ಯಶಸ್ವಿನಿ ಯೋಜನೆ ಮುಂದುವರಿಸಿ ಬಿಜೆಪಿ ರೈತ ಮೋರ್ಚಾದಿಂದ ಮನವಿ

ಶಿವಮೊಗ್ಗ: ಯಶಸ್ವಿನಿ ಯೋಜನೆ ಮುಂದುವರೆಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಜಿಲ್ಲಾಡ ಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಗ್ರಾಮೀಣ ಪ್ರದೇಶ ದಲ್ಲಿನ ರೈತರು ಹಾಗೂ ನಗರ ಪ್ರದೇ ಶದ ಮಧ್ಯಮ ವರ್ಗದ ಜನತೆಗೆ ಆಶಾಕಿರಣ ವಾಗಿದ್ದ ಯಶಸ್ವಿನಿ ಯೋಜನೆಯನ್ನು ರದ್ದುಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆ ಯನ್ನು ಜಾರಿಗೆ ತರಲು ಈ ಹಿಂದಿನ ಸರ್ಕಾರ ಪ್ರಯತ್ನ ನಡೆಸಿತ್ತು. ನೂತನ ಆರೋಗ್ಯ ಕರ್ನಾಟಕ ಯೋಜನೆ ಯಲ್ಲಿ ಅರ್ಹ ಫಲಾನುಭವಿಗಳು ತಮ್ಮ ಚಿಕಿತ್ಸೆಗಾಗಿ ಮೊದಲು ಸರ್ಕಾರಿ ಆಸ್ಪತ್ರೆ ಗಳಲ್ಲೇ ಕಡ್ಡಾಯವಾಗಿ ಚಿಕಿತ್ಸೆಗೆ ದಾಖ ಲಾಗಿ ಅಲ್ಲಿ ಚಿಕಿತ್ಸೆ ದೊರೆಯದಿದ್ದ ಪಕ್ಷದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳು ಸೂಚಿಸಿದಲ್ಲಿ ಮಾತ್ರ ರೋಗಿಗಳು ಖಾಸಗಿ ಆಸ್ಪತ್ರೆ ಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕೆಂಬ ನಿಯಮ ಇರುವುದರಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಹೊಸದಾಗಿ ಜಾರಿಗೆ ತರಲಿರುವ ಆರೋಗ್ಯ ಕರ್ನಾಟಕ ಯೋಜನೆಗೆ ಆರೋಗ್ಯ ಹೆಲ್ತ್ ಕಾರ್ಡ್ ಪಡೆಯಲು ಸಮರ್ಪಕವಾದ ವ್ಯವಸ್ಥೆ ಇಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಕಾರ್ಡ್ ವಿತರಿಸಲಾಗುತ್ತಿದೆ. ಇದರಿಂದಾಗಿ ಜಿಲ್ಲೆಯ ದೂರದೂರದ ಭಾಗಗಳಿಂದ ಬರುವಂತಹ ರೋಗಿಗಳಿಗೆ ಈ ವ್ಯವಸ್ಥೆ ಅತ್ಯಂತ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಸುತ್ತೋಲೆಯಂತೆ ಮೇ ೩೧ರವರೆಗೆ ಮಾತ್ರ ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಚಿಕಿತ್ಸೆ ದೊರಕಲಿದೆ. ಜೂನ್ ೧ರಿಂದ ಯಶಸ್ವಿನಿ ಯೋಜನೆಯಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಿರುವುದಿಲ್ಲ. ಪರಿಣಾಮ ರಾಜ್ಯದ ಸಹಸ್ರಾರು ರೈತರು ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅನಾನುಕೂಲವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ತಕ್ಷಣ ಗಮನಹರಿಸಿ ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ಮುಂದುವರೆಸಬೇಕು. ನೂತನವಾಗಿ ಜಾರಿಗೊಳಿಸಿರುವ ಆರೋಗ್ಯ ಕರ್ನಾಟಕ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾಧ್ಯಕ್ಷ ಹೆಚ್.ಸಿ.ಬಸವರಾಜಪ್ಪ ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿ ಪ್ರಕಾಶ್, ಮಧುಸೂದನ್, ಬಿ.ಎಸ್.ನಾಗರಾಜ್, ಭವಾನಿರಾವ್ ಮೋರೆ ಮತ್ತಿತರರು ಉಪಸ್ಥಿತರಿದ್ದರು.