ರವಿಶಂಕರ್‌ಗೆ ಶ್ರುತಿ ಜೋಡಿ

ಖಳನಟ ರವಿಶಂಕರ್ ಇಲ್ಲಿವರೆಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಬ್ಬರಿಸಿದ್ದಾರೆ. ಬಹು ತೇಕ ನಿರ್ದೇಶಕರು ಅವರನ್ನು ಖಡಕ್ ವಿಲನ್ ಆಗಿ ತೋರಿಸಿದರೆ ಹೊರತು ಅವರಿಗೊಂದು ಹೀರೋಯಿನ್ ಕೊಡುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ನಿರ್ದೇಶಕ ಸಂತು ಮಾತ್ರ ರವಿಶಂಕರ್‌ಗೆ ಹೀರೋಯಿನ್ ಕೊಟ್ಟಿದ್ದಾರೆ. ಅದು ತಮ್ಮ ಹೊಸ ಸಿನಿಮಾದಲ್ಲಿ. ಹೌದು, ಸಂತು ಕಾಲೇಜ್ ಕುಮಾರ್ ಎಂಬ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದಾರೆ. ವಿಕ್ಕಿ ಹಾಗೂ ಸಂಯುಕ್ತಾ ಹೆಗಡೆ ಈ ಸಿನಿಮಾದ ನಾಯಕ-ನಾಯಕಿ. ಅವರ ಜೊತೆಗೆ ಇನ್ನೊಂದು ಜೋಡಿ ಕೂಡಾ ಇದೆ. ಅದು ರವಿಶಂಕರ್ ಹಾಗೂ ಶ್ರುತಿ.ಹೌದು, ಕಾಲೇಜ್ ಕುಮಾರ್ ಚಿತ್ರದಲ್ಲಿ ರವಿಶಂಕರ್‌ಗೆ ಜೋಡಿಯಾಗಿ ಶ್ರುತಿ ನಟಿಸುತ್ತಿದ್ದಾರೆ. ಈ ಮೂಲಕ ಸಂತು, ರವಿಶಂಕರ್‌ಗೆ ಹೀರೋಯಿನ್ ಕೊಟ್ಟಂತಾಗಿದೆ. ಚಿತ್ರದಲ್ಲಿ ರವಿಶಂಕರ್-ಶ್ರುತಿ, ನಾಯಕ ವಿಕ್ಕಿಯ ತಂದೆ-ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತುಂಬಾ ಪ್ರಮುಖವಾದ ಪಾತ್ರವಂತೆ. ಈ ಹಿಂದೆ ನೋಡಿರದಂತಹ ಪಾತ್ರದಲ್ಲಿ ರವಿಶಂಕರ್ ಅವರನ್ನು ತೋರಿಸಲು ಸಂತು ಉತ್ಸುಕರಾಗಿದ್ದಾರೆ.
ರವಿಶಂಕರ್ ಖಡಕ್ ವಿಲನ್ ಹೇಗೋ ಅದೇ ರೀತಿ ಕಾಮಿಡಿ ಟಚ್ ಇರುವ ಪಾತ್ರಗಳನ್ನು ಕೂಡಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಈಗ ಕಾಲೇಜ್ ಕುಮಾರ್ನಲ್ಲೂ ಸಂತು ವಿಭಿನ್ನ ಪಾತ್ರ ಕೊಟ್ಟಿದ್ದಾರಂತೆ.