ಶಿವಮೊಗ್ಗ : ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಮತ್ತೆ ಅಬ್ಬರಿಸುವ ನಿರೀಕ್ಷೆಗಳಿವೆ. ಶನಿವಾರ ಬೆಳಗಿನ ಜಾವ ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಕಾರವಾದ ಮಳೆ ಸುರಿದಿದೆ. ಮತ್ತೆ ಬೆಳಗಿನಿಂದಲೇ ಆಗಸದಲ್ಲಿ ಮಳೆ ಮೋಡಗಳು ಕಪ್ಪಿಟ್ಟು, ಭಾರೀ ಮಳೆ ಸುರಿಯವ ನಿರೀಕ್ಷೆ ದಟ್ಟವಾಗಿತ್ತಾದರೂ, ತುಂತುರು ಹನಿಯ ನಡುವೆ ದಿನವೀಡಿ ಮೋಡ ಮುಸುಕು ವಾತಾವರಣ ಕವಿದು, ದಟ್ಟ ಮಳೆಗಾಲ ನೆನಪಿಸಿತು.
ಬೆಳಗ್ಗೆಯಿಂದಲೇ ಸೂರ್ಯನ ದರ್ಶನವೇ ಕಾಣದಂತೆ ಮೋಡ ಕವಿದುಕೊಂಡು, ಆಗಲೋ, ಈಗಲೋ ಮಳೆ ಬಂದೇ ಬಿಡುವ ವಾತಾವರಣ ನಿರ್ಮಾಣವಾಗಿತ್ತು. ಬಹುಕಾಲ ಬೇಸಿಗೆಯ ಬಿರು ಬಿಸಿಲಿನಿಂದ ಬೆಂದ ಜೀವಗಳಿಗೆ ಶನಿವಾರದ ಚಳಿಯ ವಾತಾವರಣ ಹಿತಾನುಭವ ನೀಡಿತು. ಬೆಳಗ್ಗೆಯೇ ಕೆಲಸ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದವರಿಗೆ ತುಂತುರು ಮಳೆ ಕಿರಿಕಿರಿ ಉಂಟು ಮಾಡಿತ್ತಾದರೂ,ಕಚೇರಿ ತಲುಪಿ ಕೆಲಸ ಮಾಡುವವರಿಗೆ ಮೋಡ ಕವಿದ ವಾತಾವರಣ ಆಯಾಸವೇ ಇಲ್ಲದಂತೆ ದಿನವೀಡಿ ಕುಳಿತು ಕೆಲಸ ಮಾಡುವ ಹವಾಗುಣ ಸೃಷ್ಟಿಸಿತು.
ಇನ್ನು, ಹೆಚ್ಚು ಕಡಿಮೆ ಒಂದು ವಾರದಿಂದಲೇ ಜಿಲ್ಲಾದ್ಯಂತ ಹದವರಿತ ಮಳೆ ಸುರಿಯುತ್ತಿದೆ. ಮೇ ೨೩ ರ ಗುರುವಾರ ಸಂಜೆಯಂತೂ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿತ್ತು. ಕಳೆದ ಸೋಮವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದ ಶಿವಮೊಗ್ಗ ನಗರದ ತೋಯ್ದ ತೊಪ್ಪೆಯಾಗಿತ್ತು. ಈಗ ಮತ್ತೆ ಶನಿವಾರ ಬೆಳಗಿನ ಜಾವವೂ ಅಧಿಕ ಪ್ರಮಾಣದ ಮಳೆ ಸುರಿದಿದೆ.
ಕಳೆದ ವರ್ಷದ ಮುಂಗಾರು ಮಳೆ ತೀವ್ರ ಕೊರತೆಯಾಯಿತು.ಮುಂಗಾರು ಚನ್ನಾಗಿಯೇ ಬರುವ ನಿರೀಕ್ಷೆ ಇತ್ತಾದರೂ ಮಳೆರಾಯ ಒಂದುಹಂಗಾಮಿಗೆ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟ ಬಿಟ್ಟ. ಆತನ ಮುನಿಸಿನ ಪರಿಣಾಮ ರೈತರಿಗೆ ಬೆಳೆಯೂ ಸಿಗಲಿಲ್ಲ, ಅಷ್ಟು ಮಾತ್ರವಲ್ಲದೆ ಪ್ರಸ್ತುತ ಬೇಸಿಗೆ ವೇಳೆ ಕಂಡು ಬಂದ ತೀವ್ರ ಪ್ರಮಾಣದ ಬಿಸಿಲಿನ ಪ್ರಖರತೆಯಿಂದ ಒಣಗಿ ಬಿರುಕು ಬಿಟ್ಟಿದ್ದವು. ಅಂತಹ ಕರೆ ಕಟ್ಟೆಗಳಿಗೆ ಈಗ ಜೀವ ಕಳೆ ಬಂದಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು, ಜನ ಜಾನುವಾರುಗಳಿಗೂ ನೀರಿನ ಸೌಕರ್ಯ ಲಭ್ಯವಾಗಿದೆ.