ಶಿವಮೊಗ್ಗ: ದರೋಡೆಗೆ ಸಂಚು ನಡೆಸಿದ್ದ ಪ್ರಕರಣದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವನಿಗೆ, 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶ ರಾಜ್ಯದ ಮೀರತ್ ನಿವಾಸಿ ಸಲ್ಮಾನ್ ಯಾನೆ ಲಲ್ಲಾ (24) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ 8 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 10 ದಿನಗಳ ಕಾಲ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಾಧೀಶರಾದ ಪಲ್ಲವಿ ಬಿ. ಆರ್. ಅವರು 13-06-2024 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ಓ. ಪುಷ್ಪಾ ಅವರು ವಾದ ಮಂಡಿಸಿದ್ದರು.
ಕಳೆದ ನಾಲ್ಕು ವರ್ಷಗಳ ಹಿಂದೆ ರಾತ್ರಿ ಶಿವಮೊಗ್ಗ ನಗರದ ವಿದ್ಯಾನಗರ ಮುಖ್ಯ ರಸ್ತೆಯ ಕಡೆಯಿಂದ ಮತ್ತೂರು ಕಡೆಗೆ ಹೋಗುವ ರಸ್ತೆಯ ಬಳಿ ಅಪರಿಚಿತ ವ್ಯಕ್ತಿಗಳು ಅಪಾಯಕರವಾದ ಆಯುಧಗಳನ್ನು ಹೊಂದಿ ರಸ್ತೆಯಲ್ಲಿ ಓಡಾಡುವ ಜನರಿಗೆ ಅಡ್ಡಗಟ್ಟಿ ಹಣ ಮತ್ತು ಒಡವೆ ಸುಲಿಗೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿರುವ ಮಾಹಿತಿ ಪಡೆದು ಕೋಟೆ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ್ ಟಿ ಪಿ, ಮತ್ತು ಸಿಬ್ಬಂಧಿಗಳ ತಂಡವು ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ಧ ಕೋಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0114/2020 ಕಲಂ 399, 402, ಐಪಿಸಿ ಮತ್ತು ಕಲಂ 25, 27 ಭಾರತೀಯ ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶಿವಾನಂದ ಕೋಳಿ ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.