ನವದೆಹಲಿ : ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ ರೈಲ್ವೆ ಅಭಿವೃದ್ದಿ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಹಾಗೂ ರೈಲ್ವೆ ಸಮಯದಲ್ಲಿ ಕೆಲವು ಬದಲಾವಣೆ ಮಾಡುವ ಕುರಿತಂತೆ ಶಿವಮೊಗ್ಗ ಲೋಕಸಭಾಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಜಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.
ಯಶವಂತಪುರ-ಶಿವಮೊಗ್ಗ-ಯಶವಂತಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸುವುದು, ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವುದು, ಶಿವಮೊಗ್ಗ-ಬೀರೂರು ಡಬ್ಲಿಂಗ್ ಕಾಮಗಾರಿ , ಕೋಟೆಗಂಗೂರ್ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ವಿಚಾರದ ಜತೆಗೆ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ವೂ ಸೇರಿದಂತೆ ಹಲವು ಯೋಜನೆಗಳ ಕುರಿತು ಸಚಿವರೊಂದಿಗೆ ಚರ್ಚಿಸಿದರಲ್ಲದೆ, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ, ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗಳಿಗೆ ಮಂಜೂರಾತಿ ದೊರಕಿಸಿಕೊಡುವುದಾಗಿಭರವಸೆ ನೀಡಿದ್ದಾರೆಂದು ಸಂಸದರು ತಿಳಿಸಿದ್ದಾರೆ.
ತಾಳಗುಪ್ಪ-ಸಿರ್ಸಿ-ತಡಸ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಸಮೀಕ್ಷೆಗೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದೆ. ನೈಋತ್ಯ ರೈಲ್ವೆ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿ ಅದರ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿದೆ. ಈ ಹೊಸ ರೈಲು ಮಾರ್ಗ ಯೋಜನೆಯು ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ನಡುವೆ ರೈಲ್ವೆ ಸಂಪರ್ಕವನ್ನು ಒದಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಕಾಮಗಾರಿಯನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಕೋರಲಾಗಿದೆ ಎಂದಿದ್ದಾರೆ.
ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ಕೋಚಿಂಗ್ ಡಿಪೋ ನಿರ್ಮಾಣದಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಹಲವು ಪಟ್ಟು ಹೆಚ್ಚಾಗಲಿದೆ. ಆದ್ದರಿಂದ ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಬೇಕು. ಹಾಗೆಯೇ ಕೋಟೆಗಂಗೂರು ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್: ಶಿವಮೊಗ್ಗ ಸಮೀಪದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿ ಪುಗತಿಯಲ್ಲಿದೆ. ಆದರೆ ಕಾಮಗಾರಿಯ ವೇಗ ತೃಪ್ತಿಕರವಾಗಿಲ್ಲ. ಈ ಮದ್ಯೆ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ ಸೌಲಭ್ಯಗಳೊಂದಿಗೆ ಈ ಕೋಚಿಂಗ್ ಡಿಪೋವನ್ನು ನಿರ್ಮಿಸಲು ಕೋರಲಾಗಿದೆ. ಶೀಘ್ರದಲ್ಲಿಯೇ ಇದನ್ನು ಕಾರ್ಯಗತಗೊಳಿಸಲು ಮನವಿ ಮಾಡಲಾಗಿದೆ ಎಂದಿದ್ದಾರೆ.
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗದ ಯೋಜನೆಯನ್ನು ಸುಲಭವಾಗಿ ಪೂರ್ಣಗೊಳಿಸಲು ಸಂಬಂಧ ಮೊದಲ ಹಂತದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಬೇಕು. ಹಾಗೆಯೇ ಈ ಯೋಜನೆಯ ಎರಡನೇ ಹಂತದ ಶಿಕಾರಿಪುರ- ರಾಣೆಬೆನ್ನೂರು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂಬರುವ ದ್ರ ಬಜೆಟ್‌ನಲ್ಲಿ ಎರಡನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಹಣವನ್ನು ಕಾಯ್ದಿರಿಸಬೇಕೆಂದು ಕೋರಲಾಗಿದೆ ಎಂದಿದ್ದಾರೆ.
ಒಂದು ದಶಕದ ಹಿಂದೆಯೇ ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಯೋಜನೆಯ ಸಮೀಕ್ಷೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ, ನಂತರ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೆ ಮಂಜೂರಾತಿ ನೀಡಬೇಕು.ಭದ್ರಾವತಿಯು ಮಲೆನಾಡು ಪ್ರದೇಶದ ಪ್ರಮುಖ ಕೈಗಾರಿಕಾ ಪಟ್ಟಣವಾಗಿದೆ. ಭದ್ರಾವತಿಯ ರೈಲು ನಿಲ್ದಾಣವು ತುಂಬಾ ಹಳೆಯದಾಗಿದೆ ಮತ್ತು ಇದನ್ನು ಉನ್ನತ ದರ್ಜೆಯನ್ನಾಗಿಸುವ ಅಗತ್ಯವಿದೆ. ಆದ್ದರಿಂದ ಈ ನಿಲ್ದಾಣವನ್ನು “ಅಮೃತ್” ಯೋಜನೆಯಡಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು, ಶಿವಮೊಗ್ಗ- ರೇಣಿಗುಂಟ (ತಿರುಪತಿ) ಮರುಚಾಲನೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದಿದ್ದಾರೆ.
ಇದೇ ರೀತಿ ಯಶವಂತಪುರ-ಶಿವಮೊಗ್ಗ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರಿಚಯ, ಹಾರ್ನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ, ಉಡುಪಿ ಜಿಲ್ಲೆ ಸೇನಾಪುರ ರೈಲು ನಿಲ್ದಾಣದಲ್ಲಿ ರೈಲುಗಳ ನಿಲುಗಡೆ: ಸೇನಾಪುರ ರೈಲು ನಿಲ್ದಾಣವು ಉಡುಪಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿದ್ದು,ಮಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ರೈಲು ಸಂಖ್ಯೆ:12619/20 ಮತ್ಸಗಂದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಹಾಗೂ ಮತ್ತು ಕಾರವಾರ ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ:16595/96 ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಸೇನಾಪುರದಲ್ಲಿ ನಿಲುಗಡೆ ಮಾಡುವಂತೆ ಕೋರಲಾಗಿದೆ.ಇದರ ಜತೆಗೆ ಇನ್ನು ಹಲವು ರೈಲ್ವೆ ಯೋಜನೆಗಳಿಗೆ ಸಚಿವರಲ್ಲಿ ಮನವಿ ಮಾಡಲಾಗಿದ್ದು, ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗಳಿಗೆ ಮಂಜೂರಾತಿ ಸಿಗುವ ಭರವಸೆ ಇದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.