ಶಿವಮೊಗ್ಗ: ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಉತ್ತಮ ವೇದಿಕೆಯಾಗಿದೆ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ಇಂದು ಎಬಿವಿಪಿಯ ಶಿವಮೊಗ್ಗ ನಗರ ಘಟಕವು ಆಯೋಜಿಸಿದ್ದ ಒಂದು ದಿನದ ನಗರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಬಿವಿಪಿಯು ಜ್ಞಾನ, ಶೀಲ ಮತ್ತು ಏಕತಾ ಧ್ಯೇಯವಾಕ್ಯದಡಿಯಲ್ಲಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘಟನೆಯಾಗಿರುವುದು ವಿಶೇಷವಾಗಿದೆ. ಇಂಥಹ ಸಂಘಟನೆಗಳು ಆಯೋಜಿಸುವ ಸಮ್ಮೇಳನ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಮಾಜಿಕ ಸೇವೆ ಮತ್ತು ವ್ಯಕ್ತಿತ್ವ ವಿಕಸನದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಪರಿಹಾರಕ್ಕೆ ಸಂಸ್ಥೆಗಳ ಮುಖ್ಯಸ್ಥರಿಗೆ, ಅಧ್ಯಾಪಕರಿಗೆ ಬಿಡುವಿರದ ಸಂದರ್ಭ ಎದುರಾಗಿದೆ ಎಂದ ಅವರು ವಿದ್ಯಾರ್ಥಿ ಸಂಘಟನೆಗಳ ಪ್ರಮುಖರ ಮಾರ್ಗದರ್ಶನ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಉದಾಹರಣೆಗೆ ಕುವೆಂಪು ವಿಶ್ವವಿದ್ಯಾಲಯದಿಂದಲೇ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಹಿಂದಿನ ಎರಡು ವರ್ಷಗಳ ಅಂಕ ಪಟ್ಟಿಗಳು ಇನ್ನೂ ಬಂದಿಲ್ಲ. ವೇಳಾ ಪಟ್ಟಿಯಲ್ಲೂ ಅನೇಕ ಗೊಂದಲಗಳಿವೆ. ಅನೇಕ ಕಡೆ ಹಾಸ್ಟೆಲ್ ಸಮಸ್ಯೆಗಳಿವೆ. ಶುಲ್ಕ ಸಂದಾಯ, ವಿದ್ಯಾರ್ಥಿ ವೇತನ ಬಟವಾಡೆಗಳಲ್ಲಿ ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಎಬಿವಿಪಿ ಮಾಡಬೇಕು ಎಂದು ಡಾ.ಹೆಗಡೆ ಸಲಹೆ ನೀಡಿದರು.
ಅನೇಕ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳು ಪ್ರಯತ್ನ ಮಾಡಲು ಮುಂದಾದರೂ ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರು ಸಹಕಾರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಸಲ್ಲ. ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಪರಿಹಾರ ಕಾರ್ಯಕ್ಕೆ ಮುಂದಾದರೆ ಸಹಕರಿಸಿ ಉತ್ತೇಜಿಸಬೇಕು ಎಂದು ಅವರು ಹೇಳಿದರು.
ಎಬಿವಿಪಿಯ ದಕ್ಷಿಣ ಮಧ್ಯ ಪ್ರಾಂತದ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಚಿರಗಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರವೀಣ ಎಚ್.ಕೆ. ಪ್ರಮುಖರಾದ ಧರಣಿ, ಅಭಿಷೇಕ್, ರಘುನಂದನ ಹೆಗಡೆ ಮೊದಲಾದವರಿದ್ದರು.