Sunday, September 8, 2024
Google search engine
Homeಲೇಖನಗಳುಕಥೆಕಥೆ: ಹಳಿ ತಪ್ಪಿದ ಮೇಲೆ

ಕಥೆ: ಹಳಿ ತಪ್ಪಿದ ಮೇಲೆ

PC : Internet
ನಾನು ಆ ದಿನ ತಡವಾಗಿ ಮನೆಗೆ ಬಂದೆ. ಮನೆ ಆವರಣದಲ್ಲಿ ಐದಾರು ಹೆಂಗಸರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವರು ನನ್ನನ್ನು ನೋಡಿ ಸುಮ್ಮನಾದರು. ಅವರು ನನಗೆ ಕೊಡುತ್ತಿರುವ ಮರ್ಯಾದೆ ಇರಬೇಕೆಂದು ಒಳಗೆ ಬಂದು ಬಟ್ಟೆ ಬದಲಿಸಿ ಆರಾಮವಾಗಿ ಮಂಚಕ್ಕೆ ಒರಗಿ ಕುಳಿತೆ. ಸ್ವಲ್ಪ ಹಾಯೆನಿಸಿತು.
‘ನನ್ನವಳು ಕಾಫಿ ಕೊಡುತ್ತಾ, ‘ಯಾಕಿಷ್ಟು ತಡ ಮಾಡಿದಿರಿ’ ಎಂದಳು. ಹಳೆಯ ಗೆಳೆಯರು ಸಿಕ್ಕಿದ್ದರು. ವಾಕಿಂಗ್ ಜೊತೆಗೆ ಮಾತನಾಡುತ್ತಾ ಇದ್ದೆವು ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ ಎಂದೆ.ಅವಳು ಮೆಲ್ಲನೆ ‘ರೀ’ ಎಂದಳು. ಏನು ಎನ್ನುವಂತೆ ಮುಖ ನೋಡಿದೆ. ‘ನಿಮಗೆ ವಿಷಯ ಗೊತ್ತಾ’ ಎಂದು ಪ್ರಶ್ನಿಸಿದಳು. ‘ಯಾವ ವಿಷಯ, ನನಗೇನು ಗೊತ್ತು? ನೀನು ಹೇಳಿದರಲ್ಲವೆ ಗೊತ್ತಾಗೋದು’ ಎಂದೆ.
‘ಲಲಿತಾ ಹೋಗಿಬಿಟ್ಟಳು’. ಯಾವ ಲಲಿತಾ ಎಂದೆ. ಅದೇರೀ ‘ನೀವು ಯಾವಾಗಲೂ ಸುರಸುಂದರಿ ಎನ್ನುತ್ತಿದ್ದಿರಲ್ಲ. ಆ ಲಲಿತಾ’. ‘ಏನಾಗಿತ್ತು ಅವಳಿಗೆ’ ಎಂದೆ. ಇಂದು ಸಂಜೆ ಮಗಳೊಂದಿಗೆ ನೇಣು ಹಾಕಿಕೊಂಡಿ ದ್ದಾಳೆ. ಅವಳು ಸಾಯೋದಲ್ಲದೆ ಪುಟ್ಟ ಹುಡುಗಿಯನ್ನು ಜೊತೆಗೆ ಕರೆ ದೊಯ್ದ್ದಿದ್ದಾಳೆ. ಗಂಡಸರು ಸರಿ ಇಲ್ಲದಿದ್ದರೆ ಹೀಗೆ ಆಗೋದು. ಪಾಪಿಷ್ಠ, ಬಂಗಾರದಂತಹ ಹುಡುಗಿಯ ಬಾಳು ಹಾಳು ಮಾಡಿಬಿಟ್ಟ. ಅವಳೂ ದೊಡ್ಡ ತಪ್ಪು ಮಾಡಿದಳು ಬಿಡಿ’ ಎಂದಳು.
‘ಹೋಗಲಿ ಬಿಡು’ಅಂದೆ. ಯಾಕೋ ಕಾಫಿ ರುಚಿಸಲಿಲ್ಲ. ಅರ್ಧಕ್ಕೆ ಬಿಟ್ಟೆ.
ಹಾಗೆಯೇ ಮಂಚಕ್ಕೆ ಒರಗಿ ಆಲೋಚಿಸತೊಡಗಿದೆ. ಲಲಿತಾಳ ಮುದ್ದು ಮುಖ ಕಣ್ಮುಂದೆ ಹಾದು ಹೋಯಿತು. ಒಮ್ಮೆ ನೋಡಿದರೆ ಯಾರೂ ಕೂಡಾ ಮರೆಯಲಾಗದ ಸೌಂದರ್ಯವತಿ.ಕೋಲುಮುಖ, ತುಂಬಿದ ಕೆನ್ನೆಗಳು, ನೀಳಮೂಗು,ದಾಳಿಂಬೆಯಂತಹ ಹಲ್ಲುಗಳು, ಕಪ್ಪಗೆ ಹೊಳೆಯುವ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು. ನೀಳ ಜಡೆ,ಬಳ್ಳಿಯಂತೆ ಬಳಕುವ ನಡು ಕವಿಯ ವರ್ಣನೆಯನ್ನು ಮೀರಿದ ಕೆಂಪಾದ ಅದರಗಳು. ಕೆಂಪನೆಯ ಗಲ್ಲದಲ್ಲಿ ಬೀಳುತ್ತಿದ್ದ ಕುಳಿ (ಗುಳಿ)ಗಳು ದೇವರು ಎಲ್ಲಾ ಸೌಂದರ್ಯವನ್ನು ಇವಳಿಗೆ ಧಾರೆ ಎರೆದಿದ್ದಾನೆಂದು ಕರುಬುವಷ್ಟು ರತಿ ರೂಪ ಅವಳದ್ದಾಗಿತ್ತು.
ಮದುವೆಯಾದ ಹೊಸದರಲ್ಲಿ ನಮ್ಮ ಮನೆಯ ಮುಂದೆಯೇ ಹಾದು ಹೋದಾಗ. ‘ಯಾರೀ ಚೆಲುವೆ’ ಎಂದು ನಿಬ್ಬೆರಗಾಗಿ ನಿಂತಿದ್ದೆ. ನನ್ನವಳು ಬಂದು ಎಚ್ಚರಿಸದಿದ್ದರೆ, ಹಾಗೆಯೇ ನಿಂತು ಬಿಡುತ್ತಿದ್ದೆನೇನೋ’.‘ಊರಿಗೆ ಯಾರೋ ಹೊಸ ಹುಡುಗಿ ಬಂದಿದ್ದಾಳಲ್ಲ’ ಎಂದು ನನ್ನಾಕೆಯನ್ನು ಪ್ರಶ್ನಿಸಿದ್ದೆ. ‘ಅದೇ ರೀ, ಮೇಗಲಹಟ್ಟಿ ಅಜ್ಜಣ್ಣನ ಸೊಸೆ, ಮೊನ್ನೆ ತಾನೇ ಮದುವೆ ಯಾಯಿತಲ್ಲ’ ಎಂದಳು.
‘ಕೇಶವನ ಹೆಂಡತಿಯೇ ಈ ಹುಡುಗಿ, ನನಗರಿವಿಲ್ಲದೆ, ಎಲ್ಲಿಯ ಗಿಡುಗ, ಎಲ್ಲಿಯ ಗಿಣಿ’ ಅಂದೆ. ಕೇಶವನ ಮನೆ ನಮ್ಮ ಮನೆಗೆ ತುಸು ದೂರದಲ್ಲಿಯೇ ಇದೆ. ಸುಮಾರು ೨೦ ವರ್ಷಗಳಿಂದಲೂ ಹತ್ತಿರದ ಭದ್ರಾ ಪ್ಯಾಕೇಡ್ಸ್‌ನಲ್ಲಿ ಕೆಸ ಮಾಡುತ್ತಿದ್ದ. ಆರೂ ಕಾಲಡಿ ಎತ್ತರ, ಕಪ್ಪನೆಯ ಬಣ್ಣ,ದೈತ್ಯದೇಹ, ಗೊಂಬೆ ಯಂತಹ ಹುಡುಗಿ ಇವನಿಗೆ ಹೇಗೆ ಸಿಕ್ಕಳು. ಎಂದು ಯೋಚಿಸಿದ್ದೆ. ಲಲಿತಾಳ ಊರು ಅರಸೀಕೆರೆ ಹತ್ತಿರ ಪುಟ್ಟಹಳ್ಳಿ. ಮನೆಯಲ್ಲಿ ಬಡತನ, ಬೆಳೆದು ನಿಂತ ಐದು ಹೆಣ್ಣು ಮಕ್ಕಳು, ಲಲಿತಾ ಎರಡನೆಯವಳು. ಬಿ.ಎ.ವರೆಗೆ ಓದಿದ್ದಳು. ಹುಡುಗ ಕೆಲಸದಲ್ಲಿದ್ದಾನೆಂದು ಮಗಳು ಗಂಡನ ಮನೆಯಲ್ಲಾದರೂ ಸುಖ ವಾಗಿರುತ್ತಾಳೆಂದು ಹೆಣ್ಣು ಕೊಟ್ಟಿದ್ದರು.
ಕೇಶವ ಶುದ್ಧ ಸುಳ್ಳು ಬುರುಕ. ೨೫ ಸಾವಿರ ಸಂಬಳ ಬರುತ್ತದೆ ಎಂದು ಸುಳ್ಳು ಹೇಳಿದ್ದ. ಅವನಿಗೆ ೧೦ ಸಾವಿರ ರೂ. ಸಂಬಳ. ಸ್ವಲ್ಪ ಜಮೀನು ಕೂಡಾ ಇತ್ತು. ಕೇಶವನ ಮದುವೆಯಾದ ಕೆಲವೇ ದಿನಗಳಲ್ಲಿ ಅವನ ತಂದೆ ಅಜ್ಜಣ್ಣ ತೀರಿ ಕೊಂಡಿದ್ದರು. ಅಪ್ಪ ಹೋದ ತಕ್ಷಣ ಲಂಗು ಲಗಾಮಿಲ್ಲದ ಕುದುರೆಯಂತಾದ. ಲಲಿತಾ, ಬಂದ ಹೊಸತರಲ್ಲಿ ‘ರೀ, ಸಂಬಳ ಎಲ್ರೀ ಬರೀ, ಒಂಬತ್ತು ಸಾವಿರ ಇದೆ’ ಎಂದು ಪ್ರಶ್ನಿಸಿದ್ದಳು. ತಲಾ ಒಂದು ಒಂದು ಲಕ್ಷದ ಐದು ಚೀಟಿ ಹಾಕಿದ್ದು, ಚೀಟಿಗೆ ಹಣ ಕಟ್ಟುತ್ತಿದ್ದೇನೆಂದು ಸುಳ್ಳು ಹೇಳಿದ್ದ.
ಬೆಳಗಿನ ಪಾಳಿಯ ಕೆಲಸ ಮುಗಿಸಿ (ಫಸ್ಟ್ ಶಿಫ್ಟ್ ) ೩ ಗಂಟೆಗೆ ಮನೆಗೆ ಬಂದ ನೆಂದರೆ, ೫ ಗಂಟೆಗೆಲ್ಲಾ ಹೆಂಡತಿಯನ್ನು ಕರೆದುಕೊಂಡು ಬೈಕ್ ಏರಿ ಪೇಟೆಗೆ ಹೊರಟು ಬಿಡುತ್ತಿದ್ದರು. ದಿನ ವೂ ಹೋಟೆಲ್, ಶಾಪಿಂಗ್, ಸಿನಿಮಾ ಎಂದು ನೀರಿನಂತೆ ಹಣ ಖರ್ಚು ಮಾಡುತ್ತಿದ್ದರು.
ಕಾರ್ಖಾನೆಯಲ್ಲಿ ಹಾಕಿದ್ದ ಚೀಟಿಯ ಹಣ ತೆಗೆದು ಫ್ರಿಜ್ಜು, ವಾಷಿಂಗ್ ಮೆಷಿನ್, ಏರ್‌ಕೂಲರ್ ಲಲಿತಾಳಿಗೆ ರೇಷ್ಮೆ ಸೀರೆ, ಚೂಡಿದಾರ್, ನೆಕ್ಲೇಸ್ ತರುತ್ತಲೇ ಹೋದ. ಲಲಿತಾ ಮೊದಲೇ ಸುಂದರಿ. ಬಣ್ಣ ಬಣ್ಣದ ರೇಷ್ಮೆ ಸೀರೆಗಳಲ್ಲಿ ಚೆಲುವಾದ ಗೊಂಬೆಯಂತೆ ಕಂಗೊಳಿಸುತ್ತಿದ್ದಳು. ಯೌವ್ವನದ ಹೊಸತು. ಗಂಡ ಸಾಲ ಮಾಡಿ ತರುತ್ತಿದ್ದಾನೆಂಬ ಕಲ್ಪನೆಯೇ ಅವಳಿಗೆ ಇರಲಿಲ್ಲ. ಹತ್ತಾರು ವರ್ಷಗಳಿಂದ ಕಟ್ಟಿದ ಚೀಟಿಯು ೫ ಲಕ್ಷ ವಾಗಿತ್ತು ಎಂದು ೫ ಲಕ್ಷ ಸಾಲ ಮಾಡಿಬಿಟ್ಟಿದ್ದ.
ಚೀಟಿ ಹಣ ಕಟ್ಟಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂತು. ಈ ನಡುವೆ ಲಲಿತಾ ಗರ್ಭಿಣಿಯಾಗಿದ್ದಳು. ಸಾಲ ಬೆಳೆಯು ತ್ತಲೇ ಹೋಯಿತು. ಗೆಳೆಯರನ್ನೆಲ್ಲ ಮನೆಗೆ ಕರೆ ತಂದು ಹೆಂಡತಿ ಮೂಲಕ ಪುಸಲಾ ಯಿಸಿ ಸಾಲ ಕೇಳತೊಡಗಿದ. ಲಲಿತಾ ವ್ಯಾವ ಹಾರಿಕವಾಗಿ ಅಷ್ಟೇ ನೂ ಜಾಣೆ ಆಗಿರಲಿಲ್ಲ. ತವರುಮನೆಯವರು ಬಡವರಾದ್ದರಿಂದ ಲಲಿತಾಳ ತಾಯಿಯನ್ನು ಗಂಡನ ಮೆನೆಗೆ ಕರೆಸಿ ಕೊಂಡು ಬಾಣಂತನ ಮಾಡಲಾಯಿತು. ಲಲಿತಾಳಿಗೆ ಹೆಣ್ಣು ಮಗು ವಾಗಿತ್ತು. ಮಗು ಅಪ್ಪನಂತಿರದೆ, ಅಮ್ಮನಷ್ಟೇ ಮುದ್ದಾಗಿತ್ತು.
ಕೇಶವನಿಗೆ ಸಾಲದ ಹೊರೆ ಹೆಚ್ಚಾಯಿತು. ಸಾಲಗಾರರ ಕಾಟ ತಾಳಲಾರದೆ ಕೆಲಸಕ್ಕೆ ಹೋಗುವುದನ್ನು ಬಿಟ್ಟುಬಿಟ್ಟ. ಸಾಲಗಾರರು ಬಡ್ಡಿಗೆಂದು ಬೈಕ್ ಕಿತ್ತುಕೊಂಡರು. ಹೆಂಡತಿಯ ಬಾಣಂತನಕ್ಕೆ ಊರಿನ ಅಗರ್ಭ ಶ್ರೀಮಂತರಾದ ವಿಶ್ವನಾಥ ಶೆಟ್ಟರ ಅಂಗಡಿಯಲ್ಲಿ ಸಾಮಾನು ತರುತ್ತಿದ್ದ. ಸಾಲ ಏರಿತ್ತು. ಬಾಕಿ ವಸೂಲಿಗೆಂದು ವಿಶ್ವ ನಾಥ ಶೆಟ್ಟರು, ಒಮ್ಮೆ ಕೇಶವನ ಮನೆಗೆ ಬಂದರು.ಅವನು ಮನೆಯಲ್ಲಿ ಇರಲಿಲ್ಲ. ೬ ತಿಂಗಳ ಬಾಣಂತಿಯಾಗಿದ್ದ ಲಲಿತಾಳಿಗೆ ತಾಯ್ತನ ಮತ್ತಷ್ಟು ಸೊಬಗು ತಂದಿತ್ತು. ಕುಶಲೋಪರಿ ವಿಚಾರಿಸಿದ ಶೆಟ್ಟರು ‘ಅಷ್ಟೊಂದು ಕಷ್ಟ ಯಾಕೆ ಪಡ್ತೀರಾ ಹೊಲ ಇದೆಯಲ್ಲ ಮಾರಿಬಿಡಿ’ ಅಂದರು. ‘ಹೊಲದ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆಂದು ಲಲಿತಾ ಇದ್ದ ವಿಷಯ ಶೆಟ್ಟರಿಗೆ ತಿಳಿಸಿದಳು.
‘ಸಂಜೆ ಮತ್ತೆ ಬರುತ್ತೇನೆ ಕೇಶವನಿಗೆ ಮನೆಯಲ್ಲೇ ಇರಲು ಹೇಳಮ್ಮಾ ’ ಎಂದು ವಿಶ್ವನಾಥ ಶೆಟ್ಟಿ ಹೊರಟು ಹೋದರು. ಸಾಲಗಾರರ ಕಾಟ ತಾಳಲಾರದೆ ಪಾರ್ಕಿನಲ್ಲಿ ಕಾಲ ಕಳೆಯುತ್ತಿದ್ದ ಕೇಶವ ರಾತ್ರಿ ೧೦ ಗಂಟೆ ನಂತರ ಮನೆಗೆ ಬಂದ. ಹುಡುಗರನ್ನು ಕಾವಲಿಗೆ ಬಿಟ್ಟಿದ್ದ ಶೆಟ್ಟರು, ಕೇಶವ ಮನೆಗೆ ಬಂದ ತಕ್ಷಣ ವಿಷಯ ತಿಳಿದು ಬಂದೇಬಿಟ್ಟರು. ‘ಎಷ್ಟು ಸುಂದರವಾದ , ಒಳ್ಳೆಯ ಹೆಂಡತಿ ಸಿಕ್ಕಿದ್ದಾಳೆ. ಸಾಲ ಮಾಡಿ ಕದ್ದು ಮುಚ್ಚಿ ಓಡಾಡಿದರೆ ಕೊಟ್ಟವರು ಬಿಡುತ್ತಾರೆಯೇ, ಹೊಲ ನಾನೇ ತೆಗೆದುಕೊಳ್ಳುತ್ತೇನೆ. ೮೦ ಸಾವಿರ ಬ್ಯಾಂಕ್ ಸಾಲ ಕಟ್ಟುತ್ತೇನೆ. ಉಳಿದ ೩ ಲಕ್ಷದಲ್ಲಿ ಸಾಲ ತೀರಿಸು ಎಂದು ಸಲಹೆ ನೀಡಿದರು.
ಕೇಶವನಿಗೆ ಸದ್ಯ ಹಣ ಸಿಕ್ಕರೆ ಸಾಕಾಗಿತ್ತು. ಇತ್ತೀಚೆಗೆ ಕುಡಿಯುವುದನ್ನೂ ಕಲಿತಿದ್ದ. ಶೆಟ್ಟರ ಮಾತಿಗೆ ಮರು ಮಾತಾಡದೆ ಒಪ್ಪಿದ. ಶೆಟ್ಟರೇ ಮುಂದೆ ನಿಂತು ಸಾಲಗಾರರಿಗೆ ಅಷ್ಟು ಇಷ್ಟು ಕೊಟ್ಟು ತೀರ್ಮಾನ ಮಾಡಿದ್ದರು. ಕೆಲವು ದಿನ ಕೆಲಸಕ್ಕೆ ಹೋದ ಕೇಶವ. ಒಂದು ದಿನ ಸಾಲಗಾರರಿಗೆ ಕೊಡಬೇಕೆಂದು ೨೦ ಸಾವಿರ ತೆಗೆದುಕೊಂಡು ಹೋದವನು ಮನೆಗೆ ಬರಲೇ ಇಲ್ಲ. ಶೆಟ್ಟರಿಗೆ ಹೇಳಿ ಕಳುಹಿಸಿ ಎಲ್ಲ ಕಡೆ ವಿಚಾರಿಸಿದರೂ ಕೇಶವನ ಪತ್ತೆಯಿಲ್ಲ. ಈ ನಡುವೆ ಲಲಿತಾಳ ತಂದೆ ಹೃದಯಾಘಾತದಿಂದ ತೀರಿ ಕೊಂಡಿದ್ದರು. ಹೀಗಾಗಿ ತಾಯಿಯೂ ಊರಿಗೆ ಹೋಗಿದ್ದರು. ತಿಂಗಳುಗಳು ವರ್ಷವಾದರೂ ಕೇಶವನ ಪತ್ತೆಯಾಗಲಿಲ್ಲ.
ಲಲಿತಾಳ ಕೈಲಿದ್ದ ಹಣವೆಲ್ಲ ಸಾಲಗಾರರ ಪಾಲಾಗಿತ್ತು. ಕಣ್ಣೀರಿನಲ್ಲಿ ಕೈತೊಳೆಯಬೇಕಾಯಿತು. ಒಂದೂವರೆ ವರ್ಷದ ಮಗು ಅಮ…. ಎಂದು ತೊದಲುತ್ತಾ ತಪ್ಪು ಹೆಜ್ಜೆ ಹಾಕಿ ನಡೆಯುತ್ತಿತ್ತು. ಬಹಳ ದಿನಗಳ ನಂತರ ವಿಶ್ವನಾಥ ಶೆಟ್ಟರು ಮನೆಗೆ ಬಂದರು. ಮನೆಯಲ್ಲಿದ್ದ ಲಲಿತಾಳ ಪರಿಸ್ಥಿತಿ ನೋಡಿ ಅಂಗಡಿ ಹುಡುಗನ ಕೈಲಿ ಸಾಮಾನು ಕಳುಹಿಸಿಕೊಟ್ಟರು.ದಿನಕ್ಕೊಮ್ಮೆ ತಪ್ಪದೇ ಲಲಿತಾಳ ಮನೆಗೆ ಶೆಟ್ಟರು ಬರ ತೊಡಗಿದರು. ಆಗಲೇ ಅಕ್ಕ ಪಕ್ಕದ ಮನೆಯ ಹೆಂಗಸರ ಬಾಯಲ್ಲಿ ಗುಸು ಗುಸು ಶುರುವಾಗಿತ್ತು.
ಪಕ್ಕದ ಮನೆಯ ನೀಲಕ್ಕ, ಅತ್ಯಂತ ಬಾಯಿ ಬಡುಕಿ ಯಾರೊಂದಿ ಗಾದರೂ ಜಗಳಕ್ಕೆ ಬಿದ್ದರೆ ಅವರ ಜನ್ಮ ಜಾಲಾಡಿಬಿಡುತ್ತಿದ್ದಳು… ಹೀಗಾಗಿ ಯಾರೂ ಕೂಡಾ ಅವಳನ್ನು ಎದುರು ಹಾಕಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಅಂದು ಬೆಳಿಗ್ಗೆಯೇ ಶೆಟ್ಟರು, ಲಲಿತಾಳ ಮನೆಗೆ ಬಂದು ಹೊರಗೆ ಬರುವುದನ್ನೇ ಕಾದಿದ್ದ ನೀಲಕ್ಕ, ‘ಬೆಕ್ಕು ಹಾಲು ಕುಡಿಯಲು ಬಂದಿತ್ತೇನೋ ! ಎಂದು ಜೋರಾ ಗಿಯೇ ಹೇಳಿದಳು.
ಇದರಿಂದ ಕಸಿವಿಸಿಗೊಂಡು ಗಡಿಬಿಡಿಯಲ್ಲಿ ಹೊರಟು ಹೋದ ವಿಶ್ವನಾಥ ಶೆಟ್ಟರು, ಮೂರ‍್ನಾಲ್ಕು ದಿನಗಳ ಕಾಲ ಲಲಿತಾಳ ಮನೆಗೆ ಬಂದಿರಲಿಲ್ಲ.
ಅಂದು ಶುಕ್ರವಾರ ಅಮ್ಮನ ದೇವಸ್ಥಾನಕ್ಕೆ ಹೊರಟವರು ಸೀದಾ ಲಲಿತಾಳ ಮನೆಗೆ ಬಂದರು. ಅದು, ಇದು ಮಾತನಾಡುತ್ತಾ ಲಲಿತಾ ನನಗೆ ಸುತ್ತಿ ಬಳಸಿ ಮಾತನಾಡಲು ಬರುವುದಿಲ್ಲ. ನಿನ್ನ ಗಂಡ ಅಯೋಗ್ಯ. ನಿನ್ನಂಥ ಚೆಲುವೆ, ಸುಗುಣ ಸಂಪನ್ನೆಯನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾದರೂ ಹೇಗೆ ಬಂತು. ಇನ್ನು ಅವನ ಬಗ್ಗೆ ಯೋಚಿಸಬೇಡ. ಹೇಗೂ ಜನ ನಮ್ಮ ನಡುವೆ ಇಲ್ಲದ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ. ನಿನ್ನಲ್ಲಿ ಸೌಂದರ್ಯವಿದೆ. ನನ್ನಲ್ಲಿ ಹಣವಿದೆ. ನನ್ನ ಹೆಂಡತಿಯೋ ಕುರೂಪಿ ನೀನೇ ನನ್ನ ಸಂಗಾತಿಯಾಗಿ ಇದ್ದುಬಿಡು. ರಾಣಿಯ ಹಾಗೆ ನೋಡಿಕೊಳ್ಳುತ್ತೇನೆ ಎಂದು ಬಿಟ್ಟರು.
ನಾನಂಥವಳಲ್ಲ… ಎಂದು ಲಲಿತಾ ಹೇಳಲು ಪ್ರಯತ್ನಿಸಿದರೂ ನಾಲಿಗೆ ಯಿಂದ ಮಾತು ಹೊರ ಬರಲಿಲ್ಲ. ಶೆಟ್ಟರು ಅವಳ ಬಳಿ ಸಾಗಿ ಕೈ ಹಿಡಿದು ಕೊಂಡರು. ಕಂಪಿಸುತ್ತಿದ್ದ ಲಲಿತಾಳ ಕೈಯನ್ನು ತಮ್ಮ ಎರಡು ಕೈಗಳಲ್ಲಿ ಅದುಮಿ ‘ನಾನಿದ್ದೇನೆ. ಹೆದರಬೇಡ. ನಿನ್ನ ಕೈ ಬಿಡೋಲ್ಲ’ ಎಂದು ತಲೆ ನೇವರಿಸಿ ಯೋಚಿಸಿ ಹೇಳು ಎಂದು ಹೊರಟು ಹೋದರು. ಶೆಟ್ಟರು ಗೇಟು ತೆರೆದು, ಹೊರ ಹೋಗಿ ದ್ದರಿಂದ ನೀಲಕ್ಕನ ಸೀಮೆ ಹಸು ಲಲಿತಾಳ ಅಂಗಳದಲ್ಲಿ ಬೆಳೆಸಿದ್ದ ಹೂವಿನ ಗಿಡಗಳನ್ನೆಲ್ಲ ತಿನ್ನತೊಡಗಿತ್ತು.
ಅದೇ ಸಮಯಕ್ಕೆ ಹೊರ ಬಂದ ಲಲಿತಾ ‘ಆಂಟಿ, ಹಸು ಹೂವಿನ ಗಿಡಗಳನ್ನೆಲ್ಲ ತಿಂದು ಹಾಕುತ್ತಿದೆ. ಬೇಗ ಕಟ್ಟಿ ಹಾಕಿ ಎಂದಳು. ನೀಲಕ್ಕನಿಗೆ ಅಷ್ಟೇ ಸಾಕಾಗಿತ್ತು. ಏನೇ, ಗರತಿ, ನನ್ನ ಹಸು ತಿನ್ನಬಾರದ ತಿಂದಿದೆಯೇನೆ, ಯಾರ‍್ಯಾರೋ ನಿನ್ನ ಮನೆಗೆ ಬಂದು ಮೇಯ್ದು ಹೋಗ್ತಾರೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಅಂತ ಮಾಡಿದ್ದೀಯಾ ಎಂದು ವಾಚಾಮಗೋಚರ ಬೈದಳು.ಲಲಿತಾಳ ದೈನೇಸಿ ಬೇಡಿಕೆ ಅವಳ ಕಿವಿಗೆ ನಾಟಲೇ ಇಲ್ಲ. ಮಧ್ಯಾಹ್ನವಾದರೂ ನೀಲಕ್ಕ ಶಾಪ ಹಾಕುತ್ತಲೇ ಇದ್ದಳು.
ಲಲಿತಾಳಿಗೆ ಏನನ್ನಿಸಿತೋ ಏನೋ ಗಟ್ಟಿ ನಿರ್ಧಾರ ತೆಗೆದುಕೊಂಡು ‘ನನ್ನ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬರಬಾರದು ನನ ಸಾವಿಗೆ ನಾನೇ ಕಾರಣ’ ಎಂದು ಪತ್ರ ಬರೆದಿಟ್ಟು ಮಗುವಿನೊಂದಿಗೆ ನೇಣಿಗೆ ಶರಣಾಗಿದ್ದಳು. ವಿಷಯ ತಿಳಿದು ತುಂಬಾ ವೇದನೆಯಾಯಿತು.
ನನ್ನವಳು ಪೊಲೀಸರು ಬಂದಿದ್ದಾರೆ. ನೀಲಕ್ಕನನ್ನು ವಿಚಾರಣೆಗೆಂದು ಕರೆದು ಕೊಂಡು ಹೋದರು ಎಂದು ತಿಳಿಸಿದಳು. ಮರು ದಿವಸ ಕುಲ-ಬಾಂಧವರೆಲ್ಲ ಸೇರಿ ಲಲಿತಾ ಹಾಗೂ ಆಕೆಯ ಮುದ್ದು ಮಗುವಿನ ಚಿತೆಗೆ ಬೆಂಕಿ ಇಟ್ಟರೆಂದು ತಿಳಿಯಿತು.‘ಹೆಣ್ಣಿಗೆ ಸೌಂದರ್ಯವೇ ಶತ್ರು’ ಎಂಬ ಕೀಟ್ಸ್‌ನ ಮಾತು ನನಗೆ ನಿಜ ಎನ್ನಿಸಿತ್ತು. ‘ಒಂದು ದಿನ ಅವಳು ತರಕಾರಿಗೆಂದು ನಮ್ಮ ಅಂಗಡಿಗೆ ಬಂದಿದ್ದಳು. ನನ್ನವಳು ಅಡುಗೆಯಲ್ಲಿ ತೊಡಗಿದ್ದರಿಂದ ನಾನೇ ಹಸಿಮೆಣಸು, ಕೊತ್ತಂಬರಿ ಸೊಪ್ಪು ಕೊಟ್ಟಿದ್ದೆ. ತನ್ನ ಕೋಗಿಲೆ ಕಂಠದಿಂದ ‘ಥ್ಯಾಂಕ್ಯೂ ಅಂಕಲ್’ಎಂದಿದ್ದಳು. ಆ ಧ್ವನಿಯಲ್ಲಿ ಎಷ್ಟೊಂದು ಮಾಧುರ್ಯವಿತ್ತು.
ಅವಳ ಬಗ್ಗೆ ಏನೋ ಮಮಕಾರ ಉಂಟಾಗಿ ಮೆಲ್ಲನೆ ‘ಮಗಳೇ ಎಂದಿದ್ದೆ. ಹಿಂತಿರುಗಿ ನೋಡಿ ಮುಗುಳ್ನಕ್ಕು ‘ಬರ್ತೀನಿ’ ಅಂಕಲ್ ಎಂದಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಫಳ್, ಫಳೀರ್ ಎಂಬ ಸಿಡಿಲಿನ ಶಬ್ಧ ಕೇಳಿಸಿತು. ಕಿಟಕಿಯ ಮೂಲಕ ಮಿಂಚು ಕಾಣಿಸಿತು. ಅದರ ಹಿಂದೆಯೇ ಧಾರಾಕಾರ ಮಳೆ ಸುರಿಯತೊಡಗಿತು.
RELATED ARTICLES
- Advertisment -
Google search engine

Most Popular

Recent Comments