ಶಿವಮೊಗ್ಗ : ರಾಜ್ಯ ಸರ್ಕಾರದ ಸಚಿವರುಗಳಾದ ಕೆ.ಜೆ.ಜಾರ್ಜ್ ಮತ್ತು ವಿನಯ್ ಕುಲಕರ್ಣಿಯವರ ರಾಜೀನಾಮೆಗೆ ಒತ್ತಾಯಿಸಿ ಇಂದು ಬಿಜೆಪಿ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಯಾವುದೇ ಕ್ರಮಕ್ಕೂ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಡಿವೈಎಸ್‌ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಆದರೂ ಸಹ ಜಾರ್ಜ್‌ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಸಚಿವ ಸ್ಥಾನದಲ್ಲಿ ಮುಂದುವರಿದಿರುವುದು ಅತ್ಯಂತ ದುರಾದೃಷ್ಟಕರ ಎಂದು ಹೇಳಿದರು.
ಧಾರವಾಡ ಜಿ.ಪಂ. ಸದಸ್ಯ ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಕೊಲೆಗಡುಕರ ರಕ್ಷಣೆ ಮಾಡುತ್ತಿರುವ ವಿನಯ್ ಕುಲಕರ್ಣಿಯವರು ಸಹ ಇದುವರೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅವರು ಹಂತಕರ ರಕ್ಷಣೆಗೆ ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ಅಲ್ಲದೆ, ಯೋಗೀಶ್‌ಗೌಡ ಕುಟುಂಬದ ಪರ ಇರುವ ವಕೀಲ ಆನಂದ್‌ರವರಿಗೆ ಬೆದರಿಕೆ ಹಾಕಿದ ಧ್ವನಿ ಸುರಳಿಯೂ ಸಹ ಎಲ್ಲೆಡೆ ಪ್ರಚಾರದಲ್ಲಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ವಿನಯ್‌ಕುಲಕರ್ಣಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯಪಾಲರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಈ ಇಬ್ಬರು ಸಚಿವರುಗಳು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆಯನೂರು ಮಂಜುನಾಥ್, ಭಾನುಪ್ರಕಾಶ್, ಗಿರೀಶ್‌ಪಟೇಲ್, ವಿಶ್ವಾಸ್, ಮಧುಸೂದನ್, ಋಷಿಕೇಶ್‌ಪೈ ಮೊದಲಾದವರಿದ್ದರು.
ಎಸ್. ರುದ್ರೇಗೌಡ : ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ, ಸಚಿವ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಹಂತಕರ ರಕ್ಷಣೆಗೆ ಮುಂದಾಗಿದ್ದಾರೆ. ಅಲ್ಲದೆ, ಯೋಗೀಶ್‌ಗೌಡ ಪರ ವಕೀಲರಿಗೆ ಬೆದರಿಕೆ ಹಾಕಿದ್ದು, ಕೂಡಲೇ ಇವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯ ಮಂತ್ರಿಗಳೇ ಇವರುಗಳನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು.
ಕೆ.ಎಸ್. ಈಶ್ವರಪ್ಪ : ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ್ ಪಾಟೀಲ್ (ಚಂಪಾ) ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನುಡಿಗಳನ್ನಾಡದೇ, ಮುಖ್ಯಮಂತ್ರಿಗಳನ್ನು ಓಲೈಸುವಂತಹ ಮಾತನಾಡಿದ್ದಾರೆ. ಇದು ಕನ್ನಡ ನಾಡಿಗೆ ಮತ್ತು ಸಾಹಿತ್ಯ ಲೋಕಕ್ಕೆ ಮಾಡಿದ ಅಪಚಾರ. ಚಂಪಾ ಅವರು, ಮುಖ್ಯಮಂತ್ರಿಗಳ ಚಮಚ ಆಗಿದ್ದಾರೆ. ಇಂತಹ ಚಮಚ ಸಾಹಿತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ನ್ನು ನಿರೀಕ್ಷಿಸಿಯೇ ಮುಖ್ಯಮಂತ್ರಿಗಳನ್ನು ಓಲೈಸುವಂತಹ ಮಾತುಗಳನ್ನಾಡಿದ್ದಾರೆ. ಕೂಡಲೇ ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು.