Sunday, September 8, 2024
Google search engine
Homeಅಂಕಣಗಳುಮಲೆನಾಡಿನ ಕೋಗಿಲೆ ಡಾ|| ಶಮಿತಾ ಮಲ್ನಾಡ್

ಮಲೆನಾಡಿನ ಕೋಗಿಲೆ ಡಾ|| ಶಮಿತಾ ಮಲ್ನಾಡ್

ಲೇಖನ : ಸೌಮ್ಯ ಗಿರೀಶ್

ಡಾ|| ಶಮಿತಾ ಮಲ್ನಾಡ್ ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಿನ್ನೆಲೆ ಗಾಯಕಿ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತೆ ಕೂಡ ಆಗಿದ್ದಾರೆ. ತೀರ್ಥಹಳ್ಳಿಯ ಮೂಲದವರಾದ ಶಮಿತಾರವರು ಮಲೆನಾಡ ಮಗಳು ಮತ್ತು ಮಲೆನಾಡಿನ ಬಗೆಗಿನ ಅವರ ಪ್ರೀತಿಗೆ ಅವರ ಹೆಸರೇ ಸಾಕ್ಷಿ. ಸುಗಮ ಸಂಗೀತ ಗಾಯಕಿ, ಹಿನ್ನೆಲೆ ಗಾಯಕಿ, ನಿರೂಪಕಿ, ಕಂಠದಾನ ಕಲಾವಿದೆ, ತಮ್ಮ ಗಾನಸುಧೆಯ ನೂರಾರು ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ನೀಡಿರುವ, ಮಲೆನಾಡಿನ ಕೋಗಿಲೆ ಎಂಬ ಬಿರುದು ಪಡೆದಿರುವ ಜೂ.ಎಲ್.ಆರ್.ಈಶ್ವರಿ ಎಂದೇ ಪರಿಚಿತರಾಗಿರುವ ಡಾ|| ಶಾಮಿತಾ ಮಲ್ನಾಡ್ ನಡೆದು ಬಂದ ಹಾದಿ, ಸಾಧನೆಗಳು, ಮತ್ತು ಅವರು ಕನಸುಗಳ ಒಂದು ಕಿರುಪರಿಚಯ ಇಲ್ಲಿದೆ.

ತೀರ್ಥಹಳ್ಳಿಯಲ್ಲಿನ ಬಾಲ್ಯ
ರಜೆ ಬಂತೆಂದರೆ ಸಾಕು ಅಜ್ಜಿಯ ಮನೆಯಾದ ತೀರ್ಥಹಳ್ಳಿಯಲ್ಲಿ ಸಂಭ್ರಮ. ಕಾಡು ಮೇಡು, ತೋಟ, ಗದ್ದೆ, ದನ-ಕರು, ಹೀಗೆ ಪರಿಸರದ ಮಧ್ಯೆ ಕಳೆದ ಆ ಬಾಲ್ಯ ಮತ್ತೆ ಬರಬಾರದೆ ಅನಿಸುತ್ತೆ, ಆದರೆ ಇವತ್ತಿನ ವೃತ್ತಿ ಜೀವನದಲ್ಲಿ ಬಿಡುವು ಮಾಡಿಕೊಂಡು ಹೋಗುವುದೇ ಕಷ್ಟ, ಆದರೆ ಬಾಲ್ಯದ ನೆನಪು ಮಾತ್ರ ತೀರ್ಥಹಳ್ಳಿಯ ಪರಿಸರದಂತೆಯೇ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಎನ್ನುತ್ತಲೇ ತಮ್ಮ ಮತ್ತು ಮಲೆನಾಡ ನಟು ಬಿಚ್ಚಿಟ್ಟರು ಶಮಿತಾರವರು.
ಸಂಗೀತ ಮತ್ತು ಶಮಿತಾ
ಚಿಕ್ಕಂದಿನಿಂದಲೂ ಹಾಡುವುದು ಎಂದರೆ ಶಮಿತಾರವರಿಗೆ ಬಹಳ ಪ್ರೀತಿ. ಸಂಗೀತದ ಒಲವಿಗೆ ಮೊದಲು ನೀರೆರೆದವರು ಮತ್ತು ನೆರವಾದವರು ಶಮಿತಾರ ತಾಯಿ ಸುನಂದಾರವರು. ಅಮ್ಮ ಸಣ್ಣ ಪುಟ್ಟ ಪದ್ಯಗಳು, ಹಾಡುಗಳನ್ನು ಹೇಳಿಕೊಡುತ್ತಿದ್ದರು ಎನ್ನುವ ಶಮಿತಾರವರು ಸಂಗೀತದ ಒಲವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳುತ್ತಾ ಹೋದರು. ಕಾಲೇಜಿನ ದಿನಗಳವರೆಗೂ ವಾರ್ಷಿಕೋತ್ಸವಗಳು, ಅಂತರ ಕಾಲೇಜು ಸಂಗೀತ ಸ್ಪರ್ಧೆಗಳಿಗೆ ಮೀಸಲಾಗಿತ್ತು ಇವರ ಸಂಗೀತ. ಇವರನ್ನು ಇಂತಹ ಸ್ಪರ್ಧೆಗಳಿಗೆ ತಯಾರು ಮಾಡುತ್ತಿದ್ದವರು ಶ್ರೀ.ಚಿಕ್ಕಮರಿಗೌಡ್ರು. ೧೯೯೪ನೇ ಸಾಲಿನಲ್ಲಿ ಶಮಿತಾರವರು ಕಬ್ಬಾಳಮ್ಮ ದೇವಿಯ ಒಂದು ಭಕ್ತಿ ಗೀತೆಯ ಕ್ಯಾಸೆಟ್ ಕಣಿವೆ ಕಬ್ಬಾಳಿಗೆ ಶೃತಿ ಸೇರಿಸಿದರು. ಅಂದಿನಿಂದ ಮೀಟಲು ಪ್ರಾರಂಭವಾದ ಶಮಿತಾರ ಶೃತಿ ಪೆಟ್ಟಿಗೆಯ ಇಂಪು ಎಲ್ಲೆಡೆ ಕಲರವ ಮೂಡಿಸಲು ಪ್ರಾರಂಭಿಸಿತು.
ಹನ್ನೊಂದು ಭಾಷೆಗಳಿಯಲ್ಲಿ ಕೇಳಿಸಿದ ಕೋಗಿಲೆ ಗಾನ
೧೯೯೬-೯೭ ಸುಗಮ ಸಂಗೀತ ಅತ್ಯುನ್ನತ ಮಟ್ಟದಲ್ಲಿ ಜನ ಮನ್ನಣೆ ಪಡೆದಂತಹ ಸಮಯ. ಅದಾಗಲೇ ಹಲವು ಹಾಡುಗಳನ್ನು ಹಾಡಿ ಪರಿಚಿತರಾಗಿದ್ದ ಶಮಿತಾರವರಿಗೆ ಒಂದರ ಹಿಂದೊಂದರಂತೆ ಸುಗಮ ಸಂಗೀತ ಧ್ವನಿಸುರುಳಿಗಳಲ್ಲಿ ಹಾಡುವ ಅಧ್ಬುತ ಅವಕಾಶ ದೊರೆಯಿತು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಮರಾಠಿ, ತುಳು, ಕೊಡವ, ಗುಜರಾತಿ ಮತ್ತು ಲಂಬಾಣಿ ಹೀಗೆ ೧೧ ಭಾಷೆಗಳಲ್ಲಿ ಹಾಡುತ್ತಾ ಶಮಿತಾರವರು ಸಾಧಿಸಿದ್ದು ಬರೋಬ್ಬರಿ ೬೦೦೦ ಹಾಡುಗಳು.
ವೃತ್ತಿ ಮತ್ತು ಪ್ರವೃತ್ತಿ
ಕಾಲೇಜು ದಿನಗಳಲ್ಲಿ ಓದಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ ಶಮಿತಾರ ಗುರಿ ವೈದ್ಯೆ ಆಗಬೇಕು ಎನ್ನುವುದಾಗಿತ್ತು. ತಂದೆ ಪ್ರೊ.ಯು.ವಿ.ರಾಮಚಂದ್ರರವರ ಆಸೆಯೂ ಮಗಳು ವಿದ್ಯಾವಂತೆಯಾಗಿ ಬೆಳೆಯಬೇಕು ಎನ್ನುವುದೇ ಆಗಿತ್ತು. ಶಮಿತಾ ತಮ್ಮ ದಂತ ವೈದ್ಯಕೀಯ ಪದವಿ ಪಡೆಯುವ ಮೂಲಕ ಡಾ|| ಶಮಿತಾ ಮಲ್ನಾಡ್ ಆದರು. ವೃತ್ತಿ ಬದುಕಲ್ಲಿ ವೈದ್ಯೆಯಾದರೆ ಪ್ರವೃತ್ತಿ ಸದಾ ಸಂಗೀತವೇ ಆಗಿತ್ತು. ಸುಗಮ ಸಂಗೀತ ಕ್ಷೇತ್ರ ಇವರಲ್ಲಿ ಹುಟ್ಟಿಸಿದ ಪ್ರವೃತ್ತಿ ಪ್ರೇಮ ಇವರನ್ನು ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಳ್ಳುವಂತೆ ಮಾಡಿತ್ತು. ಪೂರ್ಣ ಪ್ರಮಾಣದ ವೈದ್ಯೆಯಾಗಿ ನಿರತಗೊಂಡರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ ಎಂದು ತಿಳಿದ ಶಮಿತಾ ತಮ್ಮ ಪೂರ್ಣ ಸಮಯವನ್ನು ಸಂಗೀತಕ್ಕೆ ಮೀಸಲಿಡುವ ನಿರ್ಧಾರ ಮಾಡಿದರು. ವೈದ್ಯೆಯಾಗಿ ದುಡಿದು ಹಣ ಸಂಪಾದಿಸಬಹುದು ಆದರೆ ಆತ್ಮ ತೃಪ್ತಿ ಕೊಡುವ ಕೆಲಸ ಮಾಡಬೇಕು ಎನ್ನುವುದು ನನ್ನ ಅನಿಸಿಕೆ. ಸಾರ್ಥಕ ಮನೋಭಾವ ಮತ್ತು ಆತ್ಮ ತೃಪ್ತಿ ಎನ್ನುವುದು ನನಗೆ ಸಿಗುವುದು ಸಂಗೀತದಿಂದ ಹಾಗಾಗೇ ಅದನ್ನೇ ವೃತ್ತಿಯಾಗಿಸಿಕೊಂಡೆ ಎನ್ನುತ್ತಾರೆ ಶಮಿತಾ.
ಸುಗಮ ಸಂಗೀತ ಗಾಯನದಿಂದ ಸಿನಿಮಾ ಹಿನ್ನೆಲೆ ಗಾಯನದವರೆಗೆ
ಶಮಿತಾರ ಗಾಯನ ಸಿರಿಯನ್ನು ಗುರುತಿಸಿ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಹಿನ್ನೆಲೆಗಾಯನದ ಅವಕಾಶ ನೀಡಿದ್ದು ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್‌ರವರು. ನಿನಗಾಗಿ ಚಿತ್ರದ ಮೂಲಕ ಪರಿಚಿತರಾದ ಶಮಿತಾ ಮಲ್ನಾಡ್‌ರವರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ, ಕರಿಯ, ಕುಟುಂಬ, ರಾಮ ಶಾಮ ಭಾಮ, ಬಿರುಗಾಳಿ, ಕೆಂಪೆಗೌಡ, ಆಪ್ತರಕ್ಷಕ, ಹೀಗೆ ಹಲವಾರು ಚಿತ್ರಗಳಿಗೆ ಹಿನ್ನೆಲೆ ಗಾಯನ ಮಾಡುತ್ತಾ ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು ಶಮಿತಾರವರು. ಹಂಸಲೇಖ, ಅರ್ಜುನ್ ಜನ್ಯ, ಸಾಧು ಕೋಕಿಲ, ಮನೋ ಮೂರ್ತಿ, ಹರಿಕೃಷ್ಣ, ಸಂದೀಪ್ ಚೌಟ, ಹೀಗೆ ಹಲವಾರು ಸಂಗೀತ ನಿರ್ದೇಶಕರ ಗರಡಿಯಲ್ಲಿ ತಮ್ಮ ಗಾಯನ ಸುರಭಿಯನ್ನು ಹರಿಸಿದ ಶಮಿತಾರವರು ಎಷ್ಟು ವಿಭಿನ್ನ ರೀತಿಯ ಹಾಡುಗಳ ರಸವನ್ನು ಕೇಳುಗರಿಗೆ ನೀಡಿದ್ದಾರೆಂದರೆ ಮಲೆನಾಡಿನ ಕೋಗಿಲೆ ಎಂದು ಬಿರುದು ಪಡೆದ ಇವರು ಜೂ.ಎಲ್.ಆರ್. ಈಶ್ವರಿ ಎಂದೂ ಸಹ ಬಿರುದು ಪಡೆದುಕೊಂಡರು. ಯಾವುದೇ ರೀತಿಯ ಗಾಯನವಿರಲ್ಲಿ ಅದಕ್ಕೆ ಹೊಂದುವಂಥ ಸುಶ್ರಾವ್ಯ ಕಂಠಸಿರಿ ಶಮಿತಾರದ್ದು. ನಾನು ಇಷ್ಟು ವಿಭಿನ್ನ ರೀತಿಯ ಹಾಡುಗಳನ್ನು ಹಾಡಲು ನನಗೆ ನನ್ನ ಸುಗಮ ಸಂಗೀತದ ಅನುಭವವೇ ಕಾರಣ. ೬೦೦೦ ಸಾವಿರ ಹಾಡುಗಳನ್ನು ಹಾಡುವ ವೇಳೆಗೆ ಹಲವಾರು ಮಜಲುಗಳನ್ನು ಕಂಡಿದ್ದೆ, ಹಾಗಾಗಿ ಆ ಅನುಭವಗಳು ಮತ್ತು ಘಟಾನುಘಟಿ ಸಂಗೀತ ಸಂಯೋಜಕರು, ಒಬ್ಬೊಬ್ಬರದ್ದು ಒಂದೊಂದು ವಿಶೇಷತೆ, ಹಾಗಾಗಿ ನಾನು ಇಷ್ಟು ವಿಭಿನ್ನ ರೀತಿಯ ಹಾಡುಗಳನ್ನು ಕೊಡಲು ಸಾಧ್ಯವಾಯಿತು ಎನ್ನುತ್ತಾರೆ ಶಮಿತಾರವರು. ಈಗಾಗಲೇ ೫೫೦ಕ್ಕೂ ಹೆಚ್ಚು ಸಿನಿಮಾ ಹಾಡುಗಳನ್ನು ಹಾಡಿರುವ ಇವರು ಈಗ ಸಂಗೀತ ನಿರ್ದೇಶನದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರೆ.
ಪುರಸ್ಕಾರಗಳು, ಸಂಗೀತ ನಿರ್ದೇಶನದ ಒಲವು, ಗೆಲುವು ಮತ್ತು ಮುಂದಿನ ಕನಸು
ಬಿರುಗಾಳಿ ಚಿತ್ರದಲ್ಲಿ ಇವರು ಹಾಡಿದ್ದ ಮಧುರ ಪಿಸುಮಾತಿಗೆ ಹಾಡಿನ ಇಂಪು ಇಂದಿಗೂ ಕೇಳುವವರನ್ನು ಮೈಮರೆಯುವಂತೆ ಮಾಡುತ್ತದೆ. ಹಾಗಾಗಿಯೇ ಈ ಹಾಡಿಗೆ ೨೦೦೯ನೇ ಸಾಲಿನ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ, ಸುವರ್ಣ ಫಿಲಂ ಅವಾರ್ಡ್ ಮತ್ತು ಸೌತ್ ಸ್ಕೋಪ್ ಫಲಂ ಅವಾರ್ಡ್ ಇವರ ಮುಡಿಗೇರಿತು. ಇವರ ಪ್ರತಿಭೆಯನ್ನು ಗುರುತಿಸಿದ್ದ ಖ್ಯಾತ ಸಾಹಿತಿ ಮತ್ತು ನಿರ್ದೇಶಕರಾದ ಶ್ರೀ.ಬರಗೂರು ರಾಮಚಂದ್ರಪ್ಪನವರು ಶಮಿತಾರವರಿಗೆ ತಮ್ಮ ನಿರ್ದೇಶನದ ಬೆಕ್ಕು ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನೀಡಿದರು. ತಮ್ಮ ಸಂಗೀತ ನಿರ್ದೇಶನಲ್ಲಿ ತಾವೇ ಹಾಡಿದ ಬೆಕ್ಕು ಚಿತ್ರದ ತಳಮಳದ ಮಳೆಯಲ್ಲಿ ಹಾಡಿಗಾಗಿ ೨೦೧೫ರ ಸಾಲಿನ ರಾಜ್ಯ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಗಳಿಸಿದರು. ಚೊಚ್ಚಲ ಚಿತ್ರ ತಂದುಕೊಟ್ಟ ಯಶಸ್ಸು ಒಬ್ಬ ಸಂಗೀತ ನಿರ್ದೇಶಕಿಯಾಗಬೇಕೆಂಬ ಕನಸಿಗೆ ಗರಿ ಹಚ್ಚಿದೆ. ಕಮರ್ಷಿಯಲ್ ಸಿನಿಮಾಗಳಿಗೆ ಒಬ್ಬ ಸ್ವತಂತ್ರ ಸಂಗೀತ ನಿರ್ದೇಶಕಿಯಾಗಬೇಕೆಂಬುದು ಇವರ ಕನಸು. ಇಂದು ಒಂದು ಕಮರ್ಷಿಯಲ್ ಸಿನಿಮಾ ಎಂದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬ ಮಹಿಳಾ ಸಂಗೀತ ನಿರ್ದೇಶಕಿ ನಿರ್ವಹಿಸಲಾರಳು ಎಂಬ ತಪ್ಪು ಕಲ್ಪನೆ ಇದೆ, ಆದರೆ ಅದು ಸುಳ್ಳು ಎಂದು ನಿರೂಪಿಸುವ ಆಸೆ ನನ್ನದು. ಎನ್ನುತ್ತಲೇ ತಮ್ಮ ಮನದ ಇಂಗಿತ ವ್ಯಕ್ತ ಪಡಿಸಿದರು ಶಮಿತಾ.
ಹೊಸ ಪ್ರತಿಭೆಗಳಿಗೆ ಕಿವಿಮಾತು
ನಾನು ೨೦೦೨ರಲ್ಲಿ ಸಿನಿಮಾ ಸಂಗೀತ ಹಾಡಿ ಜನ ನನ್ನನ್ನು ಗುರುತಿಸುವಂತಾಯಿತು. ಆದರೆ ೧೯೯೪ರಿಂದಲೂ ಹಾಡುತ್ತಾ ಬಂದಿದ್ದೆ. ನಾನೊಬ್ಬಳೇ ಅಲ್ಲ ಆಗಿನ ಎಲ್ಲಾ ಗಾಯಕರು ತಮ್ಮನ್ನು ತಾವು ಜನರು ಗುರುತಿಸುವ ಮಟ್ಟಕ್ಕೆ ಬೆಳೆಯಲು ಸುಮಾರು ೧೦-೧೫ವರ್ಷಗಳು ಕಠಿಣ ತಪ್ಪಸ್ಸಿನಂತೆ ಶ್ರಮವಹಿಸಿ ಒಂದು ಹಂತ ತಲುಪಿದವರೇ. ಆಗ ಈಗಿನಷ್ಟು ಮಾಧ್ಯಮ, ಪ್ರಚಾರ ಒಂದೂ ಇರಲಿಲ್ಲ. ಆದರೆ ಈಗ ಮಾಧ್ಯಮಗಳಿಂದಾಗಿ ಒಂದೆರಡು ಕಂತು ಪ್ರಸಾರವಾಗುವುದರೊಳಗೆ ಚಿರಪರಿಚಿತರಾಗಿರುತ್ತಾರೆ. ಆದರೆ ಈ ಧೀಡೀರನೆ ಬಂದ ಯಶಸ್ಸನ್ನು ಕಿರೀಟದಂತೆ ಹೊತ್ತು ಮೆರೆಯದೆ, ಇನ್ನಷ್ಟು ಶ್ರಮ ಹಾಕಿ ನಿರಂತರ ತಾಲೀಮು ಮಾಡಬೇಕು. ಮೊನ್ನೆಯಷ್ಟೇ ನಮ್ಮನ್ನಗಲಿದ ಶ್ರೀ. ಬಾಲಮುರಳಿ ಕೃಷ್ಣರವರು ಕೂಡ ಕೊನೆಯ ದಿನಗಳವರೆಗೂ ಸಂಗೀತ ಕಲಿಯುತ್ತಿದ್ದರು. ಸಂಗೀತ ಮೊಗೆದಷ್ಟು ಒಲಿಯುವ ಸಾಗರ, ನಾವು ಮೊಗೆದಿರುವುದು ಬೊಗಸೆಯಷ್ಟೂ ಇಲ್ಲ. ಕಲಿಕೆ ಮತ್ತು ಶ್ರದ್ಧೆ ನಿರಂತರ ಜೊತೆಯಾಗಿರಬೇಕು. ಸಂಗೀತ ನಿರ್ದೇಶನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ ನಾನು ವೆಸ್ಟರ್ನ್ ಕಲಿಯುವು ಅಗತ್ಯ, ಎಲ್ಲ ಸಂಗೀತ ಪ್ರಾಕಾರದ ಪರಿಚಯ ಇರಬೇಕು ಎನ್ನುವುದಕ್ಕಾಗಿ ವೆಸ್ಟರ್ನ್ ಪಿಯಾನೋ ತರಗತಿಗಳಿಗೆ ಹೋಗುತ್ತಿದ್ದೇನೆ ಎನ್ನುವ ಮಾತುಗಳಲ್ಲಿ ಅವರು ಬರಿ ನುಡಿಯುವವರಲ್ಲ ಮಾಡಿ ತೋರಿಸುವವರು ಎಂದು ತಿಳಿಯುತ್ತದೆ.
ಸಮಾಜಮುಖಿ ಸ್ವರ ಸನ್ನಿಧಿ
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಸಂಗೀತದ ಪ್ರಾಮುಖ್ಯತೆ, ಮ್ಯೂಸಿಕ್ ಥೆರಪಿ, ಸಂಗೀತದ ಲಾಭಗಳನ್ನು ಪರಿಚಯಿಸುತ್ತಾ, ಮಕ್ಕಳಿಗೆ ಮನೋರಂಜನೆ ಮತ್ತು ಸಂಗೀತದ ಮೂಲಕ ಕೆಲವು ನೀತಿ ಮತ್ತು ಪ್ರಾಪಂಚಿಕ ಜ್ಞಾನ ಹಂಚುವ ಸಮಾಜಮುಖಿ ಕೆಲಸವನ್ನು ತಮ್ಮ ಕನಸಿನ ಬ್ಯಾನರ್ ಸ್ವರ ಸನ್ನಿಧಿಯ ಮೂಲಕ ಮಾಡುತ್ತಿದ್ದಾರೆ ಶಮಿತಾರವರು. ಇಷ್ಟೇ ಅಲ್ಲದೆ ಸಾಹಿತ್ಯ ಛಾವಡಿ, ಸಂಗೀತ ಮತ್ತು ಕವಿತಾ ಗಾಯನದಂತಹ ಕಾರ್ಯಕ್ರಮಗಳ ಆಯೋಜನೆ, ಹೀಗೆ ಕನ್ನಡ ಸಾಹಿತ್ಯ ಮತ್ತು ಸಂಗೀತದ ಶ್ರೇಯೋಭಿವೃದ್ಧಿಗಾಗಿಯೂ ಶ್ರಮಿಸುತ್ತಿದೆ ಶಮಿತಾರ ಸ್ವರ ಸನ್ನಿಧಿ.
ಮಕ್ಕಳ ಮುದ್ದಿನ ಅಮ್ಮ ಮತ್ತು ಪ್ರೋತ್ಸಾಹಿ ಕುಟುಂಬ
ಸಾಫ್ಟ್‌ವೇರ್ ಇಂಜಿನಿಯರ್ ಆದ ಅರುಣ್ ಕುಮಾರ್‌ರವರನ್ನು ವರಿಸಿದ ಶಮಿತಾರಿಗೆ ಅದ್ವಿತ್ ಹೆಗ್ಗಡೆ ಮತ್ತು ಶಾದ್ಜಾ ಹೆಗ್ಗಡೆ ಎಂಬ ಮುದ್ದು ಮಕ್ಕಳಿದ್ದಾರೆ. ಬಿಡುವಿನ ವೇಳೆಯಲ್ಲಿ ಅವರೊಡನೆ ಆಟ, ಅವರನ್ನು ಸಂಗೀತ ತರಗತಿಗಳಿಗೆ, ಆಕ್ರೋಬಾಟಿಕ್ಸ್ ತರಗತಿಗಳಿಗೆ ಕರೆದೊಯ್ಯುವುದು, ಮಕ್ಕಳನ್ನು ಶಾಲೆಗೆ ತಯಾರಿ ಮಾಡುವುದು ಅವರೊಡನೆ ತುಂಟ ಮಕ್ಕಳಂತೆ ಇರುವುದೆಂದರೆ ಶಮಿತಾರಿಗೆ ಪಂಚಪ್ರಾಣ. ನನ್ನ ಅತ್ತೆ ಮನೆಯಲ್ಲೂ ಅಷ್ಟೆ ನನಗೆ ತುಂಬಾ ಪ್ರೋತ್ಸಾಹ ಇದೆ. ಕುಟುಂಬದ ಪ್ರೋತ್ಸಾಹ ಇಲ್ಲದೆ ಸಾಧನೆ ಮಾಡುವುದು ಸುಲಭವಲ್ಲ. ಎಂದಿಗೂ ಯಾದಕ್ಕೂ ಬೇಡ ಎಂದರವರಲ್ಲ. ನನ್ನ ಮನೆಯವರು ಮತ್ತು ನನ್ನ ಸಹೋದರರು ನಾನು ಎಲ್ಲೇ ಹೋಗಬೇಕಾದರೂ ನನ್ನ ಜೊತೆ ನಿಂತು ಬೆಂಬಲಿಸುತ್ತಾರೆ. ನನ್ನ ಸಾಧನೆಯ ಹಿಂದೆ ನನ್ನ ತಂದೆ-ತಾಯಿ ಸೇರಿದಂತೆ ನನ್ನ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿರುವುದೇ ಕಾರಣ ಎನ್ನುವ ಅವರ ಮಾತುಗಳಲ್ಲೇ ವಂದನಾಭಾವ ತುಂಬಿತ್ತು.
ಡಾ|| ಶಮಿತಾ ಮಲ್ನಾಡ್‌ರವರು ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಮಹತ್ತರ ಸಾಧನೆಗಳನ್ನು ಮಾಡಲಿ ಮತ್ತು ಈ ನಾದಶ್ರೀ ತನ್ನ ಕಾವ್ಯ ಗಂಗಾವನ್ನು ಹೀಗೆ ಹರಿಸುತ್ತಿರಲಿ ಎನ್ನುವುದೇ ನಮ್ಮ ತುಂಬು ಹೃದಯದ ಹಾರೈಕೆ.

RELATED ARTICLES
- Advertisment -
Google search engine

Most Popular

Recent Comments