Sunday, September 8, 2024
Google search engine
Homeಲೇಖನಗಳುಕಥೆತುತ್ತು ಅನ್ನ ತಿನ್ನೋಕೆ

ತುತ್ತು ಅನ್ನ ತಿನ್ನೋಕೆ

ಕಥೆ : ಸೌಮ್ಯ ಗಿರೀಶ್

ತುತ್ತು ಅನ್ನ ತಿನ್ನೋಕೆ

PC : Internet

ಒಂದೇ ಸಮನೆ ಸುರಿಯುತ್ತಿರುವ ಮಳೆ, ಮನೆಯ ಸೂರಿನಿಂದ ಹನಿಗಳು ಮನೆಯ ತುಂಬೆಲ್ಲಾ ಜಿನುಗುತ್ತಿದೆ. ಅಲ್ಲೊಂದು ತಟ್ಟೆ, ಇಲ್ಲೊಂದು ಬಟ್ಟಲು, ಹಜಾರವೆಲ್ಲಾ ಪಾತ್ರೆಗಳಿಂದ ತುಂಬಿದೆ. ಮಳೆಯ ಅಬ್ಬರವನ್ನೂ ಮೀರಿಸುತ್ತಿದೆ ಪಾತ್ರೆಗಳೊಳಗೆ ಬೀಳುತ್ತಿರುವ ಹನಿಗಳ ಶಬ್ಧ. ಅಮ್ಮ ತುಂಬಾ ಚಳಿ ಎನ್ನುತ್ತಿರುವ ಕಂದನಿಗೆ ಹರಕು ಹೊದಿಕೆಯನ್ನು ಹೊದಿಸಿ ಮೂಲೆಯಲ್ಲಿ ಕೂರಿಸಿ, ರಾತ್ರಿಯ ಹಿಟ್ಟಿಗೊಂದಿಷ್ಟು ನೀರು ಮಜ್ಜಿಗೆ ಬೆರೆಸಿ ಅಂಬಲಿಯಿತ್ತು, ‘ಅಕ್ಕನ ಜೊತೆ ಇರು ಕೆಲಸಕ್ಕೆ ಹೋಗಿ ಬರುತ್ತೇನೆ’ ಎಂದು ಆ ಜಡಿಮಳೆಯಲ್ಲೂ ಹೊರಟು ನಿಂತಳು ನಿಂಗಿ.

ಇತ್ತ ಈ ಮನೆಯ ಬಾಗಿಲಲ್ಲಿ ಬಣ್ಣ ಬಣ್ಣಗಳ ಹೂವಿನ ದಂಡೆಯ ಸರಮಾಲೆ ಬಾಗಿಲನ್ನು ಅಲಂಕರಿಸಿದೆ. ಮಿರಿ, ಮಿರಿ ಮಿನುಗುವ ದೀಪಗಳು ಝಗಮಗಿಸುತ್ತಿವೆ. ರೇಷಿಮೆ ಸೀರೆಗೆ ಯಾವ ಬಂಗಾರದ ಸೆಟ್ಟು ಹಾಕುವುದು ಎನ್ನುವ ಚಿಂತೆ ಒಡತಿಗಾದರೆ, ತನ್ನ ಸ್ನೇಹಿತರ ಗುಂಡು-ತುಂಡುಗಳಿಗೆ ಭರ್ಜರಿ ತಯಾರಿಯಲ್ಲಿರುವ ಒಡೆಯ “ಯಾವುದು ತುಂಬಾ ಕಾಸ್ಟ್ಲಿ ಡ್ರಿಂಕ್ಸ್ ನೋಡಿ ತೊಗೊಂಡ್ ಬಾ” ಅನ್ನೋ ಮಾತು. ಅವರ ಮದುವೆಯ ೨೫ನೇ ವಾರ್ಷಿಕೋತ್ಸವದ ಸಂಭ್ರಮ.

“ನಿಂಗಿ ಯಾಕೋ ಬರಲಿಲ್ಲ ನೋಡ್ರಿ. ಕೆಲಸ ಇರೋ ದಿನಾನೇ ಇವರಿಗೆಲ್ಲಾ ರೋಗ ಬರೋದು” ಅನ್ನೋ ಮಾತು ಮನೆಗೆ ಬಂದವರ ಮುಂದೆ ದೊಡ್ಡಸ್ತಿಕೆಗೂ ಮೀರಿ ಕೇಳಿ ಬರುತ್ತಿದೆ. ಇತ್ತ ನಿಂಗಿ ಆ ಮಳೆಯಲ್ಲಿ ತೊಯ್ದು, ದಡಬಡಾಯಿಸಿ ಬಂದು ನಿಂತಳು. “ಯಾಕೆ ಇಷ್ಟು ತಡ ಮಾಡಿದೆ, ಈ ಕಡೆಯಿಂದ ಬರಬೇಡ, ಮನೆಯಲ್ಲಿ ಜನ ಇದ್ದಾರೆ. ಹಿಂದಿನ ಬಾಗಿಲಿನಿಂದ ಬಾ” ಎಂದಳು ಆ ಮನೆಯ ಒಡತಿ.
ಹಿಂದಿನ ಬಾಗಿಲಿನಿಂದ ದೌಡಾಯಿಸಿ ಒಳಗೆ ಬಂದ ನಿಂಗಿ ನಡುಗುವ ಚಳಿಯಲ್ಲಿ ಕುಳಿತು ರಾಶಿ, ರಾಶಿ ಪಾತ್ರೆ ತಿಕ್ಕುತ್ತಿದ್ದಾಳೆ. ಒಂದರ ಹಿಂದೊಂದರಂತೆ ಕೆಲಸಗಳು ತೂರಿ ಬರುತ್ತಿವೆ. “ಬಿಸಿಯಾಗಿ ಒಂದು ಲೋಟ ನೀರಾದರೂ ಸಿಗಬಾರದೇ” ಎನ್ನುತ್ತಿದೆ ನಡುಗುತ್ತಿರುವ ಅವಳ ಜೀವ. ತೊಳೆದ ಪ್ರತಿಯೊಂದು ತಟ್ಟೆ, ಬಟ್ಟಲು, ಸ್ಪೂನ್‌ಗಳನ್ನು ಥಳಥಳ ಹೊಳೆಯುವಂತೆ ತೊಳೆದು, ಅದರಲ್ಲಿ ನೋಡಿಕೊಳ್ಳುತ್ತಾ ತನ್ನ ಬಣ್ಣ ಮಾಸಿದ ಮುಖದ ಮೇಲಿರುವ ಕೂದಲನ್ನು ಸರಿಸಿ, ಸೇರಿಸಿ ಗಂಟು ಹಾಕಿ ಉಸ್ಸಪ್ಪಾ ಎನ್ನುವ ವೇಳೆಗೆ “ತಂದು ಬೇಗ ಟೇಬಲ್ ಮೇಲೆ ಜೋಡಿಸು” ಗೆಸ್ಟ್‌ಗಳು ಬರುವ ಹೊತ್ತಾಯಿತು ಎಂಬ ಆಜ್ಞೆ ಕೇಳಿಬಂತು.

ತಕ್ಷಣವೇ ಎಲ್ಲವನ್ನೂ ಜೋಡಿಸಲು ಹೊರಟಳು ನಿಂಗಿ. ಥರಹೇವಾರಿ ಭಕ್ಷ್ಯ ಭೋಜನಗಳು, ನಾಲ್ಕಾರು ಬಗೆಯ ಸ್ವೀಟು, ಪಾನೀಯಗಳು ಒಂದರ ಪಕ್ಕದಲ್ಲೊಂದರಂತೆ ಜೋಡಿಸಲ್ಪಟ್ಟಿದೆ. ವೇದಿಕೆಯ ಮೇಲೆ ಮೂರಂತಸ್ತಿನ ಕೇಕು ಬೀಗುತ್ತ, ತನಗೆ ಬೀಳುವ ಚಾಕುವಿನ ಇರಿತಕ್ಕೆ ಬಾಯ್ತೆರೆದು ಕುಳಿತಂತಿದೆ. “ಬೇಗ ಜೋಡಿಸಿ ಒಳಗೆ ಹೋಗು, ಈ ಒದ್ದೆ ಸೀರೆಯಲ್ಲಿ ಗೆಸ್ಟ್‌ಗಳ ಮುಂದೆ ಕಾಣಿಸಿಕೊಳ್ಳಬೇಡ” ಮತ್ತೊಂದು ಆಜ್ಞೆ.

ಸುರಿಯುತ್ತಿರುವ ಧಾರಾಕಾರ ಮಳೆ, ಬರಬೇಕಾದ ಎಷ್ಟೋ ಅತಿಥಿಗಳ ಕಾರು ಅರ್ಧ ದಾರಿಯಲ್ಲೇ ಸಿಲುಕಿದೆ. ಫೋನ್ ಗಳಲ್ಲಿ ಮೆಸೇಜ್‌ಗಳು, ಸ್ಟೇಟಸ್‌ಗಳ ಸುರಿಮಳೆ ಆರಂಭ. ‘ಮಳೆಯಲ್ಲಿ ಸಿಲುಕಿದ್ದೇನೆ, ತಡವಾಗಬಹುದು’, ‘ರೋಡ್ ಬ್ಲಾಕ್, ಬರಲಾರೆ’ ಹೀಗೆ. ಅಲ್ಲಿಗೆ ನಿರೀಕ್ಷೆಯ ಅತಿಥಿಗಳು ಬರುವುದು ಅಸಾಧ್ಯ ಎನ್ನುವ ಸುಳಿವು ದೊರೆಯಲು ಪ್ರಾರಂಭವಾಯಿತು.

ಮನೆಯಲ್ಲಿದ್ದ ಬೆರಳೆಣಿಕೆಯ ಮಂದಿಯೇ ಇದ್ದ ಕೇಕ್ ಕತ್ತರಿಸಿದರು, ಬಾಟಲಿಯಲ್ಲಿದ್ದ ಶಾಂಪೇನ್ ಹೊರ ಚಿಮ್ಮಿತ್ತು, ‘ಹ್ಯಾಪಿ ಆನಿವರ್ಸರಿ’ ಕೂಗು ಎಲ್ಲೆಡೆ ಕೇಳಿ ಬರುತ್ತಿತ್ತು. ಆದರೆ ಇದ್ದವರು ಮಾತ್ರ ಬೆರಳೆಣಿಕೆಯ ಮಂದಿ. ಮಾಡಿಸಿದ ರಾಶಿ, ರಾಶಿ ಅಡುಗೆ ಹಾಗೆ ಉಳಿದು ನಿಂತಿದೆ. ತಂದಿದ್ದ ಐಸ್‌ಕ್ರೀಮ್ ಕರಗಿ ನೀರಾಗುವ ಪರಿಸ್ಥಿತಿ. ಕೊನೆಗೆ ಉಂಡು ಮಿಕ್ಕವರು ‘ಛೇ ಮಳೆ ಬಾರದೆ ಇದ್ದಿದ್ದರೆ ಎಲ್ಲರೂ ಬರುತ್ತಿದ್ದರು’ ಎನ್ನುವ ಹಲವು ಅಭಿಪ್ರಾಯಗಳ ನಡುವೆ ಪಾರ್ಟಿ ಮುಗಿದಿತ್ತು.

‘ನಿಂಗಿ ಬೇಗ ಎಲ್ಲಾ ಕ್ಲೀನ್ ಮಾಡಿಬಿಡು’, ಸೊಂಟಕ್ಕೆ ನೆರಿಗೆ ಸಿಕ್ಕಿಸಿ, ಎಂಜಲು ಬಾಚಿ, ಎಲ್ಲವನ್ನೂ ಚೊಕ್ಕಟ ಮಾಡಿ ‘ಅಮ್ಮಾವ್ರೆ ನಾನು ಬರ್ತೀನಿ’ ಎಂದಳು. “ಸರಿ, ಬೆಳಿಗ್ಗೆ ಬೇಗ ಬಾ, ಮೊಮ್ಮಗನನ್ನು ಬೋರ್ಡಿಂಗ್ ಸ್ಕೂಲ್‌ಗೆ ಬಿಡೋಕ್ಕೆ ಬೇಗ ಹೋಗ್ಬೇಕು, ಬರೋದು ಹೊತ್ತು ಮಾಡಬೇಡ” ಕೊನೆಗೂ ಮತ್ತೊಂದು ಆಜ್ಞೆಯಿಂದಲೇ ಮುಗಿಯಿತು ನಿಂಗಿಯ ಕೆಲಸ.

ಮತ್ತದೇ ಮಳೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೋ, ತಲೆಯ ಮೇಲಿನ ಸೂರು ಭದ್ರವಾಗಿಯೇ ಇದೆಯೋ ಇಲ್ಲವೋ ಎನ್ನುವ ಆತಂಕದಲ್ಲೇ ಮನೆಯತ್ತ ಹೊರಟಳು. ಹರಿದ ಕಂಬಳಿ ಹೊದ್ದು ಕುಳಿತಿದ್ದ ಮಗ ಅಲ್ಲಿಯೇ ನಿದ್ದೆಗೆ ಜಾರಿದ್ದಾನೆ, ಬುಡ್ಡಿ ದೀಪದ ಕೆಳಗೆ ಮಗಳು ತನ್ನ ಪಾಠ ಓದುತ್ತಾ ಕುಳಿತಿದ್ದಾಳೆ. ಅಮ್ಮ ಬಂದ ದನಿ ಕೇಳಿದ ಕೂಡಲೆ “ಅಮ್ಮಾ ಬಂದ್ಯಾ, ಸಾಹುಕಾರರ ಮನೆಯಲ್ಲಿ ಫಂಕ್ಷನ್ ಅಂದಿದ್ದೆ, ತಿನ್ನಕ್ಕೆ ಏನ್ ತಂದಿದ್ದೀಯಾ ಅಲ್ಲಿಂದ. ತುಂಬಾ ಹಸಿವೆ ಆಗ್ತಾ ಇದೆ. ಅನ್ನ ಇತ್ತು ಆದರೆ ಸಾರು ಹಳಸಿ ಹೋಗಿತ್ತು. ತುಂಬಾ ಹಸಿವೆ ಆಗ್ತಾ ಇದೆ ಅಮ್ಮ” ಎಂದರು. “ಇಲ್ಲಾ ಮಗು, ಅವರ ಮನೇಲಿ ತುಂಬಾ ಜನ ಅಲ್ವಾ, ಅಡುಗೆ ಅವರಿಗೇ ಸಾಲಲಿಲ್ಲ. ಎರಡೇ ನಿಮಿಷ ನಿಲ್ಲು ಬೇಗ ಗಂಜಿ ಕಾಯಿಸಿ ಕೊಡ್ತೀನಿ, ಬಿಸಿ ಬಿಸಿಯಾಗಿ ಕುಡಿ ಚಳೀನೂ ಕಡಿಮೆ ಆಗುತ್ತೆ. ನಿನಗೆ ಗೊತ್ತಾ ಅವರ ಮನೆಗೆ ಒಂದು ಪಾಪು ಬಂದಿತ್ತು…” ಎನ್ನುತ್ತಾ ಯಾವುದೋ ಕಥೆ ಹೇಳಿ ಮಗನ ಹಸಿವಿನ ದಿಕ್ಕು ತಪ್ಪಿಸಿ ಗಂಜಿ ಮಾಡಲು ಒಲೆ ಹತ್ತಿಸಲು ಪ್ರಾರಂಭಿಸಿದಳು.

RELATED ARTICLES
- Advertisment -
Google search engine

Most Popular

Recent Comments