ಶಿವಮೊಗ್ಗ : ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ನನ್ನು ಪೊಲೀಸರು, ಗುಂಟು ಹಾರಿಸಿ ವಶಕ್ಕೆ ಪಡೆದ ಘಟನೆ ನಡೆದಿದೆ.
ಭವಿತ್ ಎಂಬ 26 ವರ್ಷದ ರೌಡಿ ಶೀಟರ್ ಗುಂಡೇಟು ತಿಂದು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಪತ್ತೆಗೆ ಬಲೆ ಬೀಸಿದ್ದ ಜಯನಗರ ಪೊಲೀಸರಿಗೆ ಸೋಮವಾರ ಸಿಕ್ಕ ಖಚಿತ ಮಾಹಿತಿ ಮೇರೆಗೆ ಬಸವನ ಗಂಗೂರು ಚಾನಲ್ ಬಳಿ ಆತನನ್ನು ವಶಕ್ಕೆ ಪಡೆಯಲು ತೆರೆಳಿದ್ದರು.
ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ರೌಡಿ ಶೀಟರ್ ಭವಿತ್, ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಒಂದು ಹಂತದಲ್ಲಿ ಆತನನ್ನು ಹಿಡಿಯಲು ಹೋಗಿದ್ದ ಜಯನಗರ ಪಿಎಸ್ಐ ಸುನೀಲ್ ನ ಮೇಲೆ ದಾಳಿ ನಡೆಸಿದ್ದ. ಈ ವೇಳೆ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿ ಶೀಟರ್ ಭವಿತ್ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ.
ನಗರದ ರೈಲ್ವೇ ಕ್ವಾಟರ್ಸ್ ಏರಿಯಾದ ಭವಿತ್ ನಗರದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಆತನ ಮೇಲೆ ಸುಮಾರು 7 ವಿವಿಧ ಆರೋಪಗಳಿವೆ. ಕೊಲೆ, ಕೊಲೆಗೆ ಯತ್ನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಆತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ತೆರೆಯಲಾಗಿದೆ.ಪೊಲೀಸರು ಮಾತ್ರವಲ್ಲದೆ, ನ್ಯಾಯಾಲಯದ ಕಲಾಪಗಳಿಗೂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇದೇ ಕಾರಣಕ್ಕೆ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದರು. ಸದ್ಯಕ್ಕೆ ಆತನನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.