಿಲು ಇಳಿದು ಬಂದ ಚಂದ್ರಿಕಾ‘ಸುದ್ದಿ ಗೊತ್ತಾಯ್ತಾ ಅಮ್ಮಾವ್ರೆ?’ ಎಂದವಳು ಉತ್ತರಕ್ಕಾಗಿ ಕಾಯದೇ, ‘ ಹುಡುಗನ ತಂದೆ ಅವಳನ್ನು ಸೊಸೆ ಅಂತ ಒಪ್ಪಿಕೊಂಡಿ ದ್ದಾರಂತೆ. ಮಗ-ಸೊಸೆ ಇಬ್ಬರನ್ನೂ ಮನೆಗೆ ಕರೆದಿ ದ್ದಾರಂತೆ, ಇನ್ನೇನು ಸ್ವಲ್ಪ ಹೊತ್ತಲ್ಲಿ ಹುಡುಗ-ಹುಡುಗಿ ಬರ್ತಾರಂತೆ. ಟಿವಿಯ ನೇರ ವೀಕ್ಷಕ ವಿವರಣೆಗಿಂತ ಹೆಚ್ಚು ಕರಾರುವಾಕ್ಕಾಗಿ ಹೇಳಿ ದಳು.
ಹಾಗಿದ್ರೆ ಎಲ್ಲರದ್ದೂ ಬ್ಲೌಸ್ ಸೀರೆ ಎಲ್ಲಾ ಸಿಗಬ ಹುದು ತಾನೇ ? ಎಂದವಳ ಧ್ವನಿಯಲ್ಲಿ ಇನ್ನೂ ಗೊಂದಲ ವಿತ್ತು. ‘ಯಾಕೆ ? ನಿಮ್ಮದು ಏನಾದ್ರೂ ಇತ್ತಾ ಅಮ್ಮಾವ್ರೇ? ಹೊಸ ನ್ಯೂಸೊಂದನ್ನು ಪಸರಿಸುವ ಆತುರ ಮೊಬೈಲ್‌ಗಂಟಿದ ಅವಳ ಬೆರಳುಗಳಲ್ಲಿತ್ತು.
ಅವಳಿಗೇನು ಉತ್ತರ ಹೇಳಬೇಕೆಂದು ಯೋಚಿಸುವ ಮೊದಲೇ ಮೊಬೈಲ್ ಸದ್ದು ಮಾಡಿತು. ಎತ್ತಿಕೊಂಡವಳಿಗೆ ಕಿವಿಗೆ ಬಿದ್ದಿದ್ದು ರಾಕೇಶನ ಸ್ವರ. ಅವಳು ಸ್ವರ ಎತ್ತುವ ಮೊದಲೇ ನಿಂಗೆ ಹೇಳೋಕೆ ಮರೆತಿದ್ದೆ. ನಿನ್ನ ಸೀರೆ ಬ್ಲೌಸ್ ಎಲ್ಲಾ ನಿನ್ನೆಯೇ ತಂದಿದ್ದೆ. ಅಲ್ಲೇ ವಾರ್ಡ್‌ರೋಬ್‌ಲ್ಲಿದೆ ನೋಡು’ ಸುಮ್ನೆ ನಿನ್ನ ರೇಗಿಸೋಣ ಅಂತ ಹೇಳಿರಲಿಲ್ಲ.
ಆಫೀಸಿಗೆ ಹೋಗುವಾಗ ನಿಂಗೆ ಕಾಲ್‌ಮಾಡಿ ಹೇಳೋಣ ಅಂದ್ಕೊಂಡಿದ್ದೆ. ಮೊಬೈಲ್ ಬ್ಯಾಟರಿ ಖಾಲಿ ಆಗಿತ್ತು. ಈಗಲೂ ಹೇಳ್ತಾ ಇರ‍್ಲಿಲ್ಲ. ಆದರೆ ಏನ್ ಮಾಡೋದು , ನಂಗಿವತ್ತು ಅರ್ಜೆಂಟಾಗಿ ಮುಂಬೈಗೆ ಹೋಗಬೇಕಿದೆ. ನಾಳೆ ಬೆಳಿಗ್ಗೆ ವಾಪಸ್ ಬರ‍್ತೀನಿ. ಅಲ್ಲಿಯ ವರೆಗೆ ಜಾಗ್ರತೆಯಾಗಿರು. ಈಗ ಏರ್‌ಪೋರ್ಟ್ ನಿಂದಾನೇ ಮಾತಾಡ್ತಾ ಇದ್ದೀನಿ ಡಿಯರ್’ ಎಂದವನು ಪೋನಿಟ್ಟ.
ಸಮಾಧಾನದ ನಿಟ್ಟುಸಿರೊಂದು ಹೊರ ಬಂದ ಮರುಘಳಿಗೆಯಲ್ಲೇ ನೆಲ ಒರೆಸುತ್ತಿದ್ದ ಚಂದ್ರಿಕಾ ಹೊರಗೆ ಇಣುಕಿ, ಅಮ್ಮಾವ್ರೆ… ಸುದ್ದಿ ಗೊತ್ತಾಯ್ತಾ ? ಬಾಂಬೆಗೆ ಟೆರರಿಸ್ಟ್ ನುಗ್ಗಿದ್ದಾರಂತೆ. ಮೂರು ಜನ ಇದ್ದಾರಂತೆ’ ಮೇನಕಾ ಮತ್ತೆ ತಲೆ ಮೇಲೆ ಕೈ ಹೊತ್ತು ಸೋಫಾದ ಮೇಲೆ ಕುಳಿತಳು.