ಶಿವಮೊಗ್ಗ : ದೇಶದ ಆಧ್ಯಾತ್ಮಿಕ ಜಗತ್ತಿನ ಸರ್ವೋಚ್ಚ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳ ಅಧ್ಯಯನದಿಂದ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿಯೂ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭಾಮರವಂತೆ ಹೇಳಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಮನುಷ್ಯತ್ವ ಹಾಗೂ ಮಾನವತೆಯ ಉದಾತ್ತ ದ್ಯೇಯೋದ್ಧೇಶವನ್ನು ಮನೆ-ಮನಗಳಿಗೆ ಪರಿಚಯಿಸಿದ ಕೀರ್ತಿ ವಾಲ್ಮೀಕಿ ವಿರಚಿತ ರಾಮಾಯಣಕ್ಕೆ ಸಲ್ಲುತ್ತದೆ ಎಂದರು.
ದೇಶದ ಮಹಾನ್ ಗ್ರಂಥವಾದ ರಾಮಾಯಣದಲ್ಲಿ ನಿರಾಕರಣೆಯ ಹಾಗೂ ಮಹಾಭಾರತದಲ್ಲಿ ಸ್ವಾರ್ಥಪರವಾದ ಆದರ್ಶಯುಕ್ತ ಚಿಂತನೆಗಳಿವೆ. ಕಲುಷಿತ ಸಮಾಜದ ಸುಧಾರಣೆಗೆ ರಾಮಾಯಣ ಗ್ರಂಥದಲ್ಲಿರುವ ತತ್ವಗಳು ಪ್ರಮುಖಪಾತ್ರ ವಹಿಸುತ್ತವೆ. ಎಂದ ಅವರು, ಮನುಕುಲಕ್ಕೆ ರಾಮಾಯಣದಂತಹ ಮಹಾನ್ ಕೃತಿಯನ್ನು ನೀಡಿದ ಕೀರ್ತಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದರು.
ರಾಮಾಯಣದಲ್ಲಿ ಕಾಣುವ ಆದರ್ಶ ಮೌಲ್ಯಗಳನ್ನು ಅರಿಯಬೇಕು. ಸೀತಾಮಾತೆಯ ಸಹನಾಶಕ್ತಿಯನ್ನು ಮೆಚ್ಚಿಕೊಳ್ಳಲೇಬೇಕು. ಇದರಿಂದಾಗಿ ವಾಲ್ಮೀಕಿ ಓರ್ವ ಶ್ರೇಷ್ಟ ಶಿಕ್ಷಣ ತಜ್ಞ, ರಾಜಕಾರಣಿ, ಆದರ್ಶವಾದಿಯಾಗಿದ್ದ ಎಂಬುದು ಮನವರಿಕೆಯಾಗಲಿದೆ ಎಂದ ಅವರು, ವರ್ಗರಹಿತ, ಜಾತಿರಹಿತ, ವರ್ಣರಹಿತ ಸಮಾಜ ಕನಸು ಇಂದು ಸಾಕಾರಗೊಂಡಿದ್ದರೆ ಅದು ವಾಲ್ಮೀಕಿ ಚಿಂತನೆಯ ಫಲ, ರಾಮರಾಜ್ಯದ ಕಲ್ಪನೆಯ ಸೃಷ್ಟಿಯೂ ಕೂಡ ವಾಲ್ಮೀಕಿಯದ್ದೇ ಎಂದವರು ನುಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಾಲ್ಮೀಕಿ ಕವಿಯಾಗಿ ರಚಿಸಿದ ರಾಮಾಯಣ ಸಾಗರದಾಚೆಯೂ ತಲುಪಿ, ವಿಶ್ವದ ಎಲ್ಲಾ ಭಾಷೆಗಳಿಗೂ ತರ್ಜುಮೆಯಾಗಿರುವುದು ಅದರ ಶ್ರೇಷ್ಟತೆಯನ್ನು ಎತ್ತಿತೋರಿಸುತ್ತದೆ. ದೇಶ-ಭಾಷೆಯನ್ನು ಮೀರಿ ರಾಮಾಯಣ ಪ್ರಸಿದ್ದಿ ಹೊಂದಿದೆ ಎಂದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸೂಡಾ ಅಧ್ಯಕ್ಷ ಇಸ್ಮಾಯಿಲ್‌ಖಾನ್, ಉಪ ಮೇಯರ್ ಎಸ್.ರೂಪ ಲಕ್ಷ್ಮಣ್, ಮಮತಾಸಾಲಿ, ರೇಖಾ ಪ್ರವೀಣ್, ನಿರ್ಮಲಾ ಮೋಹನ್ ಕುಮಾರ್, ವನಜಾಕ್ಷಿ ಸುರೇಶ್ ಮೊದಲಾದವರಿದ್ದರು.