ಶಿವಮೊಗ್ಗ : ನಗರದ ಗಾರ್ಡನ್ ಏರಿಯಾ ೩ನೇ ತಿರುವು ಹಾಗೂ ರಾಘ ವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ನಡೆದ ಡ್ರೇನೇಜ್ ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದ ೨೦೧೬ರ ಆಗಸ್ಟ್‌ನಲ್ಲಿ ಗಾರ್ಡನ್ ಏರಿಯಾ ೩ನೇ ತಿರುವಿನಲ್ಲಿ ನಗರೋತ್ಥಾನ ಪ್ಯಾಕೇಜ್ ನಂ.೨೬.೨ರಲ್ಲಿ ೫೦ ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದ್ದ ಡ್ರೈನೇಜ್ ಕಾಮಗಾರಿ ಕಳಪೆಯಾಗಿದೆ ಎಂದು ಒಕ್ಕೂಟ ದೂರು ದಾಖಲಿಸಿತ್ತು. ಇದಕ್ಕಿಂತ ಮೊದಲೇ ಈ ಕಾಮಗಾರಿಯಲ್ಲಿ ಬಳಸಿರುವ ಕಾಂಕ್ರೀಟ್ ಮತ್ತು ಮರಳು ಕಳಪೆಯಾಗಿದೆ ಎಂದು ಪಿಎಂಸಿ ಸಿವಿಲ್ ಟೆಕ್ನಾಲಜಿ(ಇಂಡಿಯಾ) ಪ್ರೈ,ಲಿ. ವರದಿ ಮಾಡಿದೆ ಎಂದು ಪಾಲಿಕೆ ಮಾಹಿತಿ ತಿಳಿಸಿದೆ. ಮತ್ತೆ ಒಕ್ಕೂಟ ದೂರು ನೀಡಿ ದಾಗ ಗಾರ್ಡನ್ ಏರಿಯಾ ೩ನೇ ತಿರುವಿನಲ್ಲಿ ಸುಮಾರು ೨೦೦ ಮೀಟರ್ ಕಾಮಗಾರಿ ಮುಗಿದು ನೆಹರೂ ರಸ್ತೆ ಕಡೆ ಕಾಮಗಾರಿ ನಡೆಯುತ್ತಿತ್ತು. ಇದಕ್ಕಿಂತ ಮೊದಲು ಈ ಪ್ಯಾಕೇಜ್‌ನಲ್ಲಿ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಡ್ರೈನೇಜ್ ಕಾಮಗಾರಿ ನಡೆಸಿರುವುದು ಕಳಪೆಯಾಗಿರುವುದು ಸಾಬೀತಾಗಿದೆ. ಆದ್ದರಿಂದ ಈ ಎರಡು ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ತನಿಖೆ ಪಾರದರ್ಶಕವಾಗಿರಬೇಕು. ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿಡಬೇಕು. ತನಿಖೆಗಳನ್ನು ಕಾಲಮಿತಿಯೊಳಗೆ ನಡೆಸಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿ ಹಣವನ್ನು ತಪ್ಪಿತಸ್ಥ ಅಧಿಕಾರಿಗಳು, ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಂದ ವಸೂಲಿ ಮಾಡಬೇಕು. ಈ ಕಾಮಗಾರಿ ಗುಣಮಟ್ಟ ಕಾಪಾಡಲು ವಿಫಲರಾದ ೩ನೇ ಪಾರ್ಟಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ ಕುಮಾರ್, ಸದಸ್ಯರಾದ ಡಾ.ಚಿಕ್ಕಸ್ವಾಮಿ, ರವಿಶಂಕರ್, ಸೀತಾರಾಂ, ಸುಬ್ಬಣ್ಣ, ಪರಿಸರ ರಮೇಶ್, ತಿಮ್ಮಪ್ಪ, ಕುಮಾರ್ ಇನ್ನಿತರರು ಹಾಜರಿದ್ದರು.