Saturday, October 12, 2024
Google search engine
Homeಇ-ಪತ್ರಿಕೆಸೊರಬ: ಕೊರಕೊಡು ಗ್ರಾಮದಲ್ಲಿ 8ನೇ ಶತಮಾನದ ಶಾಸನ ಪತ್ತೆ

ಸೊರಬ: ಕೊರಕೊಡು ಗ್ರಾಮದಲ್ಲಿ 8ನೇ ಶತಮಾನದ ಶಾಸನ ಪತ್ತೆ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕು ಕೊರಕೊಡು ಗ್ರಾಮದಲ್ಲಿ  8ನೇ ಶತಮಾನದ ರಾಷ್ಟ್ರಕೂಟರ ಅರಸ ದ್ರುವನ ಅವಧಿಯ ಶಾಸನ ಪತ್ತೆಯಾಗಿದೆ. ಇತಿಹಾಸ ಸಂಶೋಧಕರಾದ ರಮೇಶ. ಬಿ ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿಗುಂಡಿಯವರು ಸ್ಥಳೀಯ ಇತಿಹಾಸ ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿಯವರ ಸೂಚನೆಯ ಮೇರೆಗೆ ಕ್ಷೇತ್ರ ಅಧ್ಯಯನ ಕೈಗೊಂಡಾಗ ಈ ಶಾಸನ ಪತ್ತೆ ಮಾಡಲಾಗಿದೆ.

ಈ ಶಾಸನವು ಒಟ್ಟು ಹದಿನೇಳು ಸಾಲುಗಳನ್ನು ಹೊಂದಿದ್ದು ಮೇಲ್ಬಾಗದಲ್ಲಿ ವಿಜಯದ ಸಂಕೇತವಾದ ಕುದುರೆ ಶಿಲ್ಪವಿದೆ. ಶಾಸನದ ಮಾಹಿತಿ ಪ್ರಕಾರ ಕ್ರಿ.ಶ. 780-793ರ ಅವಧಿಯಲ್ಲಿ ರಾಷ್ಟ್ರಕೂಟರ ದೊರೆ ದ್ರುವನು ಆಡಳಿತ ನಡೆಸುತ್ತಿದ್ದಾಗ ಬನವಾಸಿ ಪನ್ನಿಚ್ಛಾಸಿರ ನಾಡಿನ ಆಡಳಿತವನ್ನು  ಸೇವುಣರ ಮರಕ್ಕೆ ಅರಸ ನೋಡಿಕೊಳ್ಳುತ್ತಿದ್ದ. ಈ ಅವಧಿಯಲ್ಲಿ ಮರಕ್ಕೆ ಅರಸನ ಮಹಾಮಾತ್ರನು ಕೊರಕೊಡಿನ ದೇವರಿಗೆ ಸಲ್ಲುವ ದ್ರವ್ಯದಲ್ಲಿ ದಿಂಡೂರಿನಲ್ಲಿ ಒಂದು ದೇವಾಲಯದ ನಿರ್ಮಿಸಿ ಅದರ ನಿರ್ವಹಣೆಗೆ ಕೃಷಿಯೋಗ್ಯ ಭೂಮಿಯನ್ನು ದಾನ ನೀಡಿದ ಮಾಹಿತಿ ಇದೆ. ಕೊನೆಯಲ್ಲಿ ಈ ದೇವಾಲಯವನ್ನು  ದೇವಾವರಿಯರ ಮಗನಾದ ಶಿಲ್ಪಿ ಶ್ರೀಧರನು ನಿರ್ಮಿಸಿದ ಎಂಬ ಮಾಹಿತಿ ಇದೆ.

ಈ ಧರ್ಮವನ್ನು ಹಾಳು ಮಾಡಿದವರಿಗೆ ಮತ್ತು ರಕ್ಷಿಸಿದವರಿಗೆ ಶಾಪಾಶಯವನ್ನು ವಿವರವಾಗಿ ಖಂಡರಿಸಲಾಗಿದೆ. ಈ ಗ್ರಾಮದಲ್ಲಿ 12-13ನೇ ಶತಮಾನದ ಅವಧಿಯ ಐದು ತುರುಗೋಳ್ ವೀರಗಲ್ಲುಗಳು ಪ್ರಕಟವಾಗಿವೆ. ಶಾಸನ ಪಾಠವಿರದ ಇನ್ನೂ ಮೂರು ವೀರಗಲ್ಲುಗಳು ಎರಡು ಮಾಸ್ತಿಕಲ್ಲುಗಳು ಇಲ್ಲಿ ಲಭ್ಯ ಇವೆ. ಈ ವೀರಗಲ್ಲುಗಳನ್ನು ಗ್ರಾಮದ ಕಲ್ಲೇಶ್ವರ ದೇವಾಲಯದ ಎದುರು ಸಾಲಾಗಿ ನಿಲ್ಲಿಸಿ ಸಂರಕ್ಷಿಸಲಾಗಿದೆ. ಈ ದೇವಾಲಯದ ಪಕ್ಕದಲ್ಲಿ ಕಳ್ಳರಾಮೇಶ್ವರ ಎಂಬ ಮಣ್ಣಿನ ಗೋಡೆಯಿಂದ ರಚಿಸಿದ ದೇವಾಲಯವಿದ್ದು ಒಳಭಾಗದಲ್ಲಿ 6-7ನೇ ಶತಮಾನಕ್ಕೆ ಸೇರಬಹುದಾದ ಶಿವಲಿಂಗವಿದೆ.

ಶಾಸನ ಸಾಹಿತ್ಯ ಅಧ್ಯಯನಕ್ಕೆ ಇತಿಹಾಸ ಸಂಶೋಧಕರಾದ ಡಾ. ಪಾಡಿಗಾರ್ ಮತ್ತು ಡಾ. ಜಗದೀಶ  ಅಗಸಿ ಬಾಗಿಲು ಡಾ. ಶೇಜೇಶ್ವರ ನಾಯಕರವರು ಮಾರ್ಗದರ್ಶನ ನೀಡಿದ್ದಾರೆ. ಶಾಸನ ಶೋಧನೆಗೆ ಇತಿಹಾಸ ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿಯವರು, ಮತ್ತು ಗ್ರಾಮದ ಮಧು, ಜಗದೀಶಗೌಡ, ಶಾಂತಪ್ಪಗೌಡ್ರು, ಸಂತೋಷ. ಮಲ್ಲಿಕಾರ್ಜುನ ಗೌಡ್ರು, ನಂಜುಂಡಗೌಡ್ರ, ಕೆಂಡಪ್ಪ ಗೌಡ್ರು ಮುಂತಾದವರು ಸಹಕರಿಸಿದ್ದಾರೆಂದು ಇತಿಹಾಸ ಸಂಶೋಧಕರಾದ ರಮೇಶ. ಬಿ ಹಿರೇಜಂಬೂರು ತಿಳಿಸಿದ್ದಾರೆ.

ಕೊರಕೊಡು ಗ್ರಾಮದಲ್ಲಿ  ಪತ್ತೆಯಾದ  ಶಾಸನವು 8ನೇ ಶತಮಾನದ ರಾಷ್ಟ್ರಕೂಟರ ಅರಸ ದ್ರುವನ ಅವಧಿಯದ್ದು . ಈ ಶಾಸನವು ಒಟ್ಟು ಹದಿನೇಳು ಸಾಲುಗಳನ್ನು ಹೊಂದಿದ್ದು ಮೇಲ್ಬಾಗದಲ್ಲಿ ವಿಜಯದ ಸಂಕೇತವಾದ ಕುದುರೆ ಶಿಲ್ಪವಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments