ಶಿವಮೊಗ್ಗ: ವಿದ್ಯಾವಂತನಾಗಿ ಬೆಳೆದ ಮನುಷ್ಯನಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶೃಂಗೇರಿ ಜಗದ್ಗರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿಯ ಎಲ್.ಬಿ.ಎಸ್. ನಗರದಲ್ಲಿ ನೂತನವಾಗಿ ಆರಂಭವಾದ ಆರ್ಯ ವಿಜ್ಞಾನ ಪಿ.ಯು. ಕಾಲೇಜನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ವಿದ್ಯಾಭ್ಯಾಸವನ್ನು ಕೊಡುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿಸಬಹುದು. ವಿದ್ಯಾಭ್ಯಾಸದ ಜೀವನ ಒಂದು ಸುವರ್ಣಾವಕಾಶ. ವಿದ್ಯೆಯನ್ನು ಪಡೆಯುವಾಗ ಮಕ್ಕಳು ಯಾವುದೇ ದುರಭ್ಯಾಸಕ್ಕೆ ಅದರಲ್ಲಿಯೂ ವಿಶೇವಾಗಿ ಮೊಬೈಲ್ ಗೀಳಿಗೆ ಈಡಾಗಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು.
ಇದಕ್ಕೂ ಮುನ್ನ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಕಾಲೇಜಿನ ನಾಮಫಲಕ ಅನಾವರಣಗೊಳಿಸಿ ಬಳಿಕ ವಿದ್ಯಾಧಿದೇವತೆ ಶ್ರೀ ಸರಸ್ವತಿ ಪೂಜೆ ನೆರವೇರಿಸಿದರು. ಪ್ರಯೋಗಾಲಯ ಉದ್ಘಾಟನೆಯನ್ನು ನೆರವೇರಿಸಿದರು. ಶ್ರೀ ಶಂಕರಮಠದ ಧರ್ಮಾಧಿಕಾರಿ ಡಾ.ಪಿ. ನಾರಾಯಣ್, ಡಾ. ಪರಮೇಶ್, ಸಿದ್ಧಾರ್ಥ್ ಕೆ., ಮೋನಿಷಾ ಸಿದ್ಧಾರ್ಥ್, ಬಿ.ಜೆ. ಸುನಿತಾದೇವಿ, ಎಸ್. ಮುಕುಂದ್, ಡಾ. ರಾಧಿಕಾ ದೇವಿ, ಮಾಜಿ ಸಂಸದ ಆಯನೂರು ಮಂಜುನಾಥ್ ಮೊದಲಾದವರಿದ್ದರು.