ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರ ಗೌಡ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವವರ ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ನಟ ದರ್ಶನ್ ಅವರನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಜೂನ್ 11ರಂದು ಬೆಳಗ್ಗೆ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ನಟ ದರ್ಶನ್ ಅವರನ್ನ ಬಂಧಿಸಲಾಗಿದೆ. ದರ್ಶನ್ ಮಾತ್ರವಲ್ಲದೆ, ಇನ್ನೂ 9 ಮಂದಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನಟ ದರ್ಶನ್ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದರು. ಇದಲ್ಲದೆ ಕೆಟ್ಟದಾಗಿ ಮೆಸೇಜ್ ಕಳಿಸುತ್ತಿದ್ದರು ಎನ್ನಲಾಗಿದೆ. Top of Form
ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಗೆಳೆಯರು ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಜೂ.8 ರಂದು ರಾತ್ರಿ ಕಾಮಾಕ್ಷಿಪಾಳ್ಯದಲ್ಲಿರುವ ವಿನಯ್ ಎನ್ನುವವರ ಶೆಡ್‌ಗೆ ಕರೆತಂದು ಬಲವಾದ ಆಯುಧದಿಂದ ರೇಣುಕಾ ಸ್ವಾಮಿಗೆ ಹೊಡೆದು ಕೊಲೆ ಮಾಡಿದ್ದು, ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು. ಘಟನೆ ಸಂದರ್ಭದಲ್ಲಿ ದರ್ಶನ್ ಅವರು ಸ್ಥಳದಲ್ಲೇ ಇದ್ದರು ಎಂದು ಆರೋಪಿಸಲಾಗಿದೆ.
ದರ್ಶನ್ ಸೇರಿದಂತೆ ನಾಲ್ವರು ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತದೇಹ ಪತ್ತೆಯಾದಾಗ, ಇದೊಂದು ಆತ್ಮಹತ್ಯೆ ಪ್ರಕರಣ ಎನ್ನಲಾಗಿತ್ತು. ಆದರೆ, ತನಿಖೆಯ ಬಳಿಕ ಕೊಲೆ ಮಾಡಲಾಗಿದೆ ಎಂಬುದು ಬೆಳಕೆಗೆ ಬಂದಿದೆ.
ಪ್ರಕರಣದಲ್ಲಿ ಮೂವರು ಮೊದಲು ಠಾಣೆಗೆ ಬಂದು ನಾವೇ ಕೊಲೆ ಮಾಡಿದ್ದೇವೆ. ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿ, ಕೊಲೆ ಮಾಡಿದ್ದೇವೆಂದು ಹೇಳಿಕೊಂಡಿದ್ದರು. ಆದರೆ, ಪೊಲೀಸರಿಗೆ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಳಿಕ, ಘಟನೆ ಹಿಂದಿನ ಕಾರಣ ಗೊತ್ತಾಗಿದೆ ಎಂದು ಹೇಳಲಾಗಿದೆ.
ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ ರೇಣುಕಾಸ್ವಾಮಿ ಪೋಷಕರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎನ್ನಲಾಗಿದೆ. ವಿಜಯನಗರ ಎಸಿಪಿ ಚಂದನ್ ತಂಡದಿಂದ ದರ್ಶನ್ ವಶಕ್ಕೆ ಪಡೆಯಲಾಗಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸ್ನೇಹಿತೆ ಪವಿತ್ರ ಗೌಡ ಅವರನ್ನು ಆರ್.ಆರ್.ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.