Sunday, October 13, 2024
Google search engine
Homeಅಂಕಣಗಳುನಮ್ಮೂರ ಸಾಧಕರು ಸಾಗರದ ಬೆಡಗಿ ಶೀತಲ್ ಶೆಟ್ಟಿ

 ಸಾಗರದ ಬೆಡಗಿ ಶೀತಲ್ ಶೆಟ್ಟಿ

ಇಂದು ಮನೆ ಮಾತಾಗಿರುವ ಹೆಸರು. ನೇರ ನುಡಿ, ದಿಟ್ಟ ನಿರ್ಧಾರ, ಸದಾ ಹಸನ್ಮುಖಿ, ಉತ್ಸಾಹಿ ಮತ್ತು ಜೀವನ್ಮುಖಿಯಾಗಿರುವ ಶೀತಲ್ ಶೆಟ್ಟಿ ನಮ್ಮ ಊರಿ ನವರು ಎನ್ನುವುದೇ ನಮಗೆ ಹಿರಿಮೆ. ಸಣ್ಣ ಪಟ್ಟಣಗಳಲ್ಲಿನ ಹುಡುಗಿಯರು ಎಂದ ಮಾತ್ರಕ್ಕೆ ಜೀವನ ಸೀಮಿತವಾಗುವುದಿಲ್ಲ, ಸಾಧನೆಯ ಹಾದಿಯಲ್ಲಿ ಪರಿ ಶ್ರಮವಿದ್ದರೆ ಅದು ನಿಮ್ಮನ್ನು ಉತ್ತುಂಗದಲ್ಲಿ ನಿಲ್ಲಿಸುತ್ತದೆ ಎನ್ನುವುದಕ್ಕೆ ನಿದರ್ಶನ ಶೀತಲ್ ಶೆಟ್ಟಿ.

Sheethal Shetty
Sheethal Shetty

ಸಾಗರದ ಕಿನ್ನರಿ:

ಶೀತಲ್ ಜನಿಸಿದ್ದು ಮಾತ್ರ ಉಡುಪಿ, ಆಡಿ ಬೆಳದದ್ದು ಸಾಗರದಲ್ಲಿ. ತಂದೆ ಶ್ರೀಧರ್ ಶೆಟ್ಟಿಯವರ ಊರು ಆಯನೂರು. ತನ್ನ ಪುಟ್ಟ ಹೆಜ್ಜ್ಜೆ ಇಡುತ್ತಾ, ತೊದಲು ನುಡಿ ಯಾಡಿ ನಲಿಯುತ್ತಾ, ಅಕ್ಷರ ಕಲಿಯುತ್ತಾ ಬೆಳೆ ದದ್ದೆಲ್ಲಾ ಸಾಗರದಲ್ಲಿ. ಸಾಗರದ ಪ್ರಗತಿ ಬಾಲಭವನ ಶಾಲೆಯಲ್ಲಿ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಶೀತಲ್ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಅಜ್ಜಿ ಮನೆಯಲ್ಲಿ ಅವರ ಕೈತುತ್ತು ತಿನ್ನುತ್ತಾ ಬೆಳೆದರು. ಪದವಿ ಶಿಕ್ಷಣವನ್ನು ಇವರು ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು. ಕಮಲಾ ನೆಹರು ಹಾಸ್ಟೆಲ್ ಜೀವನ, ನನ್ ಕಾಲೇಜು, ಫ್ರೆಂಡ್ಸು, ಯಾವುದನ್ನೂ ಮರೆಯೋಕ್ ಆಗಲ್ಲ, ನಮ್ಮೂರೇ ಚಂದ ಅಂತಾರೆ ಶೀತಲ್.

ಅನಿವಾರ್ಯತೆ ತೋರಿತು ಬೆಂಗಳೂರಿನ ಹಾದಿ:

ಶೀತಲ್ ಮೊದಲ ವರ್ಷದ ಪದವಿ ಶಿಕ್ಷಣ ನಡೆಸುತ್ತಿದ್ದ ಸಮಯ ಮಾಸದ ನೆನಪಾಗಿ ಉಳಿದಿದೆ ಏಕೆಂದರೆ ಮಗಳ ಯಶಸ್ಸನ್ನು ಕಂಡು ಹೆಮ್ಮೆಪಡಬೇಕಿದ್ದ ಅಪ್ಪ ಅಗಲಿದ ಸಮಯವದು. ಹೀಗಾಗಿ ಪದವಿ ಮುಗಿಸಿದ ಕೂಡಲೆ ಕೆಲಸದ ಅನಿವಾರ್ಯತೆಯೂ ಹೆಚ್ಚಿತು. ಉದ್ಯೋಗವನ್ನು ಅರಸಿ ಶೀತಲ್ ನಡೆದದ್ದು ಬೆಂಗಳೂರಿನತ್ತ. ದೊಡ್ಡಪ್ಪನ ಮನೆಯಲ್ಲಿ ಆಶ್ರಯ ಪಡೆದ ಶೀತಲ್ ತಮ್ಮ ಉದ್ಯೋಗ ಬೇಟೆಯನ್ನು ಆರಂಭಿಸಿದರು.

ಮರೆಯಲಾಗದ ಆ ದಿನ:
ಜೂನ್ ೯ನೇ ತಾರೀಖು ೨೦೦೭ ನಾನೆಂದೂ ಮರೆಯಲಾಗದ ದಿನ ಅಂತಾನೆ ಪ್ರಾರಂಭಿಸಿದರು ಶೀತಲ್. ಹೌದು, ಬೆಂಗಳೂರಿಗೆ ಬಂದಿಳಿದ ಒಂದೇ ವಾರದಲ್ಲಿ ಆ ಸುದಿನ ಬಂದಿತ್ತು. ಇವರ ಅನಿವಾರ್ಯತೆಯನ್ನು ಅರಿತಿದ್ದ ಶಿವಮೊಗ್ಗದ ಹಾಸ್ಟೆಲ್ ಗೆಳತಿ ಗೀತಾ ಹೊಸ ನ್ಯೂಸ್ ಚಾನಲ್ ಒಂದು ನ್ಯೂಸ್ ರೀಡರ್‌ಗಳಿಗಾಗಿ ಸಂದರ್ಶನ ನಡೆಸುತ್ತಿದೆ, ಕನ್ನಡ ವಾಹಿನಿ, ನಿನ್ನ ಕನ್ನಡ ಚೆನ್ನಾಗಿದೆ, ಹೋಗಿ ಪ್ರಯತ್ನಿಸು ಎಂದರು. ವೇದಿಕೆ ಅಂದ್ರೆ ಗಡ, ಗಡ, ಏನು ಮಾತಾಡಬೇಕೋ ಅದನ್ನೇ ಮರೆತುಹೋಗ್ತೀನಿ, ನಾನು ನ್ಯೂಸ್ ರೀಡರ್ ಹುದ್ದೆಗಾ, ಸಾಧ್ಯಾನಾ? ಅನ್ನೋ ಪ್ರಶ್ನೆ ಶೀತಲ್ ಅವರನ್ನ ಒಳಗೇ ಕಾಡಿತ್ತು. ಆದರೂ ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ದೊಡ್ಡಪ್ಪನ ಮಗನನ್ನು ಕರೆದುಕೊಂಡು ಹೋಗಿ ಸಂದರ್ಶನದ ಸರತಿಯಲ್ಲಿ ನಿಂತೇ ಬಿಟ್ಟರು ಶೀತಲ್. ಸಾಲಿನಲ್ಲಿ ನಿಂತಿದ್ದ ಬೆಂಗಳೂರಿನ ಬೋಲ್ಡ್ ಅಂಡ್ ಬ್ಯೂಟಿಫುಲ್ ಹುಡುಗಿಯರನ್ನ ಕಂಡ ಶೀತಲ್ ನಮ್ಮಂತಹ ಸಣ್ಣ ಊರಿನ ಹುಡುಗೀರು ಇವರುಗಳ ಮಧ್ಯೆ ಗೆಲ್ಲೋದಾ, ಆಗಲ್ಲ ಕಣೋ ಅಂದಿದ್ದು ಇದೆ. ಆದರೆ ಅವರ ಅಣ್ಣ ಇಲ್ಲಿವರೆಗೂ ಬಂದಿದ್ದೀಯ ಒಂದು ಪ್ರಯತ್ನ ಮಾಡು, ಹೆಜ್ಜೆ ಹಿಂದಿಡಬೇಡ ಎಂದು ಧೈರ್ಯ ತುಂಬಿದರು. ಆ ದಿನ ೯ ಜೂನ್ ೨೦೦೭ ಶೀತಲ್ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತು ಆಡಿಷನ್ ನೀಡಿದ ಸಮಯ. ಮೊದಲ ಪ್ರಯತ್ನವೇ ಯಶಸ್ಸು ಮತ್ತು ಟಿವಿ ೯ ಪ್ರವೇಶ. ಆಡಿಷನ್ ಮುಗಿದರೂ ಪರೀಕ್ಷೆ ಮುಗಿದಿರಲಿಲ್ಲ ಎನ್ನುವುದು ನಂತರ ತಿಳಿದ ವಿಷಯ. ಎರಡು ತಿಂಗಳ ತರಬೇತಿ ನಂತರ ಟಿವಿ ೯ ಪರದೆಯ ಮೇಲೆ ಆ ಕಿರುನಗು, ಕಣ್ಣು ಮಿಟುಕಿಸುತ್ತಾ ತಮ್ಮದೇ ಶೈಲಿಯಲ್ಲಿ ನೋಡ್ತಾ ಇರಿ ಟಿವಿ ೯ ಎಂಬ ಮಾತುಗಳಿಗೇ ಒಂದು ದೊಡ್ಡ ಫ್ಯಾನ್ ಫಾಲೋಯಿಂಗ್ ಹುಟ್ಟಿಕೊಂಡಿತು ಎಂದರೆ ತಪ್ಪಿಲ್ಲ.

ಏಕತಾನತೆ ಮುರಿಯಲು ಉಳಿದವರು ಕಂಡಂತೆ:

ಪರದೆಯ ಮೇಲಿನ ಇವರ ಮಾತಿನ ಶೈಲಿ ಮತ್ತು ಇವರ ಚೆಲುವನ್ನು ನೋಡಿ ಸಿನಿಮಾದ ಹಲವು ಅವಕಾಶಗಳನ್ನು ಇವರನ್ನರಸಿ ಬಂದಿದ್ದವು. ಆದರೆ ಅವುಗಳನ್ನೆಲ್ಲಾ ತಿರಸ್ಕರಿಸುತ್ತಲೇ ತಮ್ಮ ಮಾಧ್ಯಮದ ನೆಲೆಯಲ್ಲೇ ಉಳಿದಿದ್ದರು ಶೀತಲ್. ಈ ನಡುವೆ ಬಂದದ್ದೇ ಉಳಿದವರು ಕಂಡಂತೆ ಸಿನಿಮಾದ ಆಫರ್. ವೃತ್ತಿಯಲ್ಲಿ ಏಕಾತನತೆ ಎನಿಸುತ್ತಿದ್ದ ಸಮಯವದು ಹಾಗಾಗಿ ಒಂದು ಬ್ರೇಕ್ ಅವಶ್ಯಕತೆ ನನಗಿದೆ ಎನಿಸಿತ್ತು ಶೀತಲ್‌ಗೆ. ತುಂಬಾ ಒಳ್ಳೆ ಪಾತ್ರ ಮತ್ತು ಅದರಲ್ಲೂ ಪತ್ರಕರ್ತೆಯ ಪಾತ್ರವೇ ಹಾಗಾಗಿ ಕೆಲಸ ಮಾಡುತ್ತಿದ್ದ ವಾಹಿನಿಗಾಗಲಿ, ತಮ್ಮ ಇಮೇಜ್‌ಗಾಗಲಿ ಧಕ್ಕೆ ಬರುವ ಸಾಧ್ಯತೆ ಇರಲಿಲ್ಲ. ಆದ್ದರಿಂದ ಮಾಡಲೇಬೇಕೆಂಬ ನಿರ್ಧಾರದಿಂದ ೨೦ ದಿನಗಳ ಬ್ರೇಕ್‌ಗಾಗಿ ಬೇಡಿಕೆ ಇಟ್ಟರು ಶೀತಲ್ ಆದರೆ ವಾಹಿನಿಯ ಕೆಲವು ನಿಯಮಗಳ ಕಾರಣವಿತ್ತು ಬೇಡಿಕೆಯನ್ನು ನಿರಾಕರಿಸಲಾಗಿತ್ತು. ೩೦ರ ಆಸುಪಾಸಿಗೆ ಬಂದು ನಿಂತಿದ್ದೇನೆ, ಆದರೆ ಸಾಧಿಸಿರುವುದೇನು, ಇಲ್ಲ ನಾನಿದನ್ನು ಮಾಡಲೇಬೇಕು ಮತ್ತು ಈ ಏಕತಾನತೆ ಮುರಿಯಲೇ ಬೇಕು ಎಂದು ನಿರ್ಧರಿಸಿದ ಶೀತಲ್ ವಾಹಿನಿ ಬಿಟ್ಟು ನಡೆದದ್ದು ಕನ್ನಡ ಚಿತ್ರರಂಗದತ್ತ. ಉಳಿದವರು ಕಂಡಂತೆ, ____ ಹಾಗೂ ಕೆಂಡ ಸಂಪಿಗೆ ಚಿತ್ರಗಳಲ್ಲಿ ಅಭಿನಯಿಸಿದ ಶೀತಲ್ ತಮ್ಮಲ್ಲೂ ನಟನಾ ಕೌಶಲ್ಯವಿದೆ ಎನ್ನುವುದನ್ನು ನಿರೂಪಿಸಿದರು.

ನಿರೂಪಕಿಯನ್ನು ನಿರ್ಮಾಪಕಿಯಾಗಿಸಿದ ಮೀಡಿಯಾ ಮನೆ:
ಮಾಧ್ಯಮದಿಂದ ಹೊರಬಂದು ಉಳಿದವರು ಕಂಡಂತೆ ಸಿನಿಮಾದ ಚಿತ್ರೀಕರಣವನ್ನು ೨೦ ದಿನಗಳಲ್ಲಿ ಮುಗಿಸಿದ ನಂತರ ಸಿನಿಮಾ ತೆರೆಗೆ ಬರುವವರೆಗೂ ಇದ್ದ ಸಮಯವದು, ಇಷ್ಟು ದಿನ ಕಲಿತ ವಿದ್ಯೆ, ಕೆಲಸ ಎಲ್ಲಕ್ಕೂ ಒಂದು ಹೊಸರೂಪ ನೀಡಬೇಕು ಎಂದು ನಿರ್ಧರಿಸಿದರು ಶೀತಲ್. ಅದು ಪಡೆದ ರೂಪವೇ ಮೀಡಿಯಾ ಮನೆ ಸಂಸ್ಥೆ. ಶೀತಲ್‌ರ ಮೀಡಿಯಾ ಮನೆ ಸಂಸ್ಥೆ ತನ್ನದೇ ಗ್ರೀನ್ ಮ್ಯಾಟ್ ಸ್ಟುಡಿಯೋ, ಡಬ್ಬಿಂಗ್ ಸ್ಟುಡಿಯೋ ಹೊಂದಿರುವುದರ ಜೊತೆಗೆ ಸಾರ್ವಜನಿಕ ಸಂಪರ್ಕವನ್ನು ನಡೆಸುತ್ತಿದೆ ಮತ್ತು ಹಲವಾರು ಸಾಕ್ಷ್ಯಚಿತ್ರಗಳು, ಪ್ರಮೋಷನ್ ವಿಡಿಯೋಗಳ ನಿರ್ಮಾಣ ಹಾಗೂ ಇವೆಂಟ್‌ಗಳನ್ನು ನಡೆಸುತ್ತಾ ಬರುತ್ತಿದೆ. ತಮ್ಮ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಬೇಕೆಂಬ ಇವರ ಕನಸು ನನಸಾಗಲಿ ಎನ್ನುವುದೇ ನಮ್ಮ ಹಾರೈಕೆ ಮತ್ತು ಶ್ರಮವಿದ್ದಾಗ ಯಶಸ್ಸಿನ ಬಗ್ಗೆ ಸಂಶಯವೇ ಇಲ್ಲ.

ಬಿಗ್ ಬ್ರೇಕ್ ಕೊಟ್ಟ ಬಿಗ್ ಬಾಸ್:
ಮಾಧ್ಯಮ, ಸಿನಿಮಾ, ಮೀಡಿಯಾ ಮನೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಯಶಸ್ಸನ್ನು ಸಾಧಿಸಿ ತೋರಿಸಿದ್ದ ಶೀತಲ್‌ಗೆ ಒಲಿದು ಬಂದ ಅವಕಾಶ ಬಿಗ್ ಬಾಸ್. ಪ್ರತಿಷ್ಠಿತ ಕಾರ್ಯಕ್ರಮ ಎಂಬ ಕೀರ್ತಿ ಒಂದೆಡೆಯಾದರೆ ಹೋದವರು ತಮ್ಮ ಇಮೇಜ್ ಹಾಳು ಮಾಡಿಕೊಂಡು ಬರುವ ಎಲ್ಲಾ ಸಾಧ್ಯತೆ ಇರುವಂತಹ ಕಾರ್ಯಕ್ರಮವೂ ಹೌದು. ಶೀತಲ್‌ರ ಸ್ವಭಾವ ನೋಡಿದರೆ ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಮುಖದ ಮೇಲೆ ಹೇಳುವ ಸ್ವಭಾವ. ಸ್ನೇಹಜೀವಿಯಾದ ಶೀತಲ್‌ರ ಸ್ನೇಹಿತರ ಬಳಗದಲ್ಲಿ ಈ ಕುರಿತು ಚರ್ಚೆ ಆರಂಭವಾದಾಗ ಅದು ನಿನಗಲ್ಲ, ದಯವಿಟ್ಟು ಹೋಗೋ ಬಗ್ಗೆ ಯೋಚನೇನೂ ಮಾಡಬೇಡ ಅಂದ್ರು ಸ್ನೇಹಿತರು. ನಾವು ಏತಿ ಅಂದ್ರೆ ಪ್ರೇತಿ ಅನ್ನೋ ಗುಂಪು, ಅದರಲ್ಲೂ ನಿನ್ನ ಕೈಲಿ ಆಗಲ್ಲ ಅಂದ್ರೆ ಸಾಕು ಮಾಡಿಯೇ ತೋರಿಸೋರು, ಇದನ್ನ ಚಾಲೆಂಜಾಗಿ ತೊಗೊಂಡು ಬಿಗ್ ಬಾಸ್ ಮನೆಯತ್ತ ಹೊರಟೇ ಬಿಟ್ಟೆ. ೮೫ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶೀತಲ್ ತಾವು ಸ್ನೇಹಜೀವಿ ಎನ್ನುವುದನ್ನು ನಿರೂಪಿಸುವುದರ ಜೊತೆಗೆ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ನುಡಿಯುವ ವ್ಯಕ್ತಿತ್ವದವರು ಎಂದು ಎಲ್ಲರಿಗೂ ತಿಳಿದುಬಂತು. ಹತ್ತು ಮಂದಿ ಇರುವ ಜಾಗದಲ್ಲಿ ಎಲ್ಲರನ್ನೂ ಮೆಚ್ಚಿಸುವ ಕೆಲಸ ಮಾಡದೆ ತಾವು ತಾವಾಗೆ ಉಳಿದಿದ್ದು ವಿಶೇಷ ಮತ್ತು ಶ್ಲಾಘನೀಯ. ಆ ೮೫ ದಿನಗಳು ನನಗೆ ತುಂಬಾ ಒಳ್ಳೆ ಅನುಭವ, ಬಹಳಷ್ಟು ಕಲಿತೆ, ಒಂದಷ್ಟು ಜನ ಒಳ್ಳೆ ಸ್ನೇಹಿತರಾದರು, ಕೆಲ ವೊಮ್ಮೆ ಕೆಲವರನ್ನು ಜನ್ಮದಲ್ಲಿ ನೋಡು ವುದಿಲ್ಲ ಎನ್ನುವಷ್ಟು ಬೇಸರವಾದ ದಿನಗಳೂ ಇವೆ, ಆದರೆ ಎಲ್ಲವೂ ಒಂದು ಅನುಭವ ಎನ್ನುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡರು ಶೀತಲ್.

ಮುಂದೆ…
ಹೊರ ಬಂದ ಮೇಲೆ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ ಶೀತಲ್. ಒಂದು ಸಿನಿಮಾ ಚೇಸ್, ನರಸಿಂಹರಾಜುರವರ ಮೊಮ್ಮಗ ಅವಿನಾಶ್ ನಾಯಕ ಮತ್ತು ಈ ಸಿನಿಮಾದ ಪಾತ್ರ ಈವರೆಗೆ ಮಾಡಿರುವ ಪಾತ್ರಗಳಿಗಿಂತ ತುಂಬಾ ವಿಭಿನ್ನ. ಇದಲ್ಲದೆ ಮತ್ತೊಂದು ಮಹಿಳಾ ಪ್ರಧಾನ ಚಿತ್ರ ಮಾಡುತ್ತಿದ್ದಾರೆ ನನಗೆ ಒಳ್ಳೆ ಸ್ಕೋಪ್ ಇರೋ ಚಿತ್ರ. ಚಿತ್ರದ ಹೆಸರು, ಕಥೆ ಬಗ್ಗೆ… ಶ್…. ಸೀಕ್ರೇಟ್, ಹೇಳೋಹಾಗಿಲ್ಲ, ಸ್ವಲ್ಪ ದಿನ ಆದ್ಮೇಲೆ ರಿವೀಲ್ ಮಾಡ್ತೀನಿ, ಕಾಯ್ತಾ ಇರಿ ಎಂದ ಅವರ ಮಾತುಗಳಲ್ಲಿ ಇದ್ದ ಆಶಾವಾದ ಅವರ ಮುಂದಿನ ಯಶಸ್ಸುಗಳಿಗೆ ನಾಂದಿ ಎನ್ನುವಂತಿತ್ತು.
ಸದಾ ಹಸನ್ಮುಖಿಯಾದ ಈ ಸ್ಫೂರ್ತಿ ಚಿಲುಮೆ ಹೀಗೆ ತನ್ನ ಪ್ರತಿಭೆಯಿಂದ ಎಲ್ಲರನ್ನೂ ರಂಜಿಸಲಿ ಮತ್ತು ಅವರ ಎಲ್ಲಾ ಪ್ರಯತ್ನಗಳಿಗೆ ಯಶಸ್ಸು ಸಿಗಲಿ ಎನ್ನುವುದೇ ನಮ್ಮ ಮನದಾಳದ ಹಾರೈಕೆ. ಆಲ್ ದ ಬೆಸ್ಟ್ ಶೀತಲ್.

RELATED ARTICLES
- Advertisment -
Google search engine

Most Popular

Recent Comments