ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುವುದನ್ನು ಕೈಬಿಡಿ : ಜಿಲ್ಲಾಡಳಿತಕ್ಕೆ ಕೃಷಿ ಅಧಿಕಾರಿಗಳ ಮನವಿ

ಶಿವಮೊಗ್ಗ : ಕೃಷಿ ಇಲಾಖೆಯಲ್ಲಿರುವ ಸಹಾಯಕ ಕೃಷಿ ಅಧಿಕಾರಿಗಳನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದು, ಇದರಿಂದಾಗಿ ಇಲಾಖೆಯ ಕೆಲಸಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಅನ್ಯ ಕೆಲಸಕ್ಕೆ ಬಳಸಿಕೊಳ್ಳುವುದನ್ನು ಕೈಬಿಡಬೇಕೆಂದು ಒತ್ತಾಯಿಸಿ ಸಹಾಯಕ ಕೃಷಿ ಅಧಿಕಾರಿಗಳ ಸಂಘದ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಸಹಾಯಕ ಕೃಷಿ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ ಕೃಷಿ ಭಾಗ್ಯ, ಮಣ್ಣು ಆರೋಗ್ಯ ಅಭಿಯಾನ, ಯಂತ್ರಧಾರೆ, ಪ್ರಧಾನಮಂತ್ರಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಸೇರಿದಂತೆ ಹಲವು ಯೋಜನೆಗಳ ಕಾರ್ಯ ಒತ್ತಡ ಆನುಭವಿಸುತ್ತಿದ್ದೇವೆ. ಇದರ ಜೊತೆಗೆ ಮೊಬೈಲ್ ಆಧಾರಿತ ಬೆಳೆ ಕಟಾವು ಪ್ರಯೋಗ ಗಳನ್ನು ಕಳೆದ ಸಾಲಿನಿಂದ ನಡೆಸುತ್ತಿದ್ದೇವೆ ಎಂದು ಹೇಳಿದರು.
ಒಬ್ಬ ಕೃಷಿ ಅಧಿಕಾರಿಗೆ ಸುಮಾರು ೫ ರಿಂದ ೧೦ ಪ್ರಯೋಗಗಳು ಹಂಚಿಕೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಈ ಪ್ರಯೋಗ ಗಳನ್ನು ಕೈಗೊಳ್ಳಲು ೨೦ ರಿಂದ ೩೦ ದಿನಗಳು ಬೇಕಾಗುತ್ತದೆ. ಬೆಳೆ ಕಟಾವು ಸಮಯದಲ್ಲಿ ಸಹಾಯಕ ಕೃಷಿ ಅಧಿಕಾರಿಗಳು ಪ್ರತಿದಿನ ರೈತರನ್ನು ಸಂಪರ್ಕಿಸಿ ಕಟಾವು ಪ್ರಯೋಗ ಗಳನ್ನು ಕೈಗೊಳ್ಳಬೇಕಾಗುತ್ತದೆ. ಅಲ್ಲದೆ, ಹೋಬಳಿ ಮಟ್ಟದಲ್ಲಿ ರೈತರೊಂದಿಗೆ ಸಂಪರ್ಕ ವಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ. ಈ ನಡುವೆ ಹೊಸದಾಗಿ ಮೊಬೈಲ್ ತಂತ್ರಾಂಶ ಆಧಾರಿತ ಬೆಳೆ ಸರ್ವೆ ಕಾರ್ಯಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಿದ್ದು, ಇದರಿಂದಾಗಿ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗುವುದ ರೊಂದಿಗೆ ಇಲಾಖಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಇಲಾಖೆಯಲ್ಲಿ ಈಗಾಗಲೇ ಸಿಬ್ಬಂದಿ ಕೊರತೆ ಇದೆ. ಇದರ ನಡುವೆಯೂ ಕೂಡಾ ನಮ್ಮ ಮೂಲ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ. ಇದೀಗ ಮೊಬೈಲ್ ತಂತ್ರಾಂಶ ಆಧಾರಿತ ಬೆಳೆ ಸರ್ವೆ ಕಾರ್ಯ ವನ್ನು ನಮಗೆ ನೀಡಿರುವುದು ತೊಂದರೆಯಾ ಗುತ್ತಿದ್ದು, ಕೂಡಲೇ ಸಹಾಯಕ ಕೃಷಿ ಅಧಿಕಾರಿ ಗಳನ್ನು ಈ ಕಾರ್ಯದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಚಂದ್ರಶೇಖರ್, ನಾಗಪ್ಪ, ತಿಪ್ಪೇಸ್ವಾಮಿ, ವಿಜಯ್‌ಕುಮಾರ್ ಮೊದಲಾದವರಿದ್ದರು.