ಶಿಕಾರಿಪುರ: ತಾಲೂಕಿನ ನೆಲವಾಗಿಲು ಗ್ರಾಮದ ರೈತ ಬಸವರಾಜ್ [65] ಸಾಲದ ಶೂಲೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಶಾಸಕ ಬಿ.ವೈ ವಿಜಯೇಂದ್ರ ಸೋಮವಾರ ಮೃತನ ಸ್ವಗೃಹಕ್ಕೆ ಧಾವಿಸಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಅಧಿಕಾರಿಗಳ ಜತೆ ಮೃತನ ಕುಟುಂಬಸ್ಥರನ್ನು ಬೇಟಿ ಮಾಡಿದ ಶಾಸಕ ವಿಜಯೇಂದ್ರ,ಪ್ರತಿಯೊಬ್ಬರಿಗೂ ಅನ್ನ ನೀಡುವ ರೈತ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿರುವುದು ಅತ್ಯಂತ ವಿಷಾಧನೀಯವಾಗಿದ್ದು ಕುಟುಂಬಸ್ಥರು ದೈರ್ಯದಿಂದ ಬದುಕನ್ನು ಎದುರಿಸುವಂತೆ ತಿಳಿಸಿ ಮೃತ ಬಸವರಾಜ್ ರವರ ಸಾಲದ ಬಗ್ಗೆ ವಿವರ ಪಡೆದುಕೊಂಡು ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಕೂಡಲೇ ಕಳುಹಿಸುವಂತೆ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿ ಅರುಣ್ ರಿಗೆ ಸೂಚಿಸಿದಾಗ ಈಗಾಗಲೇ ಎಲ್ಲ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು ಮರಣೋತ್ತರ ಪರೀಕ್ಷೆಯ ವರದಿ ಪಡೆದು ಕಳುಹಿಸಿಕೊಡುವುದಾಗಿ ತಿಳಿಸಿದರು.
ನಂತರದಲ್ಲಿ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಜತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು ಕೂಡಲೇ ಮೃತ ರೈತನಿಗೆ ಸಂಬಂದಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಸರ್ಕಾರದ ಮಟ್ಟದಲ್ಲಿ ಮೃತ ರೈತನ ಪರವಾಗಿ ಕುಟುಂಬಸ್ಥರಿಗೆ ದೊರೆಯಬಹುದಾದ ಪರಿಹಾರ ಜತೆಗೆ ಸೌಲಭ್ಯವನ್ನು ಶೀಘ್ರವಾಗಿ ದೊರಕಿಸಿಕೊಡಲು ಎಲ್ಲ ರೀತಿಯಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಮೃತ ರೈತನ ಪತ್ನಿಗೆ ವೈಯುಕ್ತಿಕವಾಗಿ ಧನ ಸಹಾಯ ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವಂತೆ ತಿಳಿಸಿದರು.ಈ ಸಂದರ್ಬದಲ್ಲಿ ಗ್ರಾ.ಪಂ ಅಧ್ಯಕ್ಷ ಬಸವರಾಜ[ಪುಟ್ಟು] ಮುಖಂಡ ಗುರುಮೂರ್ತಿ, ಸಿದ್ದಲಿಂಗಪ್ಪ, ಕೊಟ್ರೇಶಪ್ಪ,ವೀರಣ್ಣಗೌಡ,ಚಂದ್ರಶೇಖರ್,ಪ್ರವೀಣ ಬೆಣ್ಣೆ, ವಿನಯ ಸೇಬು ಮತ್ತಿತರರು ಹಾಜರಿದ್ದರು.