ಶಿವಮೊಗ್ಗ :ಹೋಂ ಕ್ವಾರನ್‍ಟೈನ್‍ನಲ್ಲಿರುವ ಕೋವಿಡ್ ವ್ಯಕ್ತಿಗಳು ಮನೆಯಿಂದ ಹೊರಗೆ ಬಾರದಂತೆ ನಿರ್ಬಂಧ ಹೇರಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಕೊರೋನಾ ಮಹಾಮಾರಿ 2ನೇ ಅಲೆಯು ದಟ್ಟವಾಗಿ ಹರಡುತ್ತಿದ್ದು, ಜನತೆ ತತ್ತರಿಸಿ ಹೋಗಿರುತ್ತಾರೆ. ನಮ್ಮ ಜಿಲ್ಲೆಯಲ್ಲೂ ಸಹ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದ್ದು, ಇಂತಹ ಲಾಕ್‍ಡೌನ್ ಸಂದರ್ಭದಲ್ಲೂ ಸಹ ಹೋಂ ಕ್ವಾರನ್‍ಟೈನಲ್ಲಿ ಇರುವರು ಎಗ್ಗಿಲ್ಲದೆ ಓಡಾಡುತ್ತಿದ್ದು, ಜನರ ಸಂಪರ್ಕದಲ್ಲಿ ಬರುತ್ತಿರುವುದರಿಂದ ಕೋವಿಡ್ ಜಾಸ್ತಿ ಆಗುವ ಆತಂಕ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ, ಕೋವಿಡ್ ವ್ಯಕ್ತಿಗಳ ಮನೆಗಳ ಮೇಲೆ ತೀವ್ರ ನಿಗಾ ಇಡುವುದರ ಜೊತೆಗೆ ಸಿಲ್‍ಡೌನ್ ಮಾಡಲಾಗುತ್ತಿತ್ತು. ಅಲ್ಲಿಗೆ ಜನಗಳು ಸಂಪರ್ಕದಲ್ಲಿ ಯಾರು ಬರುತ್ತಿರಲಿಲ್ಲ. ಆದರೆ ಈ ಬಾರಿ ಯಾವ ಯಾವ ಭಾಗದಲ್ಲಿ ಹೋಂ ಐಸೋಲೇಷನ್ ಮನೆಗಳ ಹತ್ತಿರ ಜಾಗೃತಿ ಮೂಡಿಸದೇ ಇದ್ದುದರಿಂದ ಅಕ್ಕ-ಪಕ್ಕ ಮನೆಗಳಿಗೆ ಕೋವಿಡ್ ರೋಗಿಗಳು ಇದ್ದಾರೆಂಬ ಮಾಹಿತಿ ಸಿಗುತ್ತಿಲ್ಲ ಎಂದಿದ್ದಾರೆ.
ಆದ್ದರಿಂದ ಕೂಡಲೇ ಆ ಭಾಗದ ಸ್ಥಳೀಯ ಸಂಸ್ಥೆಗಳು ಅಲ್ಲಿಯ ಅಧಿಕಾರಿಗಳೊಂದಿಗೆ ಮನೆಗಳ ಹತ್ತಿರ ಹೋಗಿ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಹೋಂ ಐಸೋಲೇಷನ್ ಆದ ಕೋವಿಡ್ ರೋಗಿಗಳ ಮೇಲೆ ತೀವ್ರ ನಿಗಾ ಇಟ್ಟು, ಹೊರಗೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.