ಶಿವಮೊಗ್ಗ : ನಗರದ ಕಂಟ್ರೀಕ್ಲಬ್ ರಸ್ತೆಯ ಕಾಮಗಾರಿ ಸಂಪೂರ್ಣ ಆವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಲಾಯಿತು.
ಬಿ.ಹೆಚ್. ರಸ್ತೆಯಿಂದ ಕಂಟ್ರೀಕ್ಲಬ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ೨.೫ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಆದರೆ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಪೂರ್ವಾಪರ ಯೋಚನೆ ಮಾಡದೇ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರಿದರು.
ಕಳೆದ ವರ್ಷವಷ್ಟೇ ಈ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪನವರ ಅನುದಾನದಲ್ಲಿ ಹೊಸದಾಗಿ ಕಾಂಕ್ರಿಟ್ ರಸ್ತೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ರಸ್ತೆಯಲ್ಲೇ ಇರುವಂತಹ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗಿತ್ತು. ಅಲ್ಲದೆ, ಚರಂಡಿ ಮತ್ತು ರಸ್ತೆಯನ್ನು ನಿರ್ಮಿಸುವಾಗ ವೈಜ್ಞಾನಿಕ ರೀತಿಯಲ್ಲಿ ಮಾಡಬೇಕಾಗಿತ್ತು. ಯಾವುದನ್ನೂ ಮಾಡದೇ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ದೂರಿದರು.
ಕೂಡಲೇ ರಸ್ತೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಕಳೆದ ವರ್ಷ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೂ ಸಹ ಒಂದೇ ವರ್ಷದ ಅವಧಿಯಲ್ಲಿ ಕಾಂಕ್ರಿಟ್ ರಸ್ತೆ ಮಾಡುತ್ತಿರುವ ಹಿನ್ನೆಲೆ ಏನು ಎಂಬುದನ್ನು ತಿಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯ ಕೆ.ವಿ. ವಸಂತ್‌ಕುಮಾರ್, ಅಶೋಕ್ ಯಾದವ್, ಸತೀಶ್‌ಕುಮಾರ್, ಅಶೋಕ್‌ಕುಮಾರ್, ಸುಬ್ರಹ್ಮಣ್ಯ, ಪರಿಸರ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.