ಶಿವಮೊಗ್ಗ: ಭಾರತೀಯ ಸೇನೆಯಲ್ಲಿ ಆರಂಭವಾಗಿರುವ ಅಗ್ನಿವೀರ್ ಕುರಿತು ಅಪಪ್ರಚಾರ ನಡೆಯುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಉಮೇಶ್ ಬಾಪಟ್ ತಿಳಿಸಿದರು
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈನಿಕರ ಪ್ರಮುಖ ಪಾತ್ರ ದೇಶದ ರಕ್ಷಣೆ. ಇದು ಬೇರೆ ಉದ್ಯೋಗದಂತೆ ಅಲ್ಲ. ಇದರ ಪ್ರಮುಖ ಉದ್ದೇಶ ದೇಶ ಸೇವೆಯಾಗಿದೆ. ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಸೈನಿಕ ಹುದ್ದೆಗೆ ಅತ್ಯಂತ ಗೌರವವನ್ನು ಸಲ್ಲಿಸುತ್ತಿದ್ದಾರೆ. ಸೈನಿಕರ ಜೊತೆ ಸೇರಿ ದೀಪಾವಳಿ ಆಚರಿಸುವುದರ ಮೂಲಕ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸುತ್ತಿದ್ದಾರೆ ಎಂದು ಹೇಳಿದರು.
ಸೈನ್ಯದಲ್ಲಿ ತರಬೇತಿ ಸಮಯದಲ್ಲಿಯೇ ಅಗ್ನಿವೀರ್ ಸೈನಿಕನು ಸಾಕಷ್ಟು ಶಿಸ್ತು, ದೇಶಭಕ್ತಿ, ಆತ್ಮಸ್ಥೈರ್ಯ, ಕೌಶಲ್ಯ ಅಭಿವೃದ್ಧಿಯ ಪಡೆದಿರುತ್ತಾನೆ. 4 ವರ್ಷದ ಸೇವೆಯ ನಂತರ ಹೊರಗಡೆ ಬಂದಾಗ 10ರಿಂದ 12 ಲಕ್ಷ ರೂ. ಹಣ ಪರಿಹಾರ ರೂಪದಲ್ಲಿ ದೊರಕುತ್ತದೆ. ಸೇವೆಯ ಸಂದರ್ಭದಲ್ಲಿ ಸುಮಾರು 45 ಸಾವಿರದವರೆಗಿನ ತಿಂಗಳ ಸಂಬಳ ಪಡೆಯುವುದು ಪ್ರತ್ಯೇಕವಾಗಿರುತ್ತದೆ. ಒಬ್ಬ ಅಗ್ನಿವೀರ್ ಸೈನಿಕನಿಗೆ 80 ಲಕ್ಷ ರೂ. ನಿಂದ 1 ಕೋಟಿಯವರೆಗೆ ಖರ್ಚನ್ನು ಸರಕಾರ ಭರಿಸುತ್ತದೆ. ಹೊರಗಡೆ ಬಂದ ಅಗ್ನಿವೀರ್ ಸೈನಿಕ ಬೇರೆ ಉದ್ದಿಮೆ ಆರಂಭಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದತ್ತಾತ್ರಿ, ಹೃಷಿಕೇಶ್ ಪೈ, ಶ್ರೀನಿವಾಸ ರೆಡ್ಡಿ, ಅಣ್ಣಪ್ಪ ಮೊದಾದವರು ಉಪಸ್ಥಿತರಿದ್ದರು.