ಶಿವಮೊಗ್ಗ: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಟಿಜಿಟಿ ಮಳೆ ಮತದಾರರಿಗೆ ಕೊಂಚ ಕಿರಿ ಕಿರಿ ಉಂಟು ಮಾಡುತ್ತಿದ್ದರೂ ಸಹ ಮತ ಕೇಂದ್ರಗಳಲ್ಲಿ ಉದ್ದನೆಯ ಸಾಲು ಕಂಡುಬರುತ್ತಿತ್ತು.
ಇಂದು ಬೆಳಿಗ್ಗೆಯಿಂದಲೇ ನಗರದಲ್ಲಿ ವಿಧಾನಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಬಿರುಸಿನಿಂದ ನಡೆಯಿತು.
ಮತದಾನದ ಬಗ್ಗೆ ಹೆಚ್ಚು ಆಸಕ್ತಿ ಇದ್ದವರು ಮಾತ್ರ ಕಾರು ಮತ್ತು ಆಟೋಗಳಲ್ಲಿ ಬಂದು ಮತದಾನ ಮಾಡಿದ್ದು ಕಂಡುಬಂತು. ಮತಕೇಂದ್ರಗಳ ಎದುರು ಕೆಲವೆಡೆ ಮತ ಕೇಳಲು ಹೆಚ್ಚು ಕಾರ್ಯಕರ್ತರೇ ಇರಲಿಲ್ಲ.
ಮಳೆ ಬೆಳಿಗ್ಗೆ ೧೦ ಗಂಟೆ ನಂತರ ಕೆಲಕಾಲ ಕ್ಷೀಣಿಸಿದ್ದರಿಂದ ಮತಗಟ್ಟೆಯತ್ತ ಮತದಾರರ ಸಂಖ್ಯೆ ಕಂಡುಬಂತು. ಅನೇಕ ಕಡೆ ಮತದಾರರು ಸರದಿಯಲ್ಲಿ ನಿಂತು ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಿದರು.
ಶಿಕ್ಷಕರು ಹೆಚ್ಚಾಗಿ ಪದವೀಧರರೂ ಆಗಿರುವುದರಿಂದ ಎರಡೂ ಕ್ಷೇತ್ರಕ್ಕೂ ಮತ ಚಲಾವಣೆ ಮಾಡಿದ್ದು ಕಂಡುಬಂತು.
ಮಧ್ಯಾಹ್ನದ ವೇಳೆಗೆ ಪದವೀಧರ ಕ್ಷೇತ್ರದಲ್ಲಿ ಶೇ.೫೦ರಷ್ಟು ಮತದಾನ, ಶಿಕ್ಷಕರ ಕ್ಷೇತ್ರದಲ್ಲಿ ಶೇ. ೫೩ರಷ್ಟು ಮತದಾನ ವಾಗಿತ್ತು.
ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಮಿಳಘಟ್ಟದ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿ ಮಂಜುಳಾರೊಂದಿಗೆ ಆಗಮಿಸಿ ಮತಚಲಾಯಿಸಿದರು.
ಶಾಸಕ ಕೆ.ಎಸ್. ಈಶ್ವರಪ್ಪ ಅವರು ನವುಲೆಯ ಸರ್ಕಾರಿ ಶಾಲೆಯ ಮತಗಟ್ಟೆ ಯಲ್ಲಿ ಸರದಿಯಲ್ಲಿ ಕಾದು ನಿಂತು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.
ಕಳೆದ ೩೦ ವರ್ಷಗಳಿಂದ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಡಿ.ಹೆಚ್. ಶಂಕರಮೂರ್ತಿ ಅವರು ಬಾಲರಾಜ್ ಅರಸ್ ರಸ್ತೆಯಲ್ಲಿರುವ ಲೋಕೋಪಯೋಗಿ ಕಛೇರಿಯ ಮತಕೇಂದ್ರದಲ್ಲಿ ಮತದಾನ ಮಾಡಿದರು.
ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದ ಚುನಾವಣೆಗೆ ೪೫ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ೩೫ ಮತಕೇಂದ್ರಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿತ್ತು.
ಎಲ್ಲಾ ಮತಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಧ್ಯಾಹ್ನದ ನಂತರ ನಗರದಲ್ಲಿ ಮಳೆ ವಿರಾಮ ಕೊಟ್ಟಿದ್ದರಿಂದ ಮತ ಕೇಂದ್ರಗಳಿಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿತು. ಅಲ್ಲದೆ, ಚುನಾವಣಾ ಆಯೋಗ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಓಓಡಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದರಿಂದಾಗಿ ಇವರುಗಳು ಮತ ಕೇಂದ್ರಗಳಿಗೆ ತೆರಳಿ ಮತ ಹಾಕಲು ಹೆಚ್ಚಿನ ಅನುಕೂಲವಾದಂತಾಗಿದೆ.