ನಿರರ್ಗಳ ಮಾತಿನ ನಗುಮೊಗದ ಚೆಲುವೆ ಶರ್ಮಿತಾ ಶೆಟ್ಟಿ

ಲೇಖನ : ಸೌಮ್ಯ ಗಿರೀಶ್

ನಿರರ್ಗಳ ಮಾತಿನ ನಗುಮೊಗದ ಚೆಲುವೆ ಶರ್ಮಿತಾ ಶೆಟ್ಟಿ

ಶರ್ಮಿತಾ ಶೆಟ್ಟಿ ಮಾಧ್ಯಮ ಲೋಕದಲ್ಲಿ ಇಂದು ಮನೆಮಾತಾಗಿರುವ ಹೆಸರು. ನ್ಯೂಸ್, ನಿರೂಪಣೆ, ಚರ್ಚೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಆ ಮುದ್ದು ಮೊಗದ ಚೆಲುವೆ ನಮ್ಮ ಶಿವಮೊಗ್ಗದ ತೀರ್ಥಹಳ್ಳಿಯವರು ಎನ್ನುವುದು ಹೆಮ್ಮೆಯ ವಿಷಯ. ತೂದೂರಿನಿಂದ ಮಾಧ್ಯಮ ಲೋಕದವರೆಗಿನ ಇವರ ಪಯಣದ ಒಂದು ಪರಿಚಯ ಇಲ್ಲಿದೆ.

ರಾಗ-ಅನುರಾಗಮಯ ಬಾಲ್ಯ
ಒಂದೆಡೆ ಅಪ್ಪ-ಅಮ್ಮನ ಅಕ್ಕರೆಯ ಅನುರಾಗ, ಮತ್ತೊಂದೆಡೆ ಕಣ್ಣರೆಪ್ಪೆಯಂತೆ ಕಾಪಾಡುವ ಅಣ್ಣ ಶಮನ್ ಶೆಟ್ಟಿಯ ಪ್ರೀತಿಯ ನೆರಳಲ್ಲಿ ನಲಿಯುತ್ತಾ ಬೆಳೆದರು ಶರ್ಮಿತಾ. ತಂದೆ ಕೃಷ್ಣ.ಬಿ. ಶೆಟ್ಟಿಯ ವರು ಕೃಷಿಕರು ಮತ್ತು ವ್ಯಾಪಾರಿಗಳು, ಅಮ್ಮ ಭಾರತಿ ಶೆಟ್ಟಿ ಸರ್ಕಾರಿ ಹೊಲಿಗೆ ತರಬೇತುದಾರ ರಾಗಿದ್ದರು. ಬಾಲ್ಯದಿಂದಲೇ ಶರ್ಮಿತಾ ಸುಶ್ರಾವ್ಯ ವಾಗಿ ಹಾಡುತ್ತಿದ್ದರು. ಇದನ್ನು ಮನಗಂಡ ಪೋಷಕರು ತಡಮಾಡದೆ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ ಹಿಂದೂಸ್ತಾನಿ ಸಂಗೀತದ ಕಲಿಕೆಗೆ ನಾಂದಿ ಹಾಡಿಯೇ ಬಿಟ್ಟರು. “ನನ್ನಲ್ಲಿ ಸಂಗೀತದ ಪ್ರತಿಭೆ ಇದೆ ಅಂತ ಮೊದಲು ಗುರುತಿಸಿ ಹಾಡಿಸಿದವರು ನನ್ನ ಸುಧಾ ಟೀಚರ್, ಅದು ನಾನು ೩ನೇ ತರಗತಿಯಲ್ಲಿರುವಾಗ” ಎನ್ನುವುದನ್ನು ಮಾತ್ರ ಮರೆಯಲಿಲ್ಲ ಶರ್ಮಿತಾ. ಶೃಂಗೇರಿಯಲ್ಲಿ ಹುಟ್ಟಿ ತೂದೂರಿನಲ್ಲಿ ಬೆಳೆದ ಶರ್ಮಿತಾ ತುಂಗಾ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮುಗಿಸಿದರು.

ಇಂದಿನ ನಿರೂಪಕಿಯ ಅಂದಿನ ನರ್ಸಿಂಗ್ ಕೋರ್ಸ್
ನರ್ಸಿಂಗ್ ಮಾಡಿದರೆ ಒಳ್ಳೆಯ ಕೆಲಸ ಸಿಗು ತ್ತದೆ, ಹೊರನಾಡಿಗೂ ಹೋಗುವ ಅವಕಾಶ ಸಿಗು ತ್ತದೆ ಎಂಬ ಅಲೆ ಎದ್ದಿದ್ದ ಕಾಲ. ಆ ಅಲೆಗೆ ಸಿಕ್ಕವ ರಲ್ಲಿ ಶರ್ಮಿತಾ ತಂದೆ ಕೂಡ ಒಬ್ಬರು. ಮಗ ಇಂಜಿ ನಿಯರಿಂಗ್ ಹಾದಿ ಹಿಡಿದಿದ್ದರು, ಮಗಳು ಕೂಡ ಒಂದು ವೃತ್ತಿಪರ ಶಿಕ್ಷಣ ಪಡೆದರೆ ಭವಿಷ್ಯ ಸುರಕ್ಷಿತ ಎಂದು ಯೋಚಿಸಿದ ಅವರು ಶರ್ಮಿತಾರನ್ನು ಬಿ.ಎಸ್ಸಿ. ನರ್ಸಿಂಗ್ ಶಿಕ್ಷಣಕ್ಕೆ ಸೇರಿಸಿದರು. ಕಾಲೇಜು ದಿನಗಳಲ್ಲಿ ಸುಗಮ ಸಂಗೀತದ ಗುರು ನಾಗರಾಜರಾವ್ ಅವರೊಂದಿಗೆ ಸುಗಮ ಸಂಗೀ ತದ ಪಾಠ ಹೇಳಿ ಕೊಡಲು ಹೋಗುತ್ತಿದ್ದರು ಶರ್ಮಿತಾ. ಅಷ್ಟೇ ಅಲ್ಲದೆ ಸಂಗೀತ ಹಾಗೂ ನಿರೂಪಣೆಯ ಕಲೆಯನ್ನು ಕಾಲೇಜು ಕಾರ್ಯ ಕ್ರಮಗಳಲ್ಲಿ ಪ್ರದರ್ಶಿಸುತ್ತಲೇ ಬಂದರು ಶರ್ಮಿತಾ. “ನನ್ನಲ್ಲಿ ಒಬ್ಬಳು ನಿರೂಪಕಿ ಇದ್ದಾಳೆ ಎಂದು ಗುರು ತಿಸಿದವರು ನನ್ನ ಹೈಸ್ಕೂಲ್‌ನ ಶಿಕ್ಷಕಿ ಜಾನಕಿ ಯವರು. ನನ್ನ ನಿರೂಪಣೆಯ ಮೊದಲ ಗುರು ಅವರು. ನರ್ಸಿಂಗ್ ಮಾಡ್ತಾ ಇದ್ರೂ ನನ್ನ ಮನಸ್ಸು ಮಾತ್ರ ಅದರ ಮೇಲೆ ಇರಲಿಲ್ಲ. ಆದರೂ ಅಲ್ಲಿಯೂ ರ‍್ಯಾಂಕ್ ಪಡೆದೆ.”

“ಅಮ್ಮ ನನ್ನ ಟೀವಿ ಒಳಗೆ ಹಾಕು, ನಾನು ಟೀವೀಲಿ ಬರಬೇಕು “
ಪುಟ್ಟ ಪೋರಿ ಶರ್ಮಿತಾ ಒಂದು ದಿನ ಅಮ್ಮನ ಬಳಿ ಕೇಳಿದ್ದಳು “ಅಮ್ಮ ನನ್ನ ಟೀವಿ ಒಳಗೆ ಹಾಕು, ನಾನು ಟೀವೀಲಿ ಬರಬೇಕು” ಎಂದು. ಬಾಲ್ಯದ ಆ ಕನಸು ನನಸಾದದ್ದು ಚಂದನ ವಾಹಿನಿಯ ‘ಪರಿಭ್ರಮಣ’ ಧಾರಾವಾಹಿಯ ಮೂಲಕ. ಕಿರು ತೆರೆಗೆ ಶರ್ಮಿತಾ ಪರಿಚಯವಾದದ್ದು ಧಾರಾ ವಾಹಿಯ ಮೂಲಕ. ಅದೇಕೋ ಅಷ್ಟು ತೃಪ್ತಿ ಕೊಡಲಿಲ್ಲ ಅವರಿಗೆ. ಅವರ ಮನಸ್ಸು ನಿರೂಪಣೆ, ಅದರಲ್ಲೂ ಸುದ್ಧಿ ಮಾಧ್ಯಮದತ್ತ ಸೆಳೆಯಲು ಆರಂಭಿಸಿತು.

ಮಾಧ್ಯಮದ ಕನಸು ನನಸಾಗಿಸಿದ ಈಟಿವಿ
ನರ್ಸಿಂಗ್ ಮಾಡಿದರೂ ಮನಸ್ಸು ಬಣ್ಣದ ಲೋಕದತ್ತ ಸೆಳೆಯಿತು, ಅದರಲ್ಲೂ ಮಾಧ್ಯಮದ ಕಡೆ ಆಸಕ್ತಿ ಹೆಚ್ಚಾಯಿತು. “ಸುದ್ದಿ ಮಾಧ್ಯಮ ಅಂದ್ರೆ ಒಂದು ಘನತೆ, ಗೌರವ ಹೆಚ್ಚು ಅನ್ನೋ ಭಾವನೆ ಇತ್ತು” ಅಂತಾನೆ ಅನುಭವಗಳ ಸರ ಮಾಲೆ ಬಿಚ್ಚಿಟ್ಟರು ಶರ್ಮಿತಾ. ಈಟಿವಿ, ಆಗಿನ್ನು ನ್ಯೂಸ್ ಚಾನೆಲ್ ಆಗಿರಲಿಲ್ಲ. ಆಗ ಸುದ್ದಿ ನಿರೂ ಪಕರಿಗಾಗಿ ಆಡಿಷನ್ ನಡೆಸಿತ್ತು. ಪ್ರಯತ್ನ ಮಾಡಿದ ಶರ್ಮಿತಾ ಮಾಧ್ಯಮ ಸೇರುವಲ್ಲಿ ಗೆಲುವು ಸಾಧಿಸಿದರು.

ಜೀವಕ್ಕೇ ಕುತ್ತಿದ್ದರು ಎದೆಯಲ್ಲಿ ಬಚ್ಚಿಟ್ಟುಕೊಂಡರು
ಮಾರ್ಚ್ ೧೯ ನ್ಯೂಸ್ ಚಾನಲ್‌ನ ಉದ್ಘಾ ಟನೆ, ಚಾನಲ್‌ಗೆ ಚಾಲನೆ ನೀಡುವ ಮೊದಲ ನ್ಯೂಸ್ ಓದುವ ಅವಕಾಶ ಶರ್ಮಿತಾರಿಗೆ ಸಿಕ್ಕಿತ್ತು. ಇದಕ್ಕಿಂತ ಸುವರ್ಣಾವಕಾಶ ಸಿಗಲು ಸಾಧ್ಯವಿರ ಲಿಲ್ಲ. ಇಲ್ಲಿ ಭರ್ಜರಿಯ ತಯಾರಿ ಸಾಗಿದೆ. ಅಣ್ಣ ಶಮನ್ ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿ ದ್ದಾರೆ. ಅಪ್ಪ-ಅಮ್ಮ ತೂದೂರಿನಲ್ಲಿ. ಒಂದೆಡೆ ಬಾಲ್ಯದಿಂದ ಕಂಡ ಕನಸು ನನಸಾಗುವ ಕ್ಷಣ. ಅತ್ತ ಮನೆಯಲ್ಲಿ ಅಪ್ಪ-ಅಮ್ಮನಿಗೂ ಸಂಭ್ರಮವೇ ಇದರ ನಡುವೆ ಒಂದು ಅಚಾತುರ್ಯ ನಡೆದು ಹೋಯಿತು. ಶರ್ಮಿತಾ ತಂದೆ ಮೇಲಿನಿಂದ ಆಯತಪ್ಪಿ ಬಿದ್ದು ತಲೆಗೆ ಭಾರಿ ಪೆಟ್ಟಾಗಿ, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಮಣಿಪಾಲ ಆಸ್ಪತ್ರೆಯ ಐಸಿಯುಗೆ ದೌಡಾಯಿಸಲಾಯಿತು. ಮಾ.೧೮ರ ಬೆಳಿಗ್ಗೆ ನಡೆದ ಘಟನೆ ಇದು, ಸಂಜೆ ಯಾದರೂ ಅಮ್ಮ ಶಮನ್ ಅಥವಾ ಶರ್ಮಿತಾಗೆ ಸುದ್ದಿಯ ಸುಳಿವೂ ಕೊಡದೆ ತಂದೆಯ ಪ್ರಾಣಾಪಾಯದ ವಿಷಯ ಮರೆಮಾಚಿದ್ದರು.
ಅದು ಹೇಗೋ ಪರಿಚಿತರೊಬ್ಬರು ಗಾಬರಿ ಯಲ್ಲಿ ಶರ್ಮಿತಾರಿಗೆ ಫೋನಾಯಿಸೇ ಬಿಟ್ಟರು. ವಿಷಯ ತಿಳಿದ ಶರ್ಮಿತಾಗೆ ದಿಗ್ಭ್ರಮೆ. ದಿಕ್ಕೇ ತೋಚದಾಯಿತು. ಅಮ್ಮನಿಗೆ ಕೂಡಲೇ ಕರೆ ಮಾಡಿದರೆ ಅಮ್ಮ “ಏನೂ ಗಾಬರಿ ಪಡುವ ವಿಷಯವಿಲ್ಲ. ನಾನು ನಿಭಾಯಿಸುತ್ತೇನೆ. ನೀನು ಸುದ್ದಿವಾಹಿನಿಯ ಮೊದಲ ನ್ಯೂಸ್ ಓದುತ್ತಿ ದ್ದೀಯ. ಇದು ಹೆಮ್ಮೆಯ ಸಮಯ ಅದನ್ನು ನೋಡು, ನಾನು ಇಲ್ಲಿ ನೋಡಿಕೊಳ್ಳುತ್ತೇನೆ. ಭಯ ಬೇಡ” ಎಂದು ಧೈರ್ಯ ಹೇಳಿದರು. ಮಗಳಿಗೆ ದೊರೆತಿರುವ ಸುವರ್ಣಾವಕಾಶ ಕೈತಪ್ಪಿ ಹೋಗಬಾರದೆಂಬುದು ಅವರ ಕಾಳಜಿ. ಕೊನೆಗೆ ಅಣ್ಣ ಶಮನ್ ಕೂಡಲೇ ಮಣಿಪಾಲಕ್ಕೆ ಹೊರ ಟರು, ಶಮಿತಾ ದುಃಖವನ್ನು ಬಿಗಿದಿಟ್ಟುಕೊಂಡೇ ದಿಟ್ಟತನದಿಂದ ತಮ್ಮ ಮೊದಲ ನ್ಯೂಸ್ ಓದಿ ದರು. ಕ್ಯಾಮರಾ ಆಫ್ ಆದ ಕೂಡಲೇ ದುಃಖ ದಲ್ಲಿ ಒಡೆಯಿತು. ಆ ಸುವರ್ಣಾವಕಾಶ ಕೈತಪ್ಪಿ ದ್ದರೆ, ಊಹಿಸಲೂ ಸಾಧ್ಯವಿಲ್ಲ. ಪೋಷಕರ ತ್ಯಾಗಕ್ಕೆ, ಪ್ರೀತಿಗೆ ಅವರೇ ಸಾಟಿ ಎನ್ನುವುದು ಅಕ್ಷರಶಃ ಸತ್ಯ.

ಈ ಆರು ವರ್ಷ
ಇನ್ನೂ ಕಣ್ಣ ಮುಂದಿರುವ ಈ ದೃಶ್ಯ ನಿನ್ನೆ ಮೊನ್ನೆಯಂತಿದ್ದರೂ ಈಗಾಗಲೇ ಆರು ವರ್ಷಗಳು ಕಳೆದಿವೆ. ಹೈದರಾಬಾದ್‌ನಲ್ಲಿ ಮಾಧುರಿ ಯವರ ಮಾರ್ಗದರ್ಶನದ ತರಬೇತಿಯಿಂದ ಪ್ರಾರಂಭವಾದ ನಿರೂಪಕಿಯ ಕಾಯಕ ಇಂದಿಗೆ ಆರು ವರ್ಷ ಪೂರೈಸಿ, ಇಂದು ರಾಜಕೀಯ, ಸಿನಿಮಾ, ಕ್ರೀಡೆ, ಸಾಮಾಜಿಕ ಹೀಗೆ ಯಾವ ಸುದ್ದಿಯೇ ಇರಲಿ ನಿರೂಪಣೆ ನಿರರ್ಗಳ, ಚರ್ಚೆಗಳಲ್ಲಿನ ಚುರುಕುತನ, ಅರಳು ಹುರಿದಂತೆ ಕನ್ನಡ ಮಾತನಾಡುವ ಶರ್ಮಿತಾ “ಇಂದು ನನ್ನ ಭಾಷೆ ಮತ್ತು ಉಚ್ಛಾರಣೆಯನ್ನು ಜನ ಶ್ಲಾಘಿಸು ತ್ತಾರೆ ಎಂದರೆ ಅದಕ್ಕೆ ಕಾರಣ ನನ್ನ ತೀರ್ಥ ಹಳ್ಳಿಯ ಕನ್ನಡ. ನನಗೆ ಭಾಷೆ, ಭಾಷಾ ಮಾಧುರ್ಯ ಕಲಿಸಿದ್ದು ನನ್ನ ಊರು” ಅಂತಾರೆ.

ತೆರೆಗಾಗಿ ಬಣ್ಣ ಹಚ್ಚಿಸಿದ ‘ಹೊಂಬಣ್ಣ’
ತೀರ್ಥಹಳ್ಳಿಯ ಹುಡುಗರೇ ಸೇರಿ ಮಾಡು ತ್ತಿರುವ ಮಹತ್ವಾಕಾಂಕ್ಷೆಯ, ಸಾಮಾಜಿಕ ಕಳ ಕಳಿಯ ಚಿತ್ರ ‘ಹೊಂಬಣ್ಣ’. ಇದರಲ್ಲಿ ಶರ್ಮಿತಾ ಒಬ್ಬ ಪತ್ರಕರ್ತೆಯ ಪಾತ್ರ ಮಾಡುತ್ತಿದ್ದಾರೆ. “ನಮ್ಮ ಊರಿನವರು ಚಿತ್ರ ಮಾಡು ತ್ತಿದ್ದಾರೆ. ಒಳ್ಳೆಯ ಪಾತ್ರ, ಅದರಲ್ಲೂ ಪತ್ರಕರ್ತೆಯ ಪಾತ್ರ. ನನ್ನೂರು, ನನ್ನೋರು ಎಂಬ ಅಭಿಮಾನ ದಿಂದ ಒಪ್ಪಿದೆ” ಎನ್ನುವ ಶರ್ಮಿತಾ ಚಿತ್ರದಲ್ಲಿ ನಟಿಸಲು ಮಾಧ್ಯಮದ ಮುಂದೆ ಬೇಡಿಕೆ ಇಟ್ಟಾಗ ಸಂಸ್ಥೆ ಕೂಡ ಇವರಿಗೆ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ಇನ್ನೆರಡು ಚಿತ್ರಕ್ಕೆ ಆಫರ್ ಬಂದಿ ದ್ದರೂ ತನಗೆ ತುತ್ತು ಕೊಟ್ಟ ಮಾಧ್ಯಮವನ್ನು ತೊರೆದು ಹೋಗುವ ಮನಸ್ಸಿಲ್ಲದೆ ನಿರಾಕರಿಸಿ ದ್ದಾರೆ ಶರ್ಮಿತಾ. ಆದರೆ ಎರಡನ್ನೂ ಒಟ್ಟಿಗೆ ತೂಗಿಸಬಲ್ಲ ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ ಎನ್ನುತ್ತಾರೆ.

ಮನೆಯಲ್ಲಿ ವರಾನ್ವೇಷಣೆ ಪ್ರಾರಂಭವಾಗಿದೆ. “ನನ್ನ ಆಸೆಗಳನ್ನು, ಕನಸನ್ನು ಬೆಂಬಲಿಸುವ ಸಂಗಾತಿ ಸಿಕ್ಕರೆ, ಮದುವೆ ಆಗಿಬಿಡೋದೆ” ಅಂತ ನಗು ಬೀರಿದ ಶರ್ಮಿತಾರ ಜೀವನದಲ್ಲಿ ಸದಾ ನಗು ತುಂಬಿರಲಿ. ಇವರ ಸಾಧನೆಯ ಹಾದಿ ಇನ್ನಷ್ಟು ಉತ್ತುಂಗಗಳನ್ನು ಕಾಣಲಿ ಎಂಬುದೇ ನಮ್ಮ ಆಶಯ.