ಕೈ ತೋಟದ ಕೈಗೆಟುಕುವ ತರಕಾರಿ

ಕೈ ತೋಟದ ಕೈಗೆಟುಕುವ ತರಕಾರಿ

ಕೈತೋಟ
ತರಕಾರಿಗಳು ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನವನ್ನು ಪಡೆದಿವೆ. ಅದೂ ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ. ತರಕಾರಿಗಳು ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರ ಅಲ್ಲ ಆಹಾರಕ್ಕೆ ರುಚಿಯನ್ನುಕೊಡುತ್ತವೆ. ಆಹಾರತಜ್ಞರ ಪ್ರಕಾರ ಸಮತೋಲನ ಆಹಾರದಲ್ಲಿ, ಪ್ರತಿ ವಯಸ್ಕನೂ ೮೫ಗ್ರಾಂ ಹಣ್ಣುಗಳನ್ನು ಮತ್ತು 300 ಗ್ರಾಂ ತರಕಾರಿಯನ್ನೂ ದಿನವೂ ಸೇವಿಸಲೇ ಬೇಕು. ಅದರೆ ನಮ್ಮದೇಶದ ಸಧ್ಯದ ತರಕಾರಿ ಉತ್ಪಾದನೆಯಿಂದ ದಿನ ಒಂದಕ್ಕೆ ತಲಾ 120 ಗ್ರಾಂ ತರಕಾರಿ ಮಾತ್ರ ಒದಗಿಸಬಹುದು.
ಮೇಲೆ ಇರುವ ವಾಸ್ತವಾಂಶಗಳನ್ನು ಗಮನಿಸಿ ನಮಗೆ ಬೇಕಾದ ತರಕಾರಿಯನ್ನು ನಮ್ಮ ಹಿತ್ತಲಿನಲ್ಲಿಯೇ ಬೆಳೆಯವುದು ಉತ್ತಮ ಇದಕ್ಕೆ ಲಭ್ಯವಿರುವ ಸಿಹಿ ನೀರಿನ ಜತೆ ವ್ಯರ್ಥವಾಗುವ ಅಡುಗೆಮನೆ ಮತ್ತು ಬಚ್ಚಲಿನ ನೀರನ್ನು ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದಾದ ನಿಂತ ನೀರನ್ನು ಸೂಕ್ತವಾಗಿ ಬಳಸುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ. ಜತೆಗೆ ನಮಗೆ ಬೇಕಾದ ತರಕಾರಿಯನ್ನು ನಾವೇ ಬೆಳೆಯ ಬಹುದು. ಕೃಷಿಯು ಬಹುಸಣ್ಣ ಪ್ರಮಾಣದಲ್ಲಾಗುವುದರಿಂದ ಕೀಟ ಮತ್ತು ರೋಗ ಬಾಧೆಯನ್ನು ತಡೆಯುವುದು ಸುಲಭ. ರೋಗ ಪೀಡಿತ ಭಾಗವನ್ನು ತೆಗೆದುಹಾಕಬಹುದು ಮತ್ತು ರಾಸಾಯನಿಕಗಳ ಬಳಕೆ ಮಾಡದೆ ಇರುವುದರಿಂದ ಕೀಟನಾಶಕ ಮತ್ತು ರಾಸಾಯನಿಕಗಳು ನಮ್ಮದೇಹವನ್ನು ತರಕಾರಿಗಳ ಮೂಲಕ ಸೇರುವುದು ತಪ್ಪುತ್ತದೆ..

ಕೈತೋಟಕ್ಕೊಂದು ಸ್ಥಳ
ಇಂದು ಕೈತೋಟ ಮಾಡಲು ಮನೆಯ ಮುಂದೆ ಅಥವಾ ಹಿತ್ತಲು ಎನ್ನುವಂತಿಲ್ಲ, ಏಕೆಂದರೆ ನಗರಗಳು ಬೆಳೆಯುತ್ತಿದ್ದಂತೆ, ನಾಗರೀಕತೆ ಬೆಳೆದಂತೆ ಕೈತೋಟಗಳ ಜಾಗಗಳೆಲ್ಲಾ ಪಾರ್ಕಿಂಗ್ ಲಾಟ್‌ಗಳಾಗಿವೆ. ಹೀಗಾಗಿ ಅತ್ಯಂತ ಸೂಕ್ತ ಸ್ಥಳ ಎಂದರೆ ಮನೆಯ ಛಾವಣಿ. ರೂಫ್ ಟಾಪ್ ಗಾರ್ಡನಿಂಗ್ ಈಗ ಒಂದು ಹೊಸ ಟ್ರೆಂಡ್ ಕೂಡ. ನಿಮ್ಮ ಮನೆಯ ಸೂರಿನಲ್ಲಿ ನಿಮ್ಮ ಮನೆಗೆ ಬೇಕಾದ ತರಕಾರಿಯನ್ನು ನೀವೇ ಬೆಳೆಯಬಹುದು. ದೊಡ್ಡ ಕಾಂಕ್ರೀಟ್ ತೊಟ್ಟಿಯಂತಹ ಕುಂಡಗಳನ್ನು , ಪ್ಲಾಸ್ಟಿಕ್ ಚೀಲಗಳು, ಹಳೆಯ ಬಕೆಟ್‌ಗಳು ಹೀಗೆ ಹತ್ತು ಹಲವು ಪರಿಕರಗಳನ್ನು ಬಳಸಿ ಹಲವಾರು ತರಕಾರಿಗಳನ್ನು ಬೆಳೆಯಬಹುದು. 30 ರಿಂದ 40 ಸೆಂ.ಮೀ. ಆಳ ಅಗೆದು ನಾಟಿ ಮಾಡಲು ಅವಕಾಶವಿದ್ದರೆ ಸಾಕು. ತರಕಾರಿ ಬೆಳೆಯಬಹುದು ಮತ್ತು ಇದಕ್ಕೆ ಗೊಬ್ಬರವಾಗಿ ನಿಮ್ಮ ಮನೆಯ ಹಸಿತ್ಯಾಜ್ಯಗಳನ್ನು ಬಳಸಬಹುದು. ರಾಸಯನಿಕವಿಲ್ಲದೆ, ಸಾವಯವ ಪದ್ಧತಿಯಿಂದ ಅರೋಗ್ಯಕರ ತರಕಾರಿ ಮನೆಯಂಗಳದಲ್ಲೇ ಬೆಳೆಯುತ್ತದೆ ಜೊತೆಗೆ ಒತ್ತಡದ ಬದುಕಿನ ನಡುವೆ ಪ್ರಕೃತಿಯ ನಡುವೆ ಕಾಲ ಕಳೆಯುವ ಭಾಗ್ಯವೂ ನಿಮ್ಮದಾಗುತ್ತದೆ.

ಯಾವ ಕಾಲದಲ್ಲಿ ಯಾವ ತರಕಾರಿ


ತೋಟಗಾರಿಕೆಯಿಂದ ಆರ್ಥಿಕ ಲಾಭಗಳು
ತೋಟಗಾರರು ಮೊದಲು ತಮ್ಮ ಕುಟುಂಬಕ್ಕೆ ಬಳಸಿ ಉಳಿದುದನ್ನು ಇತರರಿಗೆ ಕೊಡುವರು, ವಿನಿಮಯ ಮಾಡಿಕೊಳ್ಳುವರು, ಮಾರುವರು. ಕೆಲವು ಸಂದರ್ಭಗಳಲ್ಲಿ ಹಣ ಸಂಪಾದನೆಯು ಕೈ ತೋಟದ ಮುಖ್ಯ ಉದ್ದೇಶವಾಗಬಹುದು. ಏನೇ ಆದರೂ ಆದಾಯವಿಲ್ಲದೆ ಬರಿ ಪೌಷ್ಟಿಕತೆಗಾಗಿ ಎಂದರೆ ಅದು ಅನುತ್ಪಾದಕ ಕೆಲಸವಾಗುವುದು. ಬಹಳ ಸಂದರ್ಭದಲ್ಲಿ ಅವುಗಳಿಗೆ ಪರಸ್ಪರ ಸಂಬಂಧವಿದೆ ಮತ್ತು ಹೊಂದಾಣಿಕೆ ಇದೆ.

ಕೈತೋಟದ ಅರ್ಥಿಕ ಲಾಭದ ಸಾಧ್ಯತೆಗಳು ಹೀಗಿವೆ :
ಈ ತೋಟಗಾರಿಕೆಯಿಂದ ದ್ವಿಗುಣ ಲಾಭ. ಆಹಾರ ಮತ್ತು ಆದಾಯ ಹೆಚ್ಚಳವಾಗುವುದು. ಇದು ಸಾಕುಪ್ರಾಣಿಗಳಿಗೆ ಮೇವನ್ನು ಒದಗಿಸುವುದು. ಮನೆಯ ಇತರ ಅಗತ್ಯಗಳನ್ನು ಪೂರೈಸುವುದು. ಕರಕುಶಲ ವಸ್ತುಗಳು, ಉರುವಲು ಕಟ್ಟಿಗೆ, ಪೀಠೋಪಕರಣಗಳು, ಬುಟ್ಟಿಗಳು ಇತ್ಯಾದಿ. ಕೈತೋಟದ ಉತ್ಪನ್ನಗಳನ್ನು ಮತ್ತು ಪ್ರಾಣಿಗಳ ಮಾರಾಟವು ಮಹಿಳೆಯರಿಗೆ ಇರುವ ಏಕಮೇವ ಸ್ವತಂತ್ರ ಆದಾಯವಾಗಿದೆ.