ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ‘ಲಕ್ಕಿ ಅಲಿ’ ಎಂದೇ ಪ್ರಸಿದ್ದಿ ಪಡೆದಿರುವ ಖ್ಯಾತ ಗಾಯಕ ಮಕ್ಸೂದ್ ಮಹಮೂದ್ ಅಲಿ ಭೂಕಬಳಿಕೆ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಸಿಂಧೂರಿಯವರ ಪತಿ ಸುಧೀರ್ ರೆಡ್ಡಿ, ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್ ಯಲಹಂಕ ಮತ್ತಿತರರ ವಿರುದ್ಧ ಕೂಡ ದೂರು ಸಲ್ಲಿಸಿದ್ದಾರೆ. ಸಾಜಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿಯನ್ನು ಗಾಯಕ ಅಲಿಯವರು ಹಂಚಿಕೊಂಡಿದ್ದಾರೆ.
ಯಲಹಂಕದಲ್ಲಿರುವ ಟ್ರಸ್ಟ್ ಆಸ್ತಿಯಾಗಿರುವ ನನ್ನ ಜಮೀನನ್ನು ಸುಧೀರ್ ರೆಡ್ಡಿಯವರು ಅವರ ಪತ್ನಿ ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿಯ ಸಹಾಯದಿಂದ ಅತಿಕ್ರಮಿಸುತ್ತಿದ್ದಾರೆ ಎಂದು ಅಲಿ ಬರೆದುಕೊಂಡಿದ್ದರು.
ಕಳೆದ 50 ವರ್ಷಗಳಿಂದ ಜಮೀನು ನಮ್ಮ ಸ್ವಾಧೀನದಲ್ಲಿದೆ, ನಾವು ಅಲ್ಲಿ ವಾಸಿಸುತ್ತಿದ್ದೇವೆ. ಈ ಕುರಿತು ಎಸಿಪಿಗೆ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದರು.
ಈ ಪ್ರಕರಣದಲ್ಲಿ ನನ್ನದೇನು ಪಾತ್ರವಿಲ್ಲ. OSNO5592/2016ರಲ್ಲಿ ಲಕ್ಕಿ ಅಲಿ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದೆ ಎಂದು ಗೊತ್ತಾಗಿದೆ ಎಂದು ರೋಹಿಣಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಮೂಲದ ಲಕ್ಕಿ ಅಲಿ ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಹಿಂದಿ ಸಿನಿಮಾ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ.